ಮಂಡ್ಯ ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ಭತ್ತ ಬೆಳೆದಿದ್ದು, ಪ್ರಸ್ತುತ ಕಟಾವು ಶೇ.೭೫ರಷ್ಟು ಮುಗಿದಿದೆ. ಈಗಾಗಲೇ ಕೇಂದ್ರ ಸರ್ಕಾರ ಭತ್ತಕ್ಕೆ ೨೩೮೬ ರು. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಈವರೆಗೂ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವುದು ದುರದೃಷ್ಟಕರ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾದ್ಯಂತ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಬಿಜೆಪಿ ಕಾರ್ಯಕರ್ತರು, ಭತ್ತವನ್ನು ಬಡಿದು, ಚೀಲಕ್ಕೆ ತುಂಬುವ ಮೂಲಕ ಸರ್ಕಾರವು ದಲ್ಲಾಳಿಗಳ ಜತೆ ಶಾಮೀಲಾಗಿರುವುದರಿಂದ ಇನ್ನೂ ಸಹ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದೆ ರೈತರಿಗೆ ಮೋಸ ಎಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ಭತ್ತ ಬೆಳೆದಿದ್ದು, ಪ್ರಸ್ತುತ ಕಟಾವು ಶೇ.೭೫ರಷ್ಟು ಮುಗಿದಿದೆ. ಈಗಾಗಲೇ ಕೇಂದ್ರ ಸರ್ಕಾರ ಭತ್ತಕ್ಕೆ ೨೩೮೬ ರು. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಈವರೆಗೂ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವುದು ದುರದೃಷ್ಟಕರ. ಈಗಾಗಲೇ ರೈತರು ಭತ್ರವನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗದೆ ಮಧ್ಯವರ್ತಿಗಳಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಅಂದರೆ ೧೮೦೦ - ೨೦೦೦ ಮಾರಾಟ ಮಾಡುತ್ತಿದ್ದಾರೆ. ಇದು ದಲ್ಲಾಳಿಗಳಿಗೆ ಅನುಕೂಲವಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಕೃಷಿ ಸಚಿವರು ಮಂಡ್ಯ ಜಿಲ್ಲೆಯವರಾಗಿದ್ದರೂ ಕೂಡ ರೈತರಿಗೆ ಅನುಕೂಲ ಮಾಡಿಕೊಡದೆ ಜಾಣ ಮೌನ ವಹಿಸಿರುವುದು ದುರದೃಷ್ಟಕರ. ಹಾಗಾಗಿ ಈ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು. ಇಲ್ಲವಾದರೆ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಮಂಡ್ಯ ಜಿಲ್ಲೆಯಾದ್ಯಂತ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಆರ್ ಅಶೋಕ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ವೈರಿಮುಡಿ, ಪ್ರಧಾನ ಕಾರ್ಯದರ್ಶಿ ಜವರೇಗೌಡ, ನಗರ ಘಟಕ ಅಧ್ಯಕ್ಷ ವಸಂತ್‌ಕುಮಾರ್, ಶಿವಕುಮಾರ್, ಕೆಂಪಯ್ಯ, ಶಿವಕುಮಾರ ಆರಾಧ್ಯ, ವಿವೇಕ್, ಆನಂದ, ಭೀಮೇಶ್, ಚಾಮರಾಜು, ಸಿದ್ದರಾಜು, ಮಂಜು, ನಿತ್ಯಾನಂದ, ಕೃಷ್ಣ, ಯೋಗಾನಂದ ಇತರರು ಭಾಗವಹಿಸಿದ್ದರು.

25994 ಕ್ವಿಂಟಾಲ್‌ ಭತ್ತ ಖರೀದಿ

ಮಂಡ್ಯ: ಸರ್ಕಾರವು 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಆದೇಶಿಸಿದ್ದು, ಮಂಡ್ಯ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಸರಬರಾಜು ನಿಗಮ ನಿಯಮಿತ ರವರನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 17 ನೋಂದಣಿ ಕೇಂದ್ರಗಳನ್ನು ತೆರೆದು ಕಾರ್ಯನಿರ್ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಭತ್ತ ಸರಬರಾಜು ಮಾಡಲು ನೋಂದಣಿಯಾಗಿರುವ ಒಟ್ಟು ರೈತರ ವಿವರ ಕೆಳಕಂಡತಿರುತ್ತದೆ.

ಈವರೆವಿಗೆ ಭತ್ತ ಖರೀದಿಗೆ 857 ರೈತರು ನೋಂದಾಯಿಸಿಕೊಂಡಿದ್ದು, 25994 ಕ್ವಿಂಟಾಲ್‌ ಭತ್ತ ಖರೀದಿಸಲಾಗಿದೆ. ಭತ್ತದ ದರ ಪ್ರತಿ ಕ್ವಿಂಟಾಲ್‌ಗೆ ಸಾಮಾನ್ಯ 2369 ರು., ಗ್ರೇಡ್-ಎ 2389 ರು. ನಿಗದಿಪಡಿಸಲಾಗಿದೆ.