ಬಾಗಲಕೋಟೆ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತ ವಿರೋಧಿಯಾದ ಸರ್ಕಾರ ಮೆಕ್ಕೆಜೋಳ ಖರೀದಿಯಲ್ಲಿ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿಲ್ಲ. ರೈತ ವಿರೋಧಿ ಸರ್ಕಾರ ಕಿತ್ತೋಗೆಯಬೇಕು. ಬೆಂಬಲ ಬೆಲೆ ಘೋಷಣೆ ಮಾಡಬೇಕು. ರೈತರ ಸರಣಿ ಆತ್ಮಹತ್ಯೆಗಳು ರಾಜ್ಯದಲ್ಲಿ ನಡೆಯುತ್ತಿದ್ದು ಅದಕ್ಕೆ ಸರ್ಕಾರ ನೇರಹೊಣೆ ಎಂದು ಆಪಾದಿಸಿದರು.
ಇತ್ತೀಚೆಗೆ ಮುಧೋಳದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಯಾರೋ ಮಾಡಿದ ತಪ್ಪಿಗೆ ರೈತರು ಅನುಭವಿಸುವಂತಾಗಿದೆ. ಜಿಲ್ಲೆಯ ತೋಟದ ಮನೆಗಳು ಇಸ್ಪೇಟ್ ಅಡ್ಡೆಗಳಾಗಿವೆ. ಅಕ್ರಮ ಮರಳು ದಂಧೆ ಅವ್ಯಾಹತವಾಗಿ ಜಿಲ್ಲೆಯಲ್ಲಿ ನಡೆದಿದ್ದು, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಿಗೆಟ್ಟು ಹೋಗಿದೆ ಎಂದು ದೂರಿದರು.ಕೃಷ್ಣಾ ಮೇಲ್ದಂಡೆ ಯೋಜನೆಗೆ ತಕ್ಷಣವೇ ₹25 ಸಾವಿರ ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಇಲ್ಲಿವರೆಗೂ ಒಂದೂ ರೂ.ಪರಿಹಾರ ನೀಡಿಲ್ಲ. ಸರ್ಕಾರಕ್ಕೆ ನಾಚೀಕೆ ಆಗಬೇಕು. ಇಂತಹ ಲಜ್ಜೆಗೆಟ್ಟ ಸಿದ್ದರಾಮಯ್ಯನವರ ಸರ್ಕಾರ ಎಂದೂ ನಾವು ಕಂಡಿಲ್ಲ ಎಂದು ಹೇಳಿದರು.
ಕುರ್ಚಿ ಕಾದಾಟದಲ್ಲಿ ಆಡಳಿತವನ್ನೇ ಮರೆತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳು ಮಾಡುತ್ತಿಲ್ಲ. ಮುಂದೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ರೈತ ಖರೀದಿ ಕೇಂದ್ರ ತೆರೆಯದೆ ಇರುವುದು ಖಂಡನೀಯ. ಜನರನ್ನು ಮರೆತಿರುವ ಸರ್ಕಾರ ಬಣದ ರಾಜಕಾರಣ ಮಾಡುತ್ತಾ ಹೊರಟಿದ್ದಾರೆ. ಸರ್ಕಾರ ಎರಡೂವರೆ ವರ್ಷದಲ್ಲಿ ಏನು ಕೆಲಸ ಮಾಡದೇ ಕೇವಲ ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ ಎಂದು ಹೇಳಿದರು.
ಪ್ರತಿಭಟನಾ ಮೆರವಣಿಗೆ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಆರಂಭವಾಗಿ ಜಿಲ್ಲಾಡಳಿತ ಭವನ ತೆರೆಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗಡಿಯಣ್ಣವರ, ಮಾಜಿ ಉಪಾಧ್ಯಕ್ಷ ಬಸವರಾಜ ಅವರಾದಿ, ನಗರ ಘಟಕ ಅಧ್ಯಕ್ಷ ಬಸವರಾಜ ಹುನಗುಂದ, ಶಶಿಕುಮಾರ ಮುತ್ತಣ್ಣವರ, ದೂಳಪ್ಪ ಕೊಪ್ಪದ, ಬಸವರಾಜ ಯಂಕಂಚಿ, ಸುರೇಶ ಮಜ್ಜಗಿ, ಮಲ್ಲಯ್ಯ ಮೂಗನೂರಮಠ, ಸತ್ಯನಾರಾಯಣ ಹೇಮಾದ್ರಿ, ರಾಜು ಶಿಂತ್ರೆ, ಶಂಕರ ಗಲಗ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ರೈತರು ಪಾಲ್ಗೊಂಡಿದ್ದರು.