ಹಾನಿಗೊಳಗಾದ ಬೆಳೆ ಪರಿಶೀಲಿಸಿದ ಬಿಜೆಪಿ ಬೆಳೆ ಸಮಿಕ್ಷೆ ತಂಡ

| Published : Sep 14 2025, 01:05 AM IST

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ ಅಡಿಕೆ, ಶುಂಠಿ ಹಾಗೂ ಗೋವಿನ ಜೋಳ ಬಹುತೇಕ ಹಾನಿಗೊಳಗಾಗಿದೆ.

ಮುಂಡಗೋಡ: ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ ಅಡಿಕೆ, ಶುಂಠಿ ಹಾಗೂ ಗೋವಿನ ಜೋಳ ಬಹುತೇಕ ಹಾನಿಗೊಳಗಾಗಿದ್ದು, ಸ್ಥಳೀಯ ಶಾಸಕರು ರೈತರ ಪರವಾಗಿ ನಿಲ್ಲುವ ಬದಲು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮೀನುಗಾರಿಕಾ ಇಲಾಖೆಗೆ ಮಾತ್ರ ಸೀಮಿತವಾಗಿದ್ದಾರೆ. ರೈತರ ಗೋಳು ಕೇಳುವರಿಲ್ಲದಂತಾಗಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾಧ್ಯಕ್ಷ ರಮೇಶ ನಾಯ್ಕ ಆರೋಪಿಸಿದರು.

ಗುರುವಾರ ತಾಲೂಕಿನ ವಿವಿಧ ಪ್ರದೇಶಗಳಿಗೆ ಬಿಜೆಪಿ ಬೆಳೆ ಸಮಿಕ್ಷೆ ತಂಡದೊಂದಿಗೆ ತೆರಳಿ ಬೆಳೆ ಪರಿಶೀಲಿಸಿ ಬಳಿಕ ಪಟ್ಟಣದ ಪ್ರವಾಸಿ ಮಂದಿರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಘಟ್ಟದ ಮೇಲಿನ ತಾಲೂಕುಗಳಿಗೆ ಭೇಟಿ ನೀಡಿ ಇಲ್ಲಿಯ ಕುಂದು ಕೊರತೆ ಬಗ್ಗೆ ಆಲಿಸುತ್ತಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದರು.

ಮುಂಡಗೋಡ ತಾಲೂಕಿನ ಸುಮಾರು ೪೪೦೦ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗಿದೆ. ಇದರಲ್ಲಿ ಶೇ.೮೦ರಷ್ಟು ಅಡಿಕೆ ಬೆಳೆ ಹಾನಿಯಾದರೂ ಕೂಡ ಇಲಾಖೆ ಅಧಿಕಾರಿಗಳು ಇದುವರೆಗೂ ಹಾನಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸದೆ ಬೇಜವಾಬ್ದಾರಿತನ ಮೆರೆದಿದ್ದು, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಕ್ಷಣ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಕಣ್ಣು ತೆರೆಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್.ಟಿ.ಪಾಟೀಲ ಮಾತನಾಡಿ, ಮುಖ್ಯಮಂತ್ರಿಗಳು ರೈತರಿಗೆ ನೀಡುತ್ತಿರುವ ಪುಡಿಕಾಸು ಪರಿಹಾರ ಎಲ್ಲಿಯೂ ಸಾಲುವುದಿಲ್ಲ. ಭತ್ತ ಮತ್ತು ಗೋವಿನ ಜೋಳದ ನಂತರ ಈಗ ಇಲ್ಲಿಯ ರೈತರು ಅಡಕೆ ಬೆಳೆಗೆ ಒತ್ತು ನೀಡಿ ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಬೆಳೆದಿದ್ದು, ಬಹುತೇಕ ಬೆಳೆ ಹಾನಿಯಾಗಿದೆ. ಅಲ್ಲದೇ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನಗಳು ತಿರುಗಾಡದಂತಹ ಸ್ಥಿತಿಗೆ ತಲುಪಿವೆ. ಇದೆಲ್ಲದರ ಬಗ್ಗೆ ಪ್ರತಿಭಟನೆಯ ಮೂಲಕ ತೋರಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಅಗತ್ಯ ಯುರಿಯಾ ಗೊಬ್ಬರ ಉತ್ಪಾದನೆ ಮಾಡಿ ರಾಜ್ಯಕ್ಕೆ ಕಳುಹಿಸಿದರೆ ಅದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿಕೊಳ್ಳಲಾಯಿತು. ಈ ಬಗ್ಗೆ ತನಿಖೆ ನಡೆಸಲಿಲ್ಲ. ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಗೊಬ್ಬರ ಸಿಗಲಿಲ್ಲ. ಈಗ ಮಳೆ ಹೆಚ್ಚಾಗಿ ಬೆಳೆ ಹಾನಿಯಾಗಿದೆ. ಈಗಲೂ ಕೂಡ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ರೈತರಿಗೆ ಕನಿಷ್ಠ ಬೆಂಬಲ ನೀಡುತ್ತಿಲ್ಲ ಎಂದ ಅವರು, ರೈತರ ತಾಳ್ಮೆ ಪರೀಕ್ಷೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ಬಿಜೆಪಿ ಮಡಳಾಧ್ಯಕ್ಷ ಮಂಜುನಾಥ್ ಪಾಟೀಲ್, ಜಿಲ್ಲಾ ರೈತ ಮೋರ್ಚ ಉಪಾಧ್ಯಕ್ಷ ರಾಮಚಂದ್ರ ಜೈನ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಬೆಣ್ಣಿ, ವಿಠ್ಠಲ್ ಬಾಳಂಬೀಡ, ಭರತರಾಜ ಹದಳಗಿ, ರಾಜು ಸೋಮಣಕರ್, ದೇವೇಂದ್ರ ಕೆಂಚಗೊಣ್ಣನವರ, ಬಸಪ್ಪ ಗಲಿಬಿ, ಗಣೇಶ್ ಕೀರ್ತೆಪ್ಪನವರ, ಬಾಬಣ್ಣ ಅಣವೇಕರ್, ಮಂಜುನಾಥ್ ನಡಿಗೇರಿ, ಶಿವಪ್ಪ ಲಮಾಣ ಸೇರಿದಂತೆ ಹಲವು ರೈತ ಪ್ರಮುಖರು ಮತ್ತು ಮುಖಂಡರು ಪಾಲ್ಗೊಂಡಿದ್ದರು.