ಕೋಮು ಸೌಹಾರ್ದ ಕದಡುವ ಬಿಜೆಪಿ: ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಪ

| Published : Sep 13 2025, 02:06 AM IST

ಸಾರಾಂಶ

ಬಿಜೆಪಿ ನಾಯಕರು ಅನಾವಶ್ಯಕ ಅಪಪ್ರಚಾರ ನಡೆಸಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದ್ದಾರೆ.

ಕಾರ್ಕಳ: ರಾಜ್ಯ ಸರ್ಕಾರದ ಜನಪ್ರಿಯತೆ ಸಹಿಸದ ಬಿಜೆಪಿ ನಾಯಕರು ಅನಾವಶ್ಯಕ ಅಪಪ್ರಚಾರ ನಡೆಸಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದ್ದಾರೆ.ಕಾರ್ಕಳ ತಾಲೂಕಿನ ನೀರೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದರು.ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ಆರೋಪ ಮಾಡಲು ಬೇರೆ ವಿಷಯಗಳಿಲ್ಲ. ರಾಜ್ಯ ಸರ್ಕಾರ ಬೀಳುತ್ತದೆ, ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ, ಜಾರಿಯಾದರೂ ನಾಲ್ಕು ತಿಂಗಳಿಗಷ್ಟೇ ಎಂದು ಸುಳ್ಳು ಪ್ರಚಾರ ಮಾಡಲಾಯಿತು. ಆದರೆ ನಮ್ಮ ಸರ್ಕಾರ ಜನತೆಗೆ ಸಾಕಷ್ಟು ಅನುಕೂಲಗಳನ್ನು ಒದಗಿಸಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.ಮಾಜಿ ಸಚಿವ ಸಿ.ಟಿ. ರವಿ ವಿರುದ್ಧ ದಾಖಲಾದ ಎಫ್‌ಐಆರ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ದ್ವೇಷಪೂರಿತ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲು ವಿಧಾನಸಭೆಯಲ್ಲಿ ಶಾಸನ ತರಲಾಗಿದೆ. ಬಿಜೆಪಿ ಆಗಲಿ ಕಾಂಗ್ರೆಸ್ ಆಗಲಿ, ಯಾರೇ ದ್ವೇಷಪೂರಿತ ಭಾಷಣ ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಶಾಂತಿ ಕದಡಿದರೆ ಖಂಡಿತ ಎಫ್‌ಐಆರ್ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.ಎಸ್‌ಐಟಿ ತನಿಖೆಯಿಂದ ಎಲ್ಲವೂ ಬಹಿರಂಗ....ಧರ್ಮಸ್ಥಳ ಗ್ರಾಮದಲ್ಲಿ ಎಸ್‌ಐಟಿ ತನಿಖೆಗೆ ಸಂಬಂಧಿಸಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಧರ್ಮಸ್ಥಳ ನಮ್ಮೆಲ್ಲರ ಆರಾಧ್ಯ ಸ್ಥಳ. ಅಲ್ಲಿ ಅನೇಕ ಭಕ್ತಿಯಿಂದ ನಡೆದುಕೊಳ್ಳುವ ಸಂಪ್ರದಾಯವಿದೆ. ಯಾವ ಷಡ್ಯಂತ್ರ ನಡೆದಿದ್ದರೂ ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬರುತ್ತದೆ. ಎಸ್ಐಟಿ ತನಿಖೆ ನಡೆಸುತ್ತಿದೆ, ಸ್ವಲ್ಪ ದಿನ ಕಾಯಿರಿ, ಎಲ್ಲವೂ ಬಹಿರಂಗವಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.