ರಾಜ್ಯದ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಬದಲು ಸಚಿವ ನಾಗೇಂದ್ರ ವಿರುದ್ಧದ ಪ್ರಕರಣವನ್ನು ಮುಂದಿಟ್ಟುಕೊಂಡು ಸದನದ ಕಲಾಪಕ್ಕೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಆರೋಪಿಸಿದರು.

ಹಾವೇರಿ: ರಾಜ್ಯದ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಬದಲು ಸಚಿವ ನಾಗೇಂದ್ರ ವಿರುದ್ಧದ ಪ್ರಕರಣವನ್ನು ಮುಂದಿಟ್ಟುಕೊಂಡು ಸದನದ ಕಲಾಪಕ್ಕೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಆರೋಪಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ವಿಚಾರವಾಗಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿಗೆ ಒಬ್ಬ ವ್ಯಕ್ತಿ ಮುಖ್ಯವೋ ಅಥವಾ ರಾಜ್ಯದ ಜನರ ಹಿತ ಮುಖ್ಯವೋ ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಬೇಕು. ಜನರ ಸಮಸ್ಯೆಗಳಿಗಿಂತ ವ್ಯಕ್ತಿಯನ್ನೇ ದೊಡ್ಡದಾಗಿ ಬಿಂಬಿಸುವ ಬಿಜೆಪಿಯ ಧೋರಣೆ ಸರಿಯಲ್ಲ. ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದರೆ ಎಲ್ಲ ಸಮಸ್ಯೆಗಳಿಗೂ ಉತ್ತರ ಮತ್ತು ಪರಿಹಾರ ಕಂಡುಕೊಳ್ಳಬಹುದು. ಆದರೆ, ಕಲಾಪ ನಡೆಸಲು ಅವಕಾಶ ನೀಡದೆ ನಿರಂತರವಾಗಿ ಅಡ್ಡಿಪಡಿಸಲಾಗುತ್ತಿದೆ. ಆಡಳಿತ ಪಕ್ಷದಲ್ಲಿದ್ದರೂ ಜನರಿಗೆ ವಾಸ್ತವಾಂಶ ತಿಳಿಯಬೇಕು ಎಂಬ ಕಾರಣಕ್ಕೆ ನಾವು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.

ಬಿಜೆಪಿಯವರ ಅವಧಿಯಲ್ಲಿಯೂ ಹಗರಣಗಳು ನಡೆದಿವೆ. ಅವರ ಪಕ್ಷದಲ್ಲಿಯೂ ಕ್ರಿಮಿನಲ್ ಹಿನ್ನೆಲೆಯ ಆರೋಪ ಎದುರಿಸುತ್ತಿರುವವರು ಇದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಸದನದಲ್ಲಿ ಮುಕ್ತವಾಗಿ ಚರ್ಚೆಯಾಗಲಿ ಎಂದು ಹೇಳಿದರು.

ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆಯಿಂದ ಹಸಿರು ಬರಗಾಲದ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ಸದನದಲ್ಲಿ ಚರ್ಚೆ ನಡೆಸಿ ಬರಗಾಲ ಘೋಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಹಾವೇರಿ ಜಿಲ್ಲೆಯಿಂದಲೂ ಪರಿಸ್ಥಿತಿ ಕುರಿತು ವರದಿ ಸಲ್ಲಿಕೆಯಾಗಿದೆ. ಬರಗಾಲ ಘೋಷಣೆ ಮಾಡಬೇಕೆಂಬ ಒತ್ತಡವನ್ನು ನಾವೂ ಸರ್ಕಾರದ ಮಟ್ಟದಲ್ಲಿ ಹಾಕಿದ್ದೇವೆ ಎಂದು ತಿಳಿಸಿದರು.

ಸಕ್ಕರೆ ಹಾಗೂ ಬೆಲ್ಲದ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ದಿಢೀರ್ ದರ ಏರಿಕೆಗೆ ಸಗಟು ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿಸಿರುವ ಸಾಧ್ಯತೆ ಇದೆ. ವಿಷಯ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬಂದರೂ, ಕೃತಕ ಅಭಾವದ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು. ಗೋದಾಮುಗಳ ಮೇಲೆ ದಾಳಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಾಗುವುದು ಎಂದರು.

ಶಿಗ್ಗಾಂವಿ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ಖಂಡನೀಯ. ಇಂತಹ ಘಟನೆಗಳು ಮರುಕಳಿಸಬಾರದು. ಆದರೆ, ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಮಾಡಿದ ಕೃತ್ಯವನ್ನು ಆಧರಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳುವುದು ಸರಿಯಲ್ಲ. ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಹಾವೇರಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಸಂಬಂಧಿಸಿದ ಘಟನೆಯೂ ದೊಡ್ಡ ಸಮಸ್ಯೆಯಾಗಿ ಬೆಳೆಯುವ ಸಾಧ್ಯತೆ ಇತ್ತು. ಆದರೆ, ಸಂಬಂಧಪಟ್ಟ ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ಸಂದರ್ಭವನ್ನು ಪರಿಗಣಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದರು.

ಶಿಗ್ಗಾಂವಿ ಘಟನೆಯಲ್ಲಿ ಶಾಸಕರ ಕುಮ್ಮಕ್ಕು ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಕೆಲಸಕ್ಕೆ ಯಾರಾದರೂ ಕುಮ್ಮಕ್ಕು ನೀಡುತ್ತಾರೆಯೇ? ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮವಾಗಲಿದೆ. ಇಂತಹ ಘಟನೆಗಳ ನೆಪದಲ್ಲಿ ಬಂದ್‌ಗೆ ಕರೆ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು.