ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಪಂಚ ಗ್ಯಾರಂಟಿಗಳ ಘೋಷಣೆಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ರಾಜ್ಯ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎಡವಿರುವುದು ಮಾತ್ರವಲ್ಲದೆ, ರಾಜ್ಯದಲ್ಲಿಅ ಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗಿರುವುದು ಈಗಾಗಲೇ ಜಗಜ್ಜಾಹೀರಾಗಿದೆ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಟೀಕಿಸಿದ್ದಾರೆ.ಬಿಜೆಪಿ ಪಂಚ ಗ್ಯಾರಂಟಿಗಳ ಅನುಷ್ಠಾನದಲ್ಲಿ ಆಗಬಹುದಾದ ಬಾಧಕಗಳ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತೇ ವಿನಃ ಪಂಚ ಗ್ಯಾರಂಟಿಗಳನ್ನು ವಿರೋಧಿಸಿಲ್ಲ. ಇದೀಗ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಎಡವುತ್ತಿದೆ. ಸಂಪನ್ಮೂಲ ಹೊಂದಿಸಲು ಒದ್ದಾಡುತ್ತಿದ್ದರೂ ಅದಕ್ಕೊಂದು ಅನುಷ್ಠಾನ ಸಮಿತಿ ರಚಿಸಿ ಅದಕ್ಕೆ ತನ್ನ ಕಾರ್ಯಕರ್ತಗಳನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ನೇಮಿಸಿ ಅವರಿಗೆ ವೇತನ ನಿಗದಿ ಪಡಿಸಿ ಜನರ ತೆರಿಗೆಯ ಹಣ ಕಾಂಗ್ರೇಸ್ ಕಾರ್ಯಕರ್ತರ ಜೇಬಿನ ಪಾಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.ಈ ರೀತಿ ತೆರಿಗೆಯ ಹಣ ಪೋಲಾಗುತ್ತಿರುವುದನ್ನು ವಿಧಾನಸಭೆಯಲ್ಲಿ ಶಾಸನ ಬದ್ಧವಾಗಿ ಪ್ರಶ್ನಿಸಲಾಗಿತ್ತು. ಇದು ಒಬ್ಬ ಜವಾಬ್ದಾರಿಯುತ ಶಾಸಕನ ಕರ್ತವ್ಯ ಕೂಡ ಆಗಿದೆ. ಅಂಬೇಡ್ಕರ್ ರಚಿತ ಭಾರತದ ಸಂವಿಧಾನದ ಪ್ರಕಾರ ನಿಯಮಗಳ ಆಯ್ಕೆಗೊಂಡ ಶಾಸಕರ ಸ್ಥಾನಮಾನಗಳ ಬಗ್ಗೆ ಮಾನದಂಡ ಹಾಗೂ ಅವರಿಗಿರುವ ಅಧಿಕಾರಗಳ ಬಗ್ಗೆ ತಿಳಿ ಹೇಳಿದ್ದು, ಅದಕ್ಕೆ ಚ್ಯುತಿ ಬಂದಾಗ ಶಾಸನ ಸಭೆಯಲ್ಲಿ ಪ್ರಶ್ನಿಸುವುದು ಶಾಸಕನ ಹಕ್ಕು ಮತ್ತು ಕರ್ತವ್ಯ. ಕಾರ್ಕಳ ತಾಲೂಕಿನ ಕಾಂಗ್ರೆಸ್ ನಾಯಕರೆನೆಸಿಕೊಂಡವರು ಉಡುಪಿ ಜಿಲ್ಲಾ ಅನುಷ್ಠಾನ ಸಮಿತಿಯಲ್ಲೂ ಉಪಾಧ್ಯಕ್ಷರಾಗಿದ್ದುಕೊಂಡು ವೇತನ ಪಡೆಯುವುದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಕಾಂಗ್ರೆಸ್ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಅವರು ಸಲಹೆ ನೀಡಿದ್ದಾರೆ. ಕಾರ್ಕಳದಲ್ಲಿ ನಾಲ್ಕು ಬಾರಿ ಶಾಸಕ ಮತ್ತು ಎರಡು ಖಾತೆಗಳ ಮಂತ್ರಿಯಾಗಿ ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಸುನಿಲ್ ಕುಮಾರ್ ಅಭಿವೃದ್ಧಿಯ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಂದ ಪಾಠ ಕಲಿಯುವ ಅಗತ್ಯವಿಲ್ಲ. ಕಾರ್ಕಳದಲ್ಲಿ ಈಗಾಗಲೇ ಆರಂಭವಾಗಿರುವ ಐಟಿಐ, ಕಾಲೇಜು, ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಮಹಿಳಾ ನರ್ಸಿಂಗ್ ಕಾಲೇಜು ಯಾರ ಕಾಲದಲ್ಲಿಆ ಗಿರುತ್ತದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳುವುದು ಒಳಿತು ಎಂದಿದ್ದಾರೆ.
ಬರೀ ವಿರೋಧ ಮಾಡಲಿಕ್ಕಾಗಿಯೇ ವಿರೋಧ ಮಾಡುತ್ತಿರುವ ಮನಃಸ್ಥಿತಿಯಿಂದ ಹೊರಬಂದು ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ನಾಯಕರು ಕೈಜೋಡಿಸಲಿ. ಇಲ್ಲದ್ದಿದರೆ ಜನತೆಯೇ ನಿಮಗೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.