ಗೋವಿಂದ ಕಾರಜೋಳ ಗೆಲ್ಲುವುದು ಬಿಜೆಪಿಯವರಿಗೆ ಬೇಕಿರಲಿಲ್ಲ

| Published : Jun 08 2024, 12:34 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೋವಿಂದ ಕಾರಜೋಳ ಗೆಲ್ಲುವುದು ಬಿಜೆಪಿಯರಿಗೆ ಬೇಕಿರಲಿಲ್ಲ. ಚುನಾವಣೆ ಮುಗಿಯುವವರೆಗೆ ಅಸಹಕಾರ ತೋರಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಹೊಸ ಬಾಂಬ್ ಸಿಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ಈ ಸಂಗತಿ ಗೊತ್ತಿದ್ದು, ಸ್ವತ: ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ತಿಳಿದಿದೆ. ಈ ಸಂಗತಿ ಇದುವರೆಗೂ ಯಾರೂ ಹೇಳಲು ಮುಂದೆ ಬಾರದೇ ಇರುವದರಿಂದ ನಾನು ದೂರುದಾರನಾಗಿ ಈ ಕೆಲಸ ಮಾಡಬೇಕಾಗಿ ಬಂದಿದೆ ಎಂದರು.

ಜಿಲ್ಲೆಯ ಬಿಜೆಪಿ ಮುಖಂಡರ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಕಾಂತರಾಜ್, ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಉತ್ತಮ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗಿತ್ತು. ಗೋವಿಂದ ಕಾರಜೋಳ ರಾಜ್ಯಮಟ್ಟದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು, ಮೈತ್ರಿ ಕಾರಣದಿಂದಾಗಿ ಜೆಡಿಎಸ್ ಕಾರ್ಯಕರ್ತರು ಮನಪೂರ್ವಕವಾಗಿ ಸ್ಪಂಧಿಸಿದೆವು. ಆದರೆ ಬಿಜೆಪಿಯವರಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಕಾರಜೋಳ ಗೆದ್ದರೆ ಸಣ್ಣ ಪುಟ್ಟದಕ್ಕೂ ಅವರ ಹಿಂದೆ ಅಲೆದಾಡಬೇಕಾದೀತೆಂಬ ಕಾರಣಕ್ಕೋ ಅಥವಾ ಕಾರಜೋಳ ಅಭ್ಯರ್ಥಿಯಾಗುವುದು ಇಷ್ಟವಿರಲಿಲ್ಲವೋ ನಮ್ಮ ಅರಿವಿಗೆ ಬಾರದು. ಅದು ಪಕ್ಷದ ಮುಖಂಡರ ವೈಯುಕ್ತಿಕ ವಿಚಾರ. ಒಂದು ವೇಳೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರು ಸೇರಿ ಕೆಲಸ ಮಾಡಿದ್ದರೆ ಕಾರಜೋಳ ಅವರು ಕನಿಷ್ಟ ಎರಡುವರೆ ಲಕ್ಷ ಮತಗಳ ಲೀಡ್‌ನಿಂದ ಗೆಲ್ಲುತ್ತಿದ್ದರು ಎಂದರು.

ಚುನಾವಣೆಯಲ್ಲಿ ಮೈತ್ರಿಯಾದಾಗ ಬಿಜೆಪಿಗೆ ಸೇರಿದ ಜಿಲ್ಲೆಯ ಯಾರೊಬ್ಬ ಮುಖಂಡರು ನಮ್ಮನ್ನು ಸಂಪರ್ಕಿಸಲಿಲ್ಲ. ಪ್ರಚಾರಕ್ಕೆ ಆಹ್ವಾನಿಸಲಿಲ್ಲ. ಸ್ವತ: ಅಭ್ಯರ್ಥಿ ಗೋವಿಂದ ಕಾರಜೋಳ ಅವರೇ ನಮ್ಮನ್ನು ಸಂಪರ್ಕಿಸಿ ಜೊತೆಗೂಡುವಂತೆ ವಿನಂತಿಸಿದರು. ಆ ಕಾರಣಕ್ಕಾಗಿಯೇ ಜಿಲ್ಲೆಯ ಎಲ್ಲ ಜೆಡಿಎಸ್ ಕಾರ್ಯಕರ್ತರು ಬದ್ಧರಾಗಿ ಚುನಾವಣೆ ಮಾಡಿ ಕಾರಜೋಳ ಅವರನ್ನು ಗೆಲ್ಲಿಸಿಕೊಂಡೆವು. ಫಲಿತಾಂಶದ ದಿನ ಕಾರಜೋಳರ ಜೊತೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ, ನಾವೇ ಗೆಲ್ಲಿಸಿದೆವು ಎಂಬಷ್ಟರ ಮಟ್ಟಿಗೆ ಫೋಜ್ ಕೊಟ್ಟವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದರು.

ಆದರೆ ಗೋವಿಂದ ಕಾರಜೋಳ ಈ ಬಗ್ಗೆ ಸುಮ್ಮನಿರಬಾರದು. ಸಭೆ ಮಾಡಿ ಗೆಲ್ಲಲು ಕಾರಣವಾದ ಅಂಶಗಳ ಬಗ್ಗೆ ಚರ್ಚಿಸಬೇಕು. ಪ್ರಚಾರ ಮಾಡದೆ ಅಸಹಕಾರ ತೋರಿದ ಕುತಂತ್ರಿಗಳನ್ನು ಪಕ್ಷದಿಂದ ಹೊರ ಹಾಕಬೇಕು. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಎಲ್ಲ ಪದಾಧಿಕಾರಿಗಳ ಪರಿಶೀಲನೆ ಮಾಡಿ ಪಕ್ಷ ದ್ರೋಹ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕಾರಜೋಳ ಅವರ ಗೆಲವು ಬಿಜೆಪಿ ಸಾಮಾನ್ಯ ಕಾರ್ತಕರ್ತರದ್ದೇ ವಿನಹ ನಾಯಕರದ್ದಲ್ಲ. ಬಿಜೆಪಿಯಿಂದ ರಾಜಕೀಯ ಲಾಭ ಪಡೆದ ಯಾರೊಬ್ಬ ನಾಯಕನೂ ಚುನಾವಣೆ ಮಾಡಿಲ್ಲ. ಫಲಾಪೇಕ್ಷೆ ಇಲ್ಲದವರು ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿಕೊಂಡಿದ್ದಾರೆ. ಜಿಲ್ಲೆಯ ಬಿಜೆಪಿ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳಲು ಸಕಾಲವೆಂದು ಕಾಂತರಾಜ್ ಹೇಳಿದರು.

ಗೋವಿಂದ ಕಾರಜೋಳ ಅಭ್ಯರ್ಥಿಯಾಗಿ ಆಗಮಿಸಿದಾಗ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಮದಕರಿನಾಯಕ ಥೀಮ್ ಪಾರ್ಕ್ ಆರಂಭಿಸುವಂತೆ ಮನವಿ ಮಾಡಲಾಗಿತ್ತು. ಆದ್ದರಿಂದ ಆಧ್ಯತೆ ಮೇರೆಗೆ ಪರಿಗಣಿಸಿ ಕಾಮಗಾರಿ ಪೂರ್ಣಗೊಳಿಸಬೇಕು. ನೀಡಿದ ಭರವಸೆ ಈಡೇರಿಸಬೇಕು ಎಂದರು. ಈ ವೇಳೆ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಮುಖಂಡ ಮಠದಹಟ್ಟಿ ವೀರಣ್ಣ, ತಾಲೂಕು ಅಧ್ಯಕ್ಷ ಸಣ್ಣತಿಮ್ಮಣ್ಣ, ಪ್ರತಾಪ್ ಜೋಗಿ ಹಾಜರಿದ್ದರು.