ಕನ್ನಡಪ್ರಭ ವಾರ್ತೆ ಬೆಂಗಳೂರು
ಒಳ ಮೀಸಲಾತಿ ಜಾರಿ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರವು ಹಲವು ಎಡವಟ್ಟು ಮಾಡಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ದಲಿತ ನಾಯಕರ ನಿಯೋಗವು ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರು ನೀಡಿದೆ.ಸುಪ್ರೀಂಕೋರ್ಟ್ ತೀರ್ಪು ಬಂದ ಆರು ತಿಂಗಳೊಳಗೆ ನೆರೆಯ ತೆಲಂಗಾಣ, ಆಂಧ್ರ ಪ್ರದೇಶ, ಹರಿಯಾಣ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡಿ ನ್ಯಾಯ ಕೊಟ್ಟಿವೆ. ಸುಪ್ರೀಂ ತೀರ್ಪು ಬಂದು 18 ತಿಂಗಳು ಕಳೆದರೂ ಕರ್ನಾಟಕದಲ್ಲಿ ಈ ಒಳ ಮೀಸಲಾತಿ ಜಾರಿಯಾಗಿಲ್ಲ. ಈಗ ಒಳ ಮೀಸಲಾತಿ ವಿಚಾರ ಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ನ್ಯಾಯಾಲಯದ ಎದುರು ವಾದಿಸುವ ಸಿದ್ಧತೆ, ಮುತುವರ್ಜಿಗಳು ಕಾಣದಾಗಿದೆ ಎಂದು ಬಿಜೆಪಿ ನಾಯಕರ ನಿಯೋಗವು ರಾಜ್ಯಪಾಲರ ಗಮನ ಸೆಳೆದಿದೆ.ನ್ಯಾ.ನಾಗಮೋಹನ್ ದಾಸ್ ಆಯೋಗ ರಚನೆ ಮಾದಿಗ ಸಮಾಜದ ಬೇಡಿಕೆ ಆಗಿರಲಿಲ್ಲ. ಈ ಹಿಂದೆ ತಯಾರಿಸಿದ ನ್ಯಾ. ಸದಾಶಿವ ಆಯೋಗದ ವರದಿ ಮತ್ತು ಮಾಧುಸ್ವಾಮಿ ಸಮಿತಿ ವರದಿಯ ದತ್ತಾಂಶಗಳು ಸರ್ಕಾರದ ಬಳಿ ಇದ್ದವು. ಆದರೂ ರಾಜ್ಯ ಸರ್ಕಾರ ನ್ಯಾ.ನಾಗಮೋಹನ ದಾಸ್ ಆಯೋಗ ರಚಿಸಿ ಆರು ತಿಂಗಳ ಅವಧಿಯಲ್ಲಿ 110 ಕೋಟಿ ರು. ತೆರಿಗೆ ಹಣ ವ್ಯಯಿಸಿ ಶಿಫಾರಸುಗಳನ್ನು ಪಡೆದಿದೆ ಎಂದು ದೂರಿದೆ.
ಆಧಾರ ಇಲ್ಲದೆ ಹೊಸ ಸೂತ್ರ:ಈ ಆಯೋಗವು ಪ್ರವರ್ಗ1ಕ್ಕೆ ಶೇ.1, ಪ್ರವರ್ಗ 2ಕ್ಕೆ ಶೇ.6, ಪ್ರವರ್ಗ 3ಕ್ಕೆ ಶೇ.5, ಪ್ರವರ್ಗ 4ಕ್ಕೆ ಶೇ.4, ಪ್ರವರ್ಗ 5ಕ್ಕೆಶೇ.1ರಷ್ಟು ಮೀಸಲಾತಿ ಶಿಫಾರಸು ಮಾಡಿದೆ. ಆದರೆ, ಈ ಸರ್ಕಾರವು ಈ ಶಿಫಾರಸು ಪರಿಗಣಿಸದೆ ರಾಜಕೀಯ ಒತ್ತಡಕ್ಕೆ ಮಣಿದು 6:6:5ರ ಹೊಸ ಸೂತ್ರ ರೂಪಿಸಿದೆ. ಯಾವ ಆಧಾರದಲ್ಲಿ ಈ ಹೊಸ ಸೂತ್ರ ರೂಪಿಸಿತು ಎಂಬುದಕ್ಕೆ ಸರ್ಕಾರ ಅಥವಾ ಮುಖ್ಯಮಂತ್ರಿ ಅಥವಾ ಸಚಿವರು ವಿವರಣೆ ನೀಡಿಲ್ಲ. ಈ ಬಗ್ಗೆ ಸದನದಲ್ಲಿ ಮಸೂದೆ ಮಂಡಿಸಿ ವಿಸ್ತೃತ ಚರ್ಚೆ ಇಲ್ಲದೆ ರಾತ್ರಿ ಸಂಖ್ಯಾಬಲದಿಂದ ತರಾತುರಿಯಲ್ಲಿ ಅಂಗೀಕರಿಸಿದೆ ಎಂದು ನಿಯೋಗವು ಆರೋಪಿಸಿದೆ.
ಕೋರ್ಟ್ ನಿರ್ದೇಶನ ಗಾಳಿಗೆ:
ಈ ಸರ್ಕಾರದ ಅಹಂಕಾರದಿಂದ ಒಳ ಮೀಸಲಾತಿ ನೆಲಕಚ್ಚಿದೆ. ಮೂರು ಆಯೋಗಗಳ ವರದಿಗಳಲ್ಲಿ ಅಲೆಮಾರಿ, ಸಣ್ಣ ಜಾತಿಗಳ ಗುಂಪಿಗೆ ಪ್ರತ್ಯೇಕ ಪ್ರವರ್ಗದಲ್ಲಿ ಶೇ.1ರ ಮೀಸಲಾತಿ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಗಾಳಿಗೆ ತೂರಿ ಒಳ ಮೀಸಲಾತಿ ಜಾರಿಯಲ್ಲಿ ಜಾರಿಬಿದ್ದು ನಗೆಪಾಟಲಿಗೆ ಈಡಾಗಿದೆ. ಅಲೆಮಾರಿಗಳು ಮತ್ತು ಸಣ್ಣ ಜಾತಿಗಳ ಜನರನ್ನು ಬೀದಿಪಾಲು ಮಾಡಿದೆ ಎಂದು ಕಿಡಿಕಾರಿದೆ.
ಈ ನಿಯೋಗದಲ್ಲಿ ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಶಾಸಕ ದುರ್ಯೋಧನ ಐಹೊಳೆ, ಬಸವರಾಜ್ ಮತ್ತಿಮಡು, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಮತ್ತಿತರರಿದ್ದರು.ದಿವಾಳಿ ಕಾರಣಕ್ಕೆ ಒಳ ಮೀಸಲಾತಿ ಗೊಂದಲ:ಬಡ್ತಿ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಿಲ್ಲ. ಬ್ಯಾಕ್ ಲಾಗ್ ನೇಮಕಾತಿಯಲ್ಲಿ ರೋಸ್ಟರ್ ರೂಪಿಸುವಲ್ಲಿ ಈ ಸರ್ಕಾರ ಸೋತಿದೆ. ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಸ್ಥಗಿತಗೊಂಡಿದೆ. 2.85 ಲಕ್ಷ ಹುದ್ದೆಗಳು ಖಾಲಿ ಇವೆ. ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ದಿವಾಳಿಯಾಗಿರುವ ಈ ಸರ್ಕಾರ, ಹೊಸ ನೇಮಕಾತಿಗಳಿಗೆ ಹಣಕಾಸು ಒದಗಿಸುವ ಸ್ಥಿತಿಯಲ್ಲಿ ಇಲ್ಲ. ಈ ಕಾರಣಕ್ಕಾಗಿ ಮೀಸಲಾತಿ ಗೊಂದಲವನ್ನು ಸೃಷ್ಟಿಸಿ ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ನಿಯೋಗವು ಆರೋಪಿಸಿದೆ.
-ಕೋಟ್-ಒಳ ಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿ ಮಾಡಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಅದನ್ನು ತಿರಸ್ಕರಿಸಿ ರಾಜಕೀಯ ತೀರ್ಮಾನ ತೆಗೆದುಕೊಂಡು ರಾಜ್ಯದ ಮಾದಿಗ ಉಪ ಜಾತಿಗಳಿಗೆ ಅನ್ಯಾಯ ಮಾಡಿದೆ.
- ಎ.ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ