ಸಾರಾಂಶ
ರಾಯಚೂರು ನಗರದಲ್ಲಿ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ನೇತೃತ್ವದಲ್ಲಿ ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಖಂಡಿಸಿ ಹಸುಗಳೊಂದಿಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರುಗೋಮಾತೆಯ ಕೆಚ್ಚಲು ಕತ್ತರಿಸಿದ ಪ್ರಕರಣವನ್ನು ಖಂಡಿಸಿ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಸೇರಿದ ಪಕ್ಷದ ಮುಖಂಡರು, ಕಾರ್ಯಕರ್ತರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೋವುಗಳನ್ನು ಹಿಡಿದು ಜಿಲ್ಲಾ ನ್ಯಾಯಾಲಯ, ಟಿಪ್ಪು ಸರ್ಕಲ್ ಮೂಲಕ ಗೋಶಾಲೆವರೆಗೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಗೋಮಾತೆಯ ಕೆಚ್ಚಲು ಕತ್ತರಿಸುವ ಹೇಯ ಕೃತ್ಯವನ್ನು ಎಸಗಿದ ವ್ಯಕ್ತಿಗೆ ಬೆಂಬಲಿಸುವ ಹಾಗೂ ಪ್ರೋತ್ಸಾಹಿಸುವಂತಹ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು, ಗೋಮಾತೆಯ ಶಾಪ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ನಾಯಕರಿಗೆ ತಟ್ಟಲಿದೆ ಎಂದು ಹೇಳಿದರು.ಇಂತಹ ಕೃತ್ಯದಿಂದ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಯಾಗಿದೆ. ದುಷ್ಟ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಕುಮ್ಮಕ್ಕು ನೀಡಲಾಗುತ್ತಿದೆ. ಹಿಂದೂ ಸಮಾಜದ ದೇವತೆಯೆಂದು ಪೂಜಿಸಲಾಗುವ ಗೋಮಾತೆಯ ಮೇಲೆ ವಿಕೃತ ಮನಸ್ಸಿನ ವ್ಯಕ್ತಿ ದುಷ್ಕೃತ್ಯ ಎಸಗಿದ್ದು, ಆದರೆ ಕಾಂಗ್ರೆಸ್ ಸರ್ಕಾರದಿಂದ ಆ ವ್ಯಕ್ತಿಯನ್ನು ಹುಚ್ಚ ಎಂದು ಬಿಂಬಿಸಲಾಗುತ್ತಿರುವುದು ಖಂಡನೀಯ ಎಂದರು.ಕೆಲಸ ಮಾಡಿಕೊಂಡು ಬುದ್ದಿವಂತಿಕೆಯಿಂದ ಜೀವನ ನಡೆಸುತ್ತಿದ್ದ ವ್ಯಕ್ತಿಯಿಂದ ಈ ಕೃತ್ಯ ಎಸಗಲಾಗಿದೆ ಆದರೆ ಕಾಂಗ್ರೆಸ್ ಸರ್ಕಾರ ಇಂತಹ ವ್ಯಕ್ತಿಯನ್ನು ಹುಚ್ಚ ಎಂದು ಬಿಂಬಿಸಿ ಜಾಮೀನು ನೀಡುವ ಕೆಲಸವನ್ನು ಮಾಡುತ್ತಿದೆ ಇದೊಂದು ದುರದೃಷ್ಟಕರ ಸಂಗತಿಯಾಗಿದೆ ಎಂದು ಬೇಸರ ಹೊರ ಹಾಕಿದರು.ಹಿಂದೂ ಸಮಾಜದ ಪವಿತ್ರ ಹಬ್ಬದ ಹಿಂದಿನ ದಿನವೇ ಈ ರೀತಿಯ ಹೇಯ್ಯ ಕೃತ್ಯವನ್ನು ಮಾಡಲಾಗಿದೆ. ಕೆಚ್ಚಲು ಕತ್ತರಿಸಿದ ವ್ಯಕ್ತಿಗೆ ನ್ಯಾಯ ಕೊಡಿಸುವ ಕಾಂಗ್ರೆಸ್ ರಾಜ್ಯ ಸರ್ಕಾರದ ನಡೆ ಸ್ವಾತಂತ್ರ‍್ಯ ಭಾರತದ ಇತಿಹಾಸದಲ್ಲಿಯೇ ಇದೊಂದು ತಲೆ ತಗ್ಗಿಸುವ ಕೆಲಸವಾಗಿದೆ. ಗೋಮಾತೆಯ ಶಾಪ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ, ಪಕ್ಷದ ನಾಯಕರಿಗೆ ಹಾಗೂ ಅವರ ಕುಟುಂಬಗಳಿಗೆ ತಟ್ಟುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ಕಡಗೋಲ ಆಂಜನೇಯ್ಯ, ರವೀಂದ್ರ ಜಲ್ದಾರ್, ರಾಘವೇಂದ್ರ ಉಟ್ಕೂರು, ಪಿ.ಯಲ್ಲಪ್ಪ, ಕಡಗೋಲ ರಾಮಚಂದ್ರ, ರಾಜಕುಮಾರ, ಶರಣಮ್ಮ ಕಾಮರೆಡ್ಡಿ, ನರಸರೆಡ್ಡಿ, ಶಿವಕುಮಾರ ಪೋಲೀಸ್ ಪಾಟೀಲ್, ಮೌನೇಶ, ಅನಿತಾ, ಅಶ್ವಿನಿ ಸೇರಿ ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಇದ್ದರು.