ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ಅನುದಾನಕ್ಕೆ ಆಗ್ರಹಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ ಮಾತನಾಡಿ, ಹಿಂದುಳಿದ ವರ್ಗಗಳು ತಾವು ಪಡೆಯುತ್ತಿದ್ದ ಆರ್ಥಿಕ ನೆರವಿನಿಂದ ವಂಚಿತವಾಗುತ್ತಿವೆ. ಅರಿವು ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಿಗುವ ಆರ್ಥಿಕ ನೆರವು ಸಿಗುತ್ತಿಲ್ಲ. ಸಣ್ಣ ಹಿಡುವಳಿದಾರರಿಗೆ ಗಂಗಾ ಕಲ್ಯಾಣ ಯೋಜನೆ ಸಂಪೂರ್ಣ ನಿಂತುಹೋಗಿದೆ ಎಂದು ದೂರಿದರು.
ಅಹಿಂದ ಹೇಳಿದಂಥವರು ಹಿಂದುಳಿದ ವರ್ಗಗಳಿಗೆ ವಂಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಪರವಾಗಿರುವಂಥವರು ಎಂದು ಹೇಳಿಕೊಂಡವರು ಸಂಪೂರ್ಣ ಅವರು ಹೇಳಿದ್ದ ಮಾತನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಟೀಕಿಸಿದರು. ಹಿಂದುಳಿದ ವರ್ಗಗಳ ಧ್ವನಿಯಾಗಿ, ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತದ ಅನುಸಾರವಾಗಿ ಜನರ ಧ್ವನಿಯಾಗಿ ಹೋರಾಟ ಮಾಡುವ ನಿರ್ಣಯ ಅಂಗೀಕರಿಸಿದ್ದೇವೆ. ಇಡೀ ರಾಜ್ಯಾದ್ಯಂತ ಹಿಂದುಳಿದ ವರ್ಗದ ಆರ್ಥಿಕ, ಔದ್ಯೋಗಿಕ, ಅವರ ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟ ಅನುದಾನವನ್ನು ಸರ್ಕಾರ ಸ್ಥಗಿತ ಮಾಡಿದೆ ಎಂದು ಆರೋಪಿಸಿದರು.ಸರ್ಕಾರ ಹಿಂದುಳಿದವರಿಗೆ ಯಥೇಚ್ಛವಾಗಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅರ್ಜಿಗಳನ್ನು ಕರೆದು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಕಲ್ಯಾಣ ಕಾರ್ಯಕ್ಕೆ ಅವಕಾಶ ಮಾಡಿಕೊಡದಿದ್ದರೆ ಮುಂದಿನ ದಿನದಲ್ಲಿ ಹಿಂದುಳಿದ ವರ್ಗದ ಪರವಾಗಿ ಬೃಹತ್ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.ದೇವರಾಜ ಅರಸು ನಿಗಮ ಸೇರಿ ಎಲ್ಲ ಸಮುದಾಯದ ನಿಗಮಗಳಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಬಸವರಾಜ ಬೊಮ್ಮಾಯಿ ಒಂದು ಸಾವಿರ ಕೋಟಿ ಬಿಡುಗಡೆ ಮಾಡಿದ್ದರು. ಈಗಿನ ಸರ್ಕಾರ ನೆಪ ಮಾತ್ರಕ್ಕೆ ₹ 150 ಕೋಟಿ ಬಿಡುಗಡೆ ಮಾಡಿದೆ. ಹಿಂದುಳಿದ ಅಭಿವೃದ್ಧಿ ನಿಗಮಗಳ ಕಚೇರಿಗಳು ಖಾಲಿಯಾಗಿದ್ದು, ಎಲ್ಲ ನಿಗಮಗಳು ತುಕ್ಕು ಹಿಡಿಯುತ್ತಿವೆ ಎಂದು ದೂರಿದರು.
ಪದಾಧಿಕಾರಿಗಳಾದ ಚಿದಾನಂದ ಚಲವಾದಿ, ಮಂಜುನಾಥ್ ಮೀಸೆ, ರಾಜಕುಮಾರ್ ಸಗಾಯಿ, ರವಿ ನಾಯ್ಕೋಡಿ, ಶಿಲ್ಪ ಕುದರಗೊಂಡ, ಶಂಕರ್ ಹೂಗಾರ, ಸಪ್ನ ಕಣಮುಚ್ಚನಾಳ, ಮಲ್ಲಮ್ಮ ಜೋಗುರ, ಸದಾಶಿವ ಬುಟ್ಟಾಳೆ, ಸುಭಾಷ ಬಿಸೇ, ಚಿನ್ನು ಚಿನಗುಂಡಿ, ರಾಹುಲ್ ಔರಂಗಬಾದ್, ಹನುಮಂತರಾಯ ಗುಡದಿನ್ನಿ, ವಿನೋದ್, ಮಲ್ಲು ಸೇಬಗೂಂಡ, ರೋಹಿತ್ ಸಿಂಧೆ, ಆನಂದ ಚೌದ್ರಿ, ಭರತ್ ಕೋಳಿ, ಪಾಪು ಸಿಂಗ್ ರಜಪೂತ ಮುಂತಾದವರು ಉಪಸ್ಥಿತರಿದ್ದರು.