ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮೋದಿ ಅಂದ್ರೆ ಅಭಿವೃದ್ಧಿ, ಅಭಿವೃದ್ಧಿ ಅಂದ್ರೇನೆ ಮೋದಿ ಆಗಿದ್ದು, ಅಭಿವೃದ್ಧಿ ಬೇರೆ ಅಲ್ಲ, ಮೋದಿ ಬೇರೆ ಅಲ್ಲ, ನಾವು ಏನೇನು ಹೇಳಿದ್ದೀವಿ ಎಲ್ಲವನ್ನೂ ಮಾಡಿದ್ದೇವೆ ಎಂದು ನೂತನ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಟಿಕಲ್ 370 ತೆಗೆದಿದ್ದೇವೆ. ರಾಮಮಂದಿರ ಕಟ್ಟಿದ್ದೇವೆ. ಕಾಮನ್ ಸಿವಿಲ್ ಕೋಡ್ ತರಲಿದ್ದೇವೆ. ವಿವಾದಿತ ಬಾಬ್ರಿ ಮಸೀದಿ ಬೀಳೋದನ್ನು ನೋಡಿದವ ನಾನು. ಇಂದು ರಾಜ್ಯಸಭೆ ಸದಸ್ಯನಾಗಿ ಭವ್ಯ ರಾಮಮಂದಿರ ನೋಡೊಕೆ ಹೋಗುತ್ತಿರುವುದು ನನ್ನ ಭಾಗ್ಯವಾಗಿದೆ ಎಂದು ತಿಳಿಸಿದರು.
ಸಿಎಎ ಯಾವಾಗ ಜಾರಿಗೆ ಬರುತ್ತೆ ಅನ್ನೋದು ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ. ಆದರೆ, ಸಿಎಎ ಖಂಡಿತ ತರುತ್ತೇವೆ ಎಂದ ಅವರು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದು ಯಾವಾಗ ಸರಿಯಾಗುತ್ತೆ ಎಂಬ ಪ್ರಶ್ನೆಗೆ ಅದನ್ನ ನರೇಂದ್ರ ಮೋದಿ ಸರಿ ಮಾಡಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.ಸಿಎಂ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಭಾಂಡಗೆ, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ದೊಡ್ಡದು, ಈ ಸಮಾಜ ಜಾತಿ ಗಣತಿ ಜಾರಿ ವಿರೋಧಿಸಿದೆ. ಅದಾಗ್ಯೂ ಸಿಎಂ ಜಾರಿಗೆ ತರುತ್ತಾರೆ ಅಂದ್ರೆ ಮುಂಬರುವ ದಿನಗಳಲ್ಲಿ ಆ ಸಮಾಜದವರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತೆ ಎಂದು ಎಚ್ಚರಿಸಿದರು.
ನಾನು ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗಿರೋಧು ಬಿಜೆಪಿ ಗೆಲುವು. ಇದು ನಾರಾಯಣಸಾ ಭಾಂಡಗೆ ಗೆಲುವಲ್ಲ ಎಂದ ಅವರು, ಬಿಜೆಪಿ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಸಬಾ ಸದಸ್ಯನನ್ನಾಗಿ ಮಾಡಿದೆ. ಇದು ಬಿಜೆಪಿಯಲ್ಲಿ ಮಾತ್ರ ಸಾದ್ಯ, ಬಿಜೆಪಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂದ ರಾಷ್ಟ್ರೀಯತೆ ದೊಡ್ಡದ್ದು ಎಂಬ ನಂಬಿಕೆ ಇಟ್ಟವರು ನಾವು, ಮುಂದಿನ ದಿನಗಳಲ್ಲಿ ಮೋದಿಯವರು ಪುನಃ ಅಧಿಕಾರಕ್ಕೆ ಬರಬೇಕು ಎಂದರು.ಯಾರು ಪಕ್ಷಕ್ಕೆ ನಿಷ್ಠರಾಗಿರುತ್ತಾರೆ ಅವರನ್ನು ಬಿಜೆಪಿ ಗುರುತಿಸುತ್ತದೆ. ನಾನು ಹಿಂದುತ್ವವಾದಿ, ರಾಷ್ಟ್ರೀಯತೆಗೆ ಮೊದಲ ಆದ್ಯತೆ ನೀಡುತ್ತೇನೆ. ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳ ಪರ ಧ್ವನಿ ಎತ್ತುವೆ. ಪ್ರಧಾನಿ ಜೊತೆ ಮಾತನಾಡಿ, ನಮ್ಮ ಭಾಗದ ಅಭಿವೃದ್ಧಿಗೆ ಏನು ಬೇಕು ಅದನ್ನ ತರುವ ಕೆಲಸ ಮಾಡುವೆ ಎಂದ ಅವರು, ನನ್ನನ್ನು ರಾಜ್ಯಸಭೆಗೆ ಕಳುಹಿಸಿದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದ ತಿಳಿಸಿದರು.