ಸಾರಾಂಶ
ಧಾರವಾಡ:
ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಹಾಗೂ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಹಾಗೂ ಗ್ರಾಮಾಂತರ ಘಟಕದ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಗುತ್ತಿಗೆದಾರ ಸಚಿನ ಅತ್ಯಹತ್ಯೆ ಆರೋಪ ಕೇಳಿ ಬಂದರೂ ಮುಖ್ಯಮಂತ್ರಿ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಜನರ ಮೇಲೆ ಹೊರೆಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೂಡಲೇ ಮುಖ್ಯಮಂತ್ರಿಗಳು ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು. ಪ್ರಕರಣದ ತನಿಖೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಹೆಚ್ಚಳ ಮಾಡಿರುವ ಸಾರಿಗೆ ಬಸ್ ಪ್ರಯಾಣ ದರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯ ಸರ್ಕಾರ ಜನರಲ್ಲಿ ಭಯದ ವಾತಾವರಣ ಹುಟ್ಟುಹಾಕಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರ ಜೀವಕ್ಕೆ ಗ್ಯಾರಂಟಿ ಇಲ್ಲದಂತೆ ಆಗಿದೆ. ವಿದ್ಯುತ್ ದರ, ಹಾಲಿನ ದರ, ಬಸ್ ಪ್ರಯಾಣ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಚಿನ ಪಾಂಚಾಳ ಡೆತ್ ನೋಟ್ ಬರೆದು ಇಟ್ಟಿದ್ದಾರೆ. ಈ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ರಾಜ್ಯ ಸರ್ಕಾರ ಸುಳ್ಳು ಭಾಗ್ಯಗಳ ಸರಮಾಲೆಯಲ್ಲಿ ಬೆಲೆ ಏರಿಕೆ ಪೆಟ್ಟು ನೀಡಿ, ಜನರ ಬಾಳು ದುಸ್ತರ ಮಾಡಿದೆ. ಕೂಡಲೇ ಬೆಲೆ ಏರಿಕೆ ವಾಪಸ್ ಪಡೆಯಬೇಕು ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಜ್ಯೋತಿ ಪಾಟೀಲ್, ದತ್ತಮೂರ್ತಿ ಕುಲಕರ್ಣಿ, ಮೋಹನ್ ರಾಮದುರ್ಗ, ಕೃಷ್ಣಾ ಗಂಡಗಾಳಕರ, ಪ್ರಭು ನವಲಗುಂದಮಠ, ಸುರೇಶ ಬೆದರೆ, ಸುನಿಲ್ ಮೂರೆ, ಅಮಿತ್ ಪಾಟೀಲ್, ಶಿವಾಜಿ ಶಿಂಧೆ, ವಿಷ್ಣು ಕೊರ್ಲಹಳ್ಳಿ, ಆನಂದ ಯಾವಗಲ್, ಮಂಜುನಾಥ ಬಟ್ಟಣನವರ, ಶ್ರೀನಿವಾಸ ಕೋಟ್ಯಾನ್, ರವಿಕಿರಣ ವಾಗ್ಮೊರೆ, ಮಾಲತಿ ಹುಲಿಕಟ್ಟಿ, ರಾಜೇಶ್ವರಿ ಅಳಗವಾಡಿ, ನೀಲವ್ವ ಅರವಾಳದ ಇದ್ದರು.