ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜಾ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

| Published : Aug 21 2024, 12:39 AM IST

ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜಾ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಐವಾನ್‌ ಡಿಸೋಜಾ ಅವರು ರಾಜ್ಯದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡುವ ಹೇಳಿಕೆ ನೀಡಿ ತಪ್ಪು ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರ ಜೊತೆಗೂಡಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ವಿರುದ್ಧ ಶಾಸಕ ಐವಾನ್ ಡಿಸೋಜಾ ಅವಹೇಳನಕಾರಿ ಮಾತನಾಡಿದ್ದಾರೆಂದು ಆರೋಪಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಐವಾನ್ ಡಿಸೋಜಾ ರಾಜ್ಯಪಾಲರ ಬಗ್ಗೆ ಬಾಯಿಗೆ ಬಂದಂತೆ ಹರಟಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಯುವ ಮೋರ್ಚಾ ಅಧ್ಯಕ್ಷ ಎಚ್‌.ಎಂ.ರಘುಗೌಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ನೀಡಿದರು.

ನಂತರ ಎಚ್‌.ಎಂ.ರಘುಗೌಡ ಮಾತನಾಡಿ, ಶಾಸಕರಾಗಿರುವ ಐವಾನ್‌ ಡಿಸೋಜಾ ಅವರು ಆ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ಮಾತನಾಡದೆ, ಸಾಂವಿಧಾನಿಕ ಹುದ್ದೆಯಲ್ಲಿರುವವರು ಕಾನೂನಾತ್ಮಕವಾಗಿ ನಡೆದುಕೊಂಡಾಗ ಬಾಂಗ್ಲಾದೇಶದ ಪ್ರಧಾನಿ ರೀತಿ ಕರ್ನಾಟಕದಿಂದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರ ವಿರುದ್ಧ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಎಐಸಿಸಿ ಕಾರ್ಯದರ್ಶಿ ಐವಾನ್‌ ಡಿಸೋಜಾ ಅವರು ಬಾಂಗ್ಲಾ ದೇಶದ ಪ್ರಧಾನ ಮಂತ್ರಿಯನ್ನು ಆ ರಾಷ್ಟ್ರದಿಂದ ಹೊರಹಾಕಿದಂತೆ ಕರ್ನಾಟಕದಿಂದ ರಾಜ್ಯಪಾಲರನ್ನು ಕಳುಹಿಸುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.

ಶಾಸಕ ಐವಾನ್‌ ಡಿಸೋಜಾ ಅವರು ರಾಜ್ಯದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡುವ ಹೇಳಿಕೆ ನೀಡಿ ತಪ್ಪು ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರ ಜೊತೆಗೂಡಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೊತೆಗೆ ಮಾಧ್ಯಮಗಳಲ್ಲಿಯೂ ಪ್ರಕಟವಾಗಿದೆ, ಬಾಂಗ್ಲಾ ದೇಶದಲ್ಲಿ ನಡೆದ ಹಿಂಸಾತ್ಮಕ ಘಟನೆ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಸೃಷ್ಟಿಯಾಗಲಿದೆ. ರಾಜ್ಯಪಾಲರನ್ನು ರಾಜ್ಯದಿಂದ ಹೊರಹಾಕುವುದಾಗಿ ರಾಷ್ಟ್ರ ವಿರೋಧಿ ಹೇಳಿಕೆ ನೀಡಿ ಕೆಲವರನ್ನು ಪ್ರಚೋದಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದರೆ ಅದಕ್ಕೆ ಶಾಸಕ ಐವಾನ್‌ ಡಿಸೋಜಾ ಅವರೇ ಕಾರಣ ಎಂದು ಆರೋಪಿಸಿದರು.

ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವ ರಾಜ್ಯಪಾಲರ ಹುದ್ದೆಗೆ ಹಾಗೂ ದಲಿತ ಸಮುದಾಯದ ವ್ಯಕ್ತಿಗೆ ಇಂತಹ ಹೇಳಿಕೆ ನೀಡಿರುವ ಐವಾನ್‌ ಡಿಸೋಜಾ ವಿರುದ್ಧ ಪ್ರಕರಣ ದಾಖಲಿಸಬೇಕು. ರಾಜ್ಯಪಾಲರು ಸರ್ಕಾರದ ಗುಲಾಮರೇನಲ್ಲ. ಸರ್ಕಾರ ಏನೇ ಮಾಡಿದರೂ ನೋಡಿಕೊಂಡು ಕೂರುವುದಕ್ಕೆ ರಾಜ್ಯಪಾಲ ಸ್ಥಾನದಲ್ಲಿ ಕೂರಿಸಿಲ್ಲ. ಭ್ರಷ್ಟಾಚಾರ ನಡೆಸಿರುವವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಂಜು, ಪ್ರದೀಪ್‌, ದಯಾಕರ್‌, ಮೋಹನ್‌, ನಾಗರಾಜು, ನಂದಿ, ಪ್ರಸನ್ನ, ಶಿವಕುಮಾರ್‌, ಚಂದ್ರು ಭಾಗವಹಿಸಿದ್ದರು.