ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಒತ್ತು

| Published : Apr 21 2024, 02:20 AM IST

ಸಾರಾಂಶ

ನಾರಿಶಕ್ತಿ ಯೋಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಶ್ರಮಿಸಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಅವರನ್ನು ಮತ್ತೊಮೆ ಪ್ರಧಾನಿಯನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.

ಚಿತ್ರದುರ್ಗ: ನಾರಿಶಕ್ತಿ ಯೋಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಶ್ರಮಿಸಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಅವರನ್ನು ಮತ್ತೊಮೆ ಪ್ರಧಾನಿಯನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆ ಜಾರಿ ಮಾಡುವ ಮೂಲಕ ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಮಹಿಳೆಯರಿಗೆ ಪೂರಕವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಮೂಲಕ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ ಎಂದರು.

ಬಡ ಕುಟುಂಬಗಳ ಎಷ್ಟೋ ತಾಯಂದಿರು ಸೌದೆ ಒಲೆಯಲ್ಲಿ ಅಡುಗೆ ಮಾಡುವಾಗ ಕಷ್ಟಪಡುತ್ತಿದ್ದರು. ಒಲೆ ಊದುವಾಗ ಕಣ್ಣಿಗೆ ಹೊಗೆ ತಗುಲಿ ಹಾನಿಯಾಗುತ್ತಿತ್ತು. ಹೊಗೆ ಸೇವಿಸಿ ಶ್ವಾಸಕೋಶಗಳಿಗೆ ತೊಂದರೆಯಾಗುತ್ತಿತ್ತು. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಉಜ್ವಲ ಯೋಜನೆ ಮೂಲಕ ಉಚಿತ ಅಡುಗೆ ಅನಿಲ ಸಂಪರ್ಕ ನೀಡಿದರು. ಕೈಯಲ್ಲಿ ಚಂಬು ಹಿಡಿದು ಬಯಲು ಶೌಚಾಲಯಕ್ಕೆ ಹೋಗುತ್ತಿದ್ದ ಹೆಣ್ಣುಮಕ್ಕಳ ಮಾನ ರಕ್ಷಣೆಗಾಗಿ ಮನೆ ಮನೆಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಇದು ಕೇವಲ ಶೌಚಾಲಯವಲ್ಲ, ಹೆಣ್ಣುಮಕ್ಕಳ ಆತ್ಮಗೌರವದ ಸಂಕೇತ ಎಂದು ಬಣ್ಣಿಸಿದರು.

ಜನ್‍ಧನ್ ಯೋಜನೆ ಮೂಲಕ ಜನಸಾಮಾನ್ಯರಿಗೆ ಬ್ಯಾಂಕ್ ಖಾತೆ ತೆರೆಯುವ ಅವಕಾಶ ಮಾಡಿದರು. ಚಿಕ್ಕಪುಟ್ಟ ವ್ಯಾಪಾರಿಗಳು ಮೀಟರ್ ಬಡ್ಡಿ ಲೆಕ್ಕದಲ್ಲಿ ಹಣವಂತರ ಬಳಿ ಸಾಲ ಮಾಡಿ ತಾವು ದುಡಿದ ಬಹುತೇಕ ಹಣವನ್ನು ಬಡ್ಡಿಗೆ ಕಟ್ಟುತ್ತಿದ್ದರು. ಮುದ್ರಾ ಯೋಜನೆಯಡಿ ಯಾವುದೇ ಗ್ಯಾರಂಟಿ ಇಲ್ಲದೇ ಬ್ಯಾಂಕ್‍ಗಳಲ್ಲಿ ಈಗ ಸಾಲ ಪಡೆಯಬಹುದು. ವಿಶ್ವಕರ್ಮ ಯೋಜನೆಯಡಿ ವಿವಿಧ ವೃತ್ತಿಗಳನ್ನು ಮಾಡುವವರು 1 ಲಕ್ಷ ರು.ಗಳವರೆಗೆ ಸಾಲಸೌಲಭ್ಯ ಪಡೆಯಬಹುದು. ಸ್ವಸಹಾಯ ಸಂಘಗಳ ಸದಸ್ಯರಿಗೆ ಅನುದಾನ ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳು ತಾತ್ಕಾಲಿಕ. 2000 ರು. ನೀಡುವ ಮೂಲಕ ಅತ್ತೆ-ಸೊಸೆಗೆ ಜಗಳ ತಂದಿಟ್ಟರು. ರೈತರಿಗೆ ನೀಡುವ 4000 ರು. ನಿಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಕಾರ್ಡ್ ಮೂಲಕ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ, ಜನೌಷಧಿ ಹೆಸರಲ್ಲಿ ಕಡಿಮೆ ಬೆಲೆಗೆ ಔಷಧಿ ನೀಡುತ್ತಿದ್ದಾರೆ ಎಂದರು.

ಮಹಿಳಾ ಮೋರ್ಚ ಮಾಜಿ ಜಿಲ್ಲಾಧ್ಯಕ್ಷೆ ಶ್ಯಾಮಲಾ ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮೋರ್ಚ ನಗರಾಧ್ಯಕ್ಷೆ ಶೀಲಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್, ಸೌಭಾಗ್ಯ ಬಸವರಾಜನ್, ಜೆಡಿಎಸ್ ಪಕ್ಷದ ಗೀತಾ, ಶಾಂತಮ್ಮ, ರಾಜ್ಯ ಎಸ್.ಟಿ ಮೋರ್ಚಾ ಸದಸ್ಯೆ ಕವನ ರಾಘವೇಂದ್ರ ಇದ್ದರು.