ಭಾರತ ಬ್ರ್ಯಾಂಡ್ ಅಕ್ಕಿ ತೋರಿಸಿ ಪ್ರಚಾರ ಗಿಟ್ಟಿಸಿಕೊಂಡ ಬಿಜೆಪಿ

| Published : Mar 21 2024, 01:07 AM IST

ಭಾರತ ಬ್ರ್ಯಾಂಡ್ ಅಕ್ಕಿ ತೋರಿಸಿ ಪ್ರಚಾರ ಗಿಟ್ಟಿಸಿಕೊಂಡ ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಲೋಕಸಭಾ ಚುನಾವಣಾ ನಿಮಿತ್ತ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬಿಜೆಪಿ ಸರ್ಕಾರ ಕೇವಲ ಭಾರತ ಬ್ರ್ಯಾಂಡ್ ಅಕ್ಕಿ ತೋರಿಸಿ ಪ್ರಚಾರ ಗಿಟ್ಟಿಸಿಕೊಂಡಿದೆ. ನಾವು ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಮೂಲಕ ಜನತೆ ಆರ್ಥಿಕ ಸಬಲತೆ ಹೆಚ್ಚಿಸಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಬುಧವಾರ ಬೆಳಗಾವಿ ಲೋಕಸಭಾ ಚುನಾವಣಾ ನಿಮಿತ್ತ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಘೋಷಿಸದ 5 ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವುದರ ಮೂಲಕ ಮಾದರಿ ಆಡಳಿತ ನೀಡುತ್ತಿದ್ದೇವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಒಲವು ಇದ್ದು, ಮತದಾರರು ಕಾಂಗ್ರೆಸ್‌ಗೆ ಹೆಚ್ಚಿನ ಮತ ಚಲಾಯಿಸುವುದರ ಮೂಲಕ ಗೆಲುವಿಗೆ ಸಹಕರಿಸಬೇಕು. ಕಾರ್ಯಕರ್ತರು ಪ್ರತಿ ಮನೆ, ಮನೆಗೆ ಹೋಗಿ ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಪಂಚ ಯೋಜನೆಗಳ ಕುರಿತು ಮಾಹಿತಿ ನೀಡಿಬೇಕು ಎಂದು ಕೋರಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ನೀರಾವರಿ, ರಸ್ತೆ, ಶಾಲಾ-ಕಾಲೇಜು, ವಿದ್ಯುತ್ ಅಲ್ಲದೇ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡಲಾಗುವುದು. ರಾಜ್ಯದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದ್ದು, ಇನ್ನೂ ಕೆಲವು ಟೆಂಡರ್‌ಗಳನ್ನು ಚುನಾವಣೆ ಮುಗಿದ ತಕ್ಷಣ ಕರೆಯುತ್ತೇವೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಮೃಣಾಲ್ ಹೆಬ್ಬಾಳಕರ, ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಾಂಕಾ ಜಾರಕಿಹೊಳಿ ಹೆಸರು ಘೋಷಣೆ ನಿರೀಕ್ಷೆ ಇದ್ದು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕು ಎಂದು ಕೋರಿದರು.

ಕಾಂಗ್ರೆಸ್ ಸರ್ಕಾರದ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿಯವರಿಗೆ ಕಾಣಿಸುತ್ತಿಲ್ಲ. ವಿನಾಕಾರಣ ಅಪಾದನೆಯಲ್ಲಿ ತೊಡಗಿದ್ದಾರೆ. ಬಿಜೆಪಿಯವರು ಉದ್ದಿಮೆಗಳಾದ ಅಂಬಾನಿ, ಅದಾನಿಗಳಿಗೆ ಸಹಾಯ ಮಾಡಿದರೆ ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಮೃಣಾಲ್‌ಗೆ ಕ್ಷೇತ್ರದಲ್ಲಿ ಕೆಲಸ ಮಾಡುವ ಛಲ ಇದ್ದು, ಎಲ್ಲರೊಂದಿಗೆ ಬೆರೆತು ಅವರ ಮನಸ್ಸು ಗೆಲ್ಲುವ ಸಾಮಥ್ಯ ಇದ್ದಾನೆ. ಕಳೆದ ಬಾರಿ ಚುನಾವಣೆಯಲ್ಲಿ ರಾಜ್ಯದಿಂದ 25 ಜನ ಸಂಸದರು ಆಯ್ಕೆಯಾಗಿದ್ದಾರೆ. ಅವರು ರಾಜ್ಯಕ್ಕೆ ಅನ್ಯಾಯ ಆದಾಗ ನರೇಂದ್ರ ಮೋದಿ ಬಳಿ ಹೋಗಿ ಪ್ರಶ್ನೆ ಮಾಡುವ ಧೈರ್ಯವಿಲ್ಲ. ಇಂತಹ ಸಂಸದರು ಬೇಕಾ ಎಂದು ಪ್ರಶ್ನಿಸಿದರು.

ಯಾರದೋ ಹೆಸರಿನಿಂದ ಗೆದ್ದು ಬೀಗಿ ಹೆದರಿಕೊಂಡು ಹೋಗುವ ಸಂಸದರು ಬೇಕಾ? ನಾವು ಸ್ವಾರ್ಥಿಗಳಲ್ಲ. ನಮ್ಮ ಸರ್ಕಾರದ ಯೋಜನೆಗಳು ರಾಜ್ಯದ ಎಲ್ಲ ಜನತೆಗೆ ಮುಟ್ಟಿವೆ. ಈ ಬಾರಿ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪರ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ ಮಾತನಾಡಿ, ಈ ಬಾರಿಯ ನನಗೆ ಒಳ್ಳೆಯ ಸುವರ್ಣ ಅವಕಾಶ ಇದ್ದು, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಬೇಕು ಎಂದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಒಳಗೆ ಗ್ಯಾರಂಟಿ ಯೋಜನೆಗಳನ್ನು ಸಮಪರ್ಕವಾಗಿ ಜಾರಿಗೆಗೊಳಿಸಿದ್ದೇವೆ. ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಮನೆ, ಮನೆಗೆ ಮುಟ್ಟಿಸಿ ಈ ಬಾರಿ ರಾಜ್ಯದಿಂದ 22ಕ್ಕೂ ಹೆಚ್ಚು ಸಂಸದರನ್ನು ಗೆಲ್ಲಿಸಿ ಉತ್ತರ ನೀಡಬೇಕಾಗಿದೆ ಎಂದರು.

ವೇದಿಕೆ ಮೇಲೆ ಹಿರಿಯ ಮುಖಂಡ ಮಲ್ಲಪ್ಪ ಮುರಗೋಡ, ವಿನಯ ನಾವಲಗಟ್ಟಿ, ಶಂಕರಗೌಡ ಪಾಟೀಲ, ಶಿವರುದ್ರಪ್ಪ ಹಟ್ಟಿಹೊಳಿ, ಕಾರ್ತಿಕ ಪಾಟೀಲ, ಸುಭಾನಿ ಬಾಗವಾನ, ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ಬುಡ್ಡಸಾಬ ಶಿರಸಂಗಿ, ಸದ್ರುದ್ದೀನ್‌ ಅತ್ತಾರ, ಶಿವಬಸ್ಸು ಕುಡಸೋಮಣ್ಣವರ, ಅರ್ಜುನ ಕಲಕುಟಕರ, ಲಕ್ಷ್ಮೀ ಬಡ್ಲಿ, ದಿಲಶಾದಬೇಗಂ ನದಾಫ, ಶಶಿಕಲಾ ಕಲ್ಲೊಳ್ಳಿ, ಅಂಬಿಕಾ ಕೊಟಬಾಗಿ, ಶಶಿಕಲಾ ಹೊಸಮನಿ, ಅಂಜನಾ ಬೊಂಗಾಳೆ, ಹೇಮಲತಾ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡ ಈಶ್ವರ ಉಳ್ಳೇಗಡ್ಡಿ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.