ರೈತರ ಜಮೀನು ಕಬಳಿಕೆ ವಿರೋಧಿಸಿ ಬಿಜೆಪಿ ಧರಣಿ

| Published : Nov 23 2024, 12:30 AM IST

ಸಾರಾಂಶ

ಕೇವಲ ನೋಟಿಸ್ ಹಿಂಪಡೆದರೆ ಸಾಲದು, 1974ರ ಗೆಜೆಟ್ ರದ್ದು ಪಡಿಸಬೇಕು.

ಹೊಸಪೇಟೆ: ರೈತರ ಭೂಮಿ, ಮಠ, ಮಂದಿರ, ಶಾಲೆಗಳು ಹಾಗೂ ಸಾರ್ವಜನಿಕ ಆಸ್ತಿಗಳನ್ನು ವಕ್ಫ್‌ ಬೋರ್ಡ್ ಹೆಸರಿನಲ್ಲಿ ಕಬಳಿಸಲು ಹುನ್ನಾರ ನಡೆಸಿ, ರೈತರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ, ನಮ್ಮ ಭೂಮಿ, ನಮ್ಮ ಹಕ್ಕು ಅಡಿ ನಗರದ ತಹಶೀಲ್ದಾರ್‌ ಕಚೇರಿ ಎದುರು ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ಧರಣಿ ನಡೆಯಿತು.

ರಾಜ್ಯ ಸರ್ಕಾರ ವಕ್ಫ್‌ ಹೆಸರಿನಲ್ಲಿ ರೈತರ, ಮಠ, ಮಂದಿರಗಳ ಜಮೀನು ಪಡೆಯುತ್ತಿದೆ. ಈ ಜನ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಬಡವರ ಅನ್ನ ಕಸಿಯುವ ಬಿಪಿಎಲ್ ಕಾರ್ಡ್ ರದ್ದು ಮಾಡುವುದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ತಪ್ಪು ಆದೇಶದಿಂದ ಜನರು ಆತಂಕದಲ್ಲಿದ್ದಾರೆ. ಕೇವಲ ನೋಟಿಸ್ ಹಿಂಪಡೆದರೆ ಸಾಲದು, 1974ರ ಗೆಜೆಟ್ ರದ್ದು ಪಡಿಸಬೇಕು. ಕೇವಲ ಕಣ್ಣೊರೆಸುವ ತಂತ್ರ ಮಾಡುವುದು ಸರಿಯಲ್ಲ. ಬಿಪಿಎಲ್ ಕಾರ್ಡ್ ರದ್ದಿನಿಂದಲೂ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. ವಕ್ಫ್‌ ಹೆಸರಿನಲ್ಲಿ ರೈತರ ಆಸ್ತಿ ಕಬಳಿಕೆ, ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ಇನ್ಮುಂದೆ ಯಾವುದೇ ವಕ್ಫ್‌ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಿ, ಇದಕ್ಕೆ ಸಂಬಂಧಿಸಿದ ಗೆಜೆಟ್ ಹಿಂಪಡೆಯಬೇಕು. ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಅಂಗೀಕಾರ ನೀಡಬೇಕು. ಎಪಿಎಲ್ ಮಾಡಿರುವ ಬಿಪಿಎಲ್ ಕಾರ್ಡ್‌ ಗಳನ್ನು ಮೊದಲಿನಂತೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ರೈತರಿಗಾದ ಸಮಸ್ಯೆ ಇನ್ಮುಂದೆ ಯಾರಿಗೂ ಆಗಬಾರದು. ಈ ಅನ್ಯಾಯ ಯಾರು ಸರಿಪಡಿಸುತ್ತಾರೆ. ಎಲ್ಲರೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ನಮ್ಮ ರಕ್ತ ಸುರಿಸುತ್ತೇವೆ ಹೊರತು ಒಂದಿಂಚು ಭೂಮಿ ಬಿಡುವುದಿಲ್ಲ. ರೈತರಿಗೆ ಅನ್ಯಾಯ ಮಾಡಿದರೆ ಸುಮ್ಮನಿರುವುದಿಲ್ಲ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ರೈತರು ಮನಸ್ಸು ಮಾಡಿದರೆ ನಿಮ್ಮ ಸರ್ಕಾರ ಉಳಿಯಲ್ಲ ಎಂದು ಎಚ್ಚರಿಸಿದರು.

ನಮ್ಮ ಕಾಲದಲ್ಲಿ ನೋಟಿಸ್ ಕೊಟ್ಟಿದ್ದರೆ ಒಂದು ದಾಖಲೆ ಕೊಡಿ. ಸುಮ್ಮನೆ ಆರೋಪ ಮಾಡಬೇಡಿ. ನೀವೇ ಎಲ್ಲ ಹಗರಣ ಮಾಡುತ್ತಿದ್ದೀರಿ. ಸರ್ಕಾರದ ಖಜಾನೆ ಖಾಲಿ ಮಾಡಿದ್ದೀರಿ. ಬಡವರ ಅನ್ನ ಕೂಡ ಕಸಿಯುತ್ತಿದ್ದೀರಿ ಎಂದು ದೂರಿದರು.

ತಹಸೀಲ್ದಾರ್‌ರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಬಂಗಾರು ಹನುಮಂತ, ಸಿದ್ದಾರ್ಥ್ ಸಿಂಗ್, ಅಶೋಕ್ ಜೀರೆ, ಬಲ್ಲಾಹುಣ್ಸಿ ರಾಮಣ್ಣ, ಜಂಬಯ್ಯ ನಾಯಕ, ಕೆ.ಎಸ್.ರಾಘವೇಂದ್ರ, ಸಾಲಿಸಿದ್ದಯ್ಯಸ್ವಾಮಿ, ಟಿ.ನಾಗರಾಜ ಸಂಜೀವರೆಡ್ಡಿ, ಕಿಚಿಡಿ ಕೊಟ್ರೇಶ್, ರೇವಣಸಿದ್ದಪ್ಪ, ಕಾಸಟ್ಟಿ ಉಮಾಪತಿ, ದ್ವಾರಕೀಶ್‌ ಮತ್ತಿತರರಿದ್ದರು.

ಹೊಸಪೇಟೆಯ ತಹಸಿಲ್‌ ಕಚೇರಿ ಎದುರು ಶುಕ್ರವಾರ ಬಿಜೆಪಿಯಿಂದ ಬೃಹತ್‌ ಧರಣಿ ನಡೆಯಿತು. ಮಾಜಿ ಸಚಿವ ಶ್ರೀರಾಮುಲು ಮತ್ತಿತರರು ಪಾಲ್ಗೊಂಡಿದ್ದರು.