ತೈಲದರ ಏರಿಕೆ ಖಂಡಿಸಿ ರಸ್ತೆಗಿಳಿದ ಕಮಲ ಪಾಳಯ

| Published : Jun 21 2024, 01:08 AM IST

ತೈಲದರ ಏರಿಕೆ ಖಂಡಿಸಿ ರಸ್ತೆಗಿಳಿದ ಕಮಲ ಪಾಳಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ನಗರ ಬಿಜೆಪಿ ವತಿಯಿಂದ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಭದ್ರಾವತಿ , ಹೊಳೆಹೊನ್ನೂರು, ಹೊಸನಗರದಲ್ಲೂ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಹೊಳೆಹೊನ್ನೂರು/ ಭದ್ರಾವತಿ / ಹೊಸನಗರ

ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ನಗರ ಬಿಜೆಪಿ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಗ್ಯಾರಂಟಿಗಳ ಮೂಲಕ ಹಲವಾರು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿದೆ. ಕಳೆದ ಮೂರು ತಿಂಗಳಿಂದ ಗ್ಯಾರಂಟಿ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಬರುತ್ತಿಲ್ಲ ಎಂದು ದೂರಿದರು.

ಗಾಯದ ಮೇಲೆ ಬರೆ ಎಂಬಂತೆ ಸುಳ್ಳು ಭರವಸೆ ನೀಡಿದ ಸರ್ಕಾರ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದೆ. ಇದರಿಂದ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದ್ದು, ಮತ್ತೆ ಈಗ ಬಸ್ ಪ್ರಯಾಣದರ ಏರಿಕೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಈ ಸರ್ಕಾರ ನಾಚಿಕೆ, ಮಾನ, ಮರ್ಯಾದೆ ಬಿಟ್ಟಿದ್ದು, ನುಡಿದಂತೆ ನಡೆಯುತ್ತಿಲ್ಲ. ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಿಂದುಳಿದ ವರ್ಗಗಳ ಅನುದಾನಗಳನ್ನು ಬಳಸಿಕೊಂಡಿದೆ. ಅನೇಕ ಸರ್ಕಾರಿ ನೌಕರರಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ದೊರೆಯುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೂ ಗೌರವಧನ ಸಿಗುತ್ತಿಲ್ಲ. ಒಂದು ಕಡೆಯಿಂದ ಗ್ಯಾರಂಟಿ ಘೋಷಿಸಿ ಇನ್ನೊಂದು ಕಡೆಯಿಂದ ಬಡವರ ಮೇಲೆ ಬೆಲೆ ಏರಿಕೆಯ ಅಸ್ತ್ರ ಪ್ರಯೋಗಿಸಿದೆ ಎಂದು ದೂರಿದರು.

ಸರ್ಕಾರದ ಬೊಕ್ಕಸ ತುಂಬಲು ಮತ್ತು ಗ್ಯಾರಂಟಿಗಾಗಿ ಹಣ ಹೊಂದಿಸಲು ಅನೇಕ ಸರ್ಕಾರಿ ಶುಲ್ಕಗಳನ್ನು ಹತ್ತು ಪಟ್ಟು ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ದಿನ ನಿತ್ಯ ವಸ್ತುಗಳ ಬೆಲೆ ಏರಿಸಿ ಸರ್ಕಾರ ಜನರನ್ನು ದಿವಾಳಿಯಾಗಿಸಲು ಹೊರಟಿದೆ. ಕೂಡಲೇ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯಿಂದಾಗಿ ಗಂಟೆಗೂ ಅಧಿಕ ಕಾಲ ಸಂಚಾರಕ್ಕೆ ಭಾರಿ ತೊಂದರೆಯಾಗಿ ಪೊಲೀಸರು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಸ್. ಜ್ಞಾನೇಶ್ವರ್, ಅನಿತಾ ರವಿಶಂಕರ್, ಸುರೇಖಾ ಮುರಳೀಧರ್, ರಾಹುಲ್ ಬಿದರೆ, ಮಾಲತೇಶ್, ಮಂಜುನಾಥ್, ವಿಶ್ವನಾಥ್, ದಿನೇಶ್, ಕಿರಣ್, ವಿಕ್ರಂ ಮತ್ತಿತರರಿದ್ದರು. ಹೆಚ್ಚಳ ಹಿಂಪಡೆದಿದ್ದರೆ ಉಗ್ರ ಹೋರಾಟ: ಮಲ್ಲೇಶಪ್ಪ

ಹೊಳೆಹೊನ್ನೂರು: ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ಮಾಡಿರುವ ಭಂಡತನದ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಸಮೀಪದ ಅರಹತೊಳಲು-ಕೈಮರ ಸುಂದರೇಶ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಬಿಜೆಪಿಯ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ಸರ್ಕಾರದಲ್ಲಿ ಹಣವಿಲ್ಲದೇ ಕ್ಷೇತ್ರ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಗಳನ್ನು ನಿಲ್ಲಿಸಲಾಗಿದೆ. ಕೇವಲ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಯ ಕಣ್ಣಿಗೆ ಕಾಂಗ್ರೆಸ್ ಸರ್ಕಾರ ಮಣ್ಣೆರಚುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದರು.ವಾಹನ ಟ್ಯಾಕ್ಸ್, ಮದ್ಯದ ದರ, ಸ್ಟ್ಯಾಂಪ್ ತೆರಿಗೆ, ಈಗ ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚು ಮಾಡಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ರಾಜ್ಯವನ್ನು ಆಳುವ ನೈತಿಕತೆ ಇಲ್ಲ. ಲೋಕಸಭೆಯಲ್ಲಿ ಹಿನ್ನಡೆ ಆಗಿದ್ದರಿಂದ ಬಡ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ರಾಜ್ಯದ ಹಣದುಬ್ಬರ ರಾಷ್ಟ್ರದ ‌ಹಣದುಬ್ಬರಕ್ಕಿಂತ‌ ಹೆಚ್ಚಿದೆ. ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗುತ್ತದೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಪೆಟ್ರೋಲ್ ಬೆಲೆ ಹೆಚ್ಚಳ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಚಂದ್ರಕುಮಾರ್, ಶಂಕರಮೂರ್ತಿ, ಕಲ್ಲಜ್ಜನಾಳ್ ಮಂಜುನಾಥ, ಶ್ರೀನಿವಾಸ್, ಎ.ಕೆ. ಮಹಾದೇವಪ್ಪ, ಸಿದ್ದಪ್ಪ, ಎ.ಕೆ. ರಮೇಶ್, ಸುಬ್ರಮಣಿ, ಎ.ಕೆ.ಮಹದೇವಪ್ಪ, ರಾಧಕೃಷ್ಣ, ಸಿದ್ದಲಿಂಗಪ್ಪ, ರಂಗಪ್ಪ, ಯೋಗಿಶ್, ಅರಕೆರೆ ಸಾಗರ್, ತಿಪ್ಪೇಶ್, ರೇಖಾ ಭೋಸ್ಲೆ, ಪ್ರೇಮಾ ಸುಮ, ಅಶ್ವಿನಿ ಮುಂತಾದವರಿದ್ದರು.ಬೆಲೆ ಏರಿಕೆ ಬರೆ ಎಳೆದ ‘ಕೈ’ಗೆ ಧಿಕ್ಕಾರ

ಭದ್ರಾವತಿ: ರಾಜ್ಯ ಸರ್ಕಾರ ವಿನಾಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ರಾಜ್ಯದಲ್ಲಿ ಜನಸಾಮಾನ್ಯರ ಬದುಕು ದುಸ್ತರಗೊಳಿಸಿದೆ. ತಕ್ಷಣ ಬೆಲೆ ಹೆಚ್ಚಳ ಹಿಂಪಡೆಯುವಂತೆ ಬಿಜೆಪಿ ಮಂಡಲ ಪ್ರಮುಖರು ಆಗ್ರಹಿಸಿದರು.

ಗುರುವಾರ ನಗರದಲ್ಲಿ ಮಂಡಲ ಮಹಿಳಾ ಕಾರ್ಯಕರ್ತರು ತರಕಾರಿ ಬುಟ್ಟಿಯೊಂದಿಗೆ ವಿನೂತನವಾಗಿ ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು. ಮಂಡಲದ ಪ್ರಮುಖರು ಮಾತನಾಡಿ, ಡೀಸೆಲ್ ಹಾಗು ಪೆಟ್ರೋಲ್ ಬೆಲೆ ಹೆಚ್ಚಳದಿಂದಾಗಿ ಹಣ್ಣು, ತರಕಾರಿ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಉಂಟಾಗಿದ್ದು, ಬದುಕು ದುಸ್ತರವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಖಾಲಿ ಖಜಾನೆ ತುಂಬಿಸಿಕೊಳ್ಳಲು ಜನರ ಮೇಲೆ ಬೆಲೆ ಏರಿಕೆ ಬರೆ ಎಳೆದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಫಲಕಗಳನ್ನು ಹಿಡಿದು ಧಿಕ್ಕಾರ.. ಧಿಕ್ಕಾರ.. ಎಂದು ಘೋಷಣೆಗಳನ್ನು ಹಾಕುವ ಮೂಲಕ ಪ್ರತಿಭಟಿಸಿದರು.

ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮುಖಂಡರಾದ ವಿ. ಕದಿರೇಶ್, ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ರಾಮಲಿಂಗಯ್ಯ, ಎಂ. ಮಂಜುನಾಥ್. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್ ಹಾಗೂ ಅಣ್ಣಪ್ಪ, ಜೆಡಿಎಸ್ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ಸರಸ್ವತಿ, ಹನುಮಂತ ನಾಯ್ಕ, ರಾಜಶೇಖರ್ ಉಪ್ಪಾರ, ಧನುಷ್ ಬೋಸ್ಲೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.ಹೊಸನಗರದಲ್ಲೂ ಬಿಜೆಪಿಯಿಂದ ರಸ್ತೆ ತಡೆ

ಹೊಸನಗರ: ರಾಜ್ಯ ಕಾಂಗ್ರೆಸ್‌ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಏರಿಸಿರುವುದನ್ನು ಖಂಡಿಸಿ ನಗರದ ಹಳೇ ಕೋಟ್೯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯರವರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆಯೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತ ಬಿಜೆಪಿ ಕಛೇರಿಯಿಂದ ತಾಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮುಖ್ಯ ರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ತೈಲ ಬೆಲೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.ಈ ವೇಳೆಯಲ್ಲಿ ಮಾತನಾಡಿದ ತಾಲೂಕು ಮಂಡಲದ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯ, ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಏರಿಸಿ ರಾಜ್ಯ ಸರ್ಕಾರ ಜನ ಸಾಮಾನ್ಯರ ಮೇಲೆ ಬರೆ ಎಳೆದಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗ್ಯಾರಂಟಿ ಭಾಗ್ಯ ಉಳಿಸಲು ಈ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇಂದನ ಬೆಲೆ ಏರಿಕೆಯಿಂದ ಸಮಾಜದ ಪ್ರತಿಯೊಬ್ಬ ನಾಗರೀಕರಿಗೂ ಹೊರೆಯಾಗಲಿದೆ ಸಾಗಾಣಿಕೆ, ದಿನಬಳಕೆ ವಸ್ತುಗಳು ಸೇರಿದಂತೆ ಮೂಲಭೂತ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ ಇವುಗಳನ್ನು ಪರಿಗಣಿಸದೆ ರಾಜ್ಯ ಸರ್ಕಾರ ದಿಢೀರ್ ಬೆಲೆ ಏರಿಸಿ ಜನರ ಬದುಕನ್ನು ನರಕಮಯವಾಗಿಸಿದೆ ಎಂದು ದೂರಿದರು.ತಾಲೂಕು ಯುವ ಮೋರ್ಚಾ ಅಧ್ಯಕ್ಷ ನಗರ ನಿತೀನ್ ಮಾತನಾಡಿ , ತಕ್ಷಣ ತೈಲಬೆಲೆ ಇಳಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.

ಬಿಜೆಪಿ ಮುಖಂಡರಾದ ಎನ್.ಆರ್.ದೇವಾನಂದ್, ಉಮೇಶ್ ಕಂಚುಗಾರ್, ಎ.ವಿ. ಮಲ್ಲಿಕಾರ್ಜುನ, ಎನ್ ಶೀಧರ ಉಡುಪ, ಕೆ.ವಿ. ಕೃಷ್ಣಮೂರ್ತಿ, ಕಾಲಸಸಿ ಸತೀಶ, ಮಂಡಾನಿ ಮೋಹನ್, ವಿ.ಸತ್ಯನಾರಾಯಣ , ಎಂ.ಎನ್ ಸುದಾಕರ್, ಶ್ರೀಪತಿರಾವ್, ಕೋಣೆಮನೆ ಶಿವಕುಮಾರ್, ಮಂಜುನಾಥ್ ಸಂಜೀವ, ಹಾಲಗದ್ದೆ ಉಮೇಶ್, ಕೃಷ್ಣವೇಣಿ, ಗಾಯತ್ರಿ ನಾಗರಾಜ್, ಗೌತಮ್, ನಾಗರತ್ನ ರಮಾನಂದ ಇನ್ನೂ ಮುಂತಾದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ಪ್ರತಿಭಟನೆ ಹಾಸ್ಯಾಸ್ಪದ: ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸನಗರ: ಇಂದು ರಾಜ್ಯಾದ್ಯಂತ ಬೆಲೆ ಏರಿಕೆ ಕುರಿತು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಹಾಸ್ಯಾಸ್ಪದ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಇಲ್ಲಿನ ಶಾಸಕರ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ಬಿಜೆಪಿ ಕಾರ್ಯಕರ್ತರು ಮೌನ ವಹಿಸಿದ್ದರು. ಅಂದು ಪೆಟ್ರೋಲ್ ಉತ್ಪನ್ನಗಳು ಏಕಾಏಕಿ 10 ರು. ಏರಿಸಲಾಗಿತ್ತು. 400 ರು. ಇದ್ದ ಅಡುಗೆ ಅನಿಲ ಬೆಲೆ ಸಾವಿರ ರೂ. ದಾಟಿದೆ. ಬಿಜೆಪಿ ಕಾರ್ಯಕರ್ತರಿಗೆ ನಿಜವಾದ ಜನಪರ ಕಾಳಜಿ ಇದ್ದಿದ್ದರೆ, ಆ ಸಮಯದಲ್ಲಿಯೂ ವಿರೋಧ ವ್ಯಕ್ತಪಡಿಸಬೇಕಿತ್ತು. ಈಗ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಏರಿಸುತ್ತಿದ್ದಂತೆ ಬಿಜೆಪಿಯವರು ಬೀದಿಗಿಳಿದಿರುವುದು ವಿಚಿತ್ರವಾಗಿದೆ ಎಂದರು.

ವಿರೋಧ ಪಕ್ಷಗಳು ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಸುಂಕ ಏರಿಕೆಯಿಂದ ದೊರೆಯುವ ಹೆಚ್ಚುವರಿ ಆದಾಯ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗಲಿದೆ. ಅನ್ಯ ರಾಜ್ಯಗಳಲ್ಲಿನ ದರಕ್ಕಿಂತ ನಮ್ಮಲ್ಲಿ ಕಡಿಮೆ ದರವಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳಿಗಾಗಿ ತೆರಿಗೆ ಏರಿಸಿಲ್ಲ. ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ. ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಅನುಮಾನ ಬೇಡ. ಬಿಜೆಪಿಯವರಿಗೆ ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆ ಗಳನ್ನು ನಿಲ್ಲಿಸಬೇಕಾಗಿದೆ. ಅದಕ್ಕಾಗಿ ಇನ್ನಿಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.ಪತ್ರಿಕಾಘೋಷ್ಠಿಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಟೌನ್ ಅಧ್ಯಕ್ಷ ಗುರುರಾಜ್, ಮುಖಂಡರಾದ ನಾಸಿರ್, ಪ್ರವೀಣ್, ಸಿಂಥಿಯಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.