ಕಟ್ಟೆಮಾಡು ಘಟನೆಗೂ ಬಿಜೆಪಿಗೂ ಸಂಬಂಧ ಇಲ್ಲ: ರವಿ ಕಾಳಪ್ಪ

| Published : Jan 02 2025, 12:30 AM IST

ಕಟ್ಟೆಮಾಡು ಘಟನೆಗೂ ಬಿಜೆಪಿಗೂ ಸಂಬಂಧ ಇಲ್ಲ: ರವಿ ಕಾಳಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸುವ ವಿಚಾರವಾಗಿ ನಡೆದ ಘಟನೆಯಿಂದ ಜಿಲ್ಲೆಯಲ್ಲಿ ಎರಡು ಜನಾಂಗಗಳ ಮಧ್ಯೆ ಕಂದಕ ಏರ್ಪಡುವ ಪರಿಸ್ಥಿತಿ ಎದುರಾಗಿರುವುದು ವಿಷಾದನೀಯ. ಈ ಘಟನೆಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇತ್ತೀಚೆಗೆ ಮಡಿಕೇರಿ ತಾಲೂಕು ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸುವ ವಿಚಾರವಾಗಿ ನಡೆದ ಘಟನೆಯಿಂದ ಜಿಲ್ಲೆಯಲ್ಲಿ ಎರಡು ಜನಾಂಗಗಳ ಮಧ್ಯೆ ಕಂದಕ ಏರ್ಪಡುವ ಪರಿಸ್ಥಿತಿ ಎದುರಾಗಿರುವುದು ವಿಷಾದನೀಯ. ಈ ಘಟನೆಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ವಾಟ್ಸಪ್ ಗಳಲ್ಲಿ ಬಂದಿರುವ ವಿಡಿಯೋದಲ್ಲಿ ಮಾತಾಡಿರುವವರು ಕೊಡಗು ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷ ಕಾಂಗೀರ ಸತೀಶ್ ಹೌದು. ಆದರೆ ಅಲ್ಲಿ ನೀಡಿರುವುದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂದಿದ್ದಾರೆ.

ಅಲ್ಲಿ ನಡೆದ ಘಟನೆಗೆ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಆ ಊರಿನ ಜನತೆ ವಾಸ್ತವ ತಿಳಿಸಬೇಕು. ಈ ವಾರ್ಷಿಕೋತ್ಸವ ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮವಾಗಿರುವುದಿಲ್ಲ. ಆದುದರಿಂದ ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೂ ಬಿಜೆಪಿ ಜಿಲ್ಲೆಯಲ್ಲಿ ಶಾಂತಿಭಂಗ ಆಗಬಾರದು ಎಂಬ ಉದ್ದೇಶದಿಂದ ಜನತೆಯಲ್ಲಿ ವಿನಂತಿಸುವುದೇನೆಂದರೆ ಯಾವುದೇ ದೇವಸ್ಥಾನ ಪೂಜಾ ಕಾರ್ಯ ಹಾಗೂ ಶುಭಕಾರ್ಯಗಳಿಗೆ ಯಾವುದೇ ಹಿಂದೂ ಜನಾಂಗದವರು ಅವರವರ ಸಾಂಪ್ರದಾಯಿಕ ಉಡುಪು ಧರಿಸಿ ಬರುವುದನ್ನು ತಡೆಯಬಾರದು ಎಂದು ಹೇಳಿದ್ದಾರೆ.

ಈ ರೀತಿ ದೇವಸ್ಥಾನ ಆಡಳಿತ ಮಂಡಳಿಯವರು ನಿಯಮ ಮಾಡಿದ್ದರೆ ಅದನ್ನು ಪುನರ್ ಪರಿಶೀಲಿಸಬೇಕು. ಎಲ್ಲಾ ಹಿಂದೂ ಜನಾಂಗದವರು ಅವರವರ ಸಾಂಪ್ರದಾಯಿಕ ಉಡುಗೆ ಹಾಕಿ ಬರಲು ಅವಕಾಶ ಕಲ್ಪಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.

ಕಾಂಗೀರ ಸತೀಶ್ ದೇವಸ್ಥಾನದ ನಿಯಮಗಳನ್ನು ಹೇಳಿದ್ದರೂ ಕೊಡವರ ಉಡುಪು ಕಳಚಿ ಬರಬೇಕೆಂದು ಹೇಳಿರುವ ಹೇಳಿಕೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ವಿಷಾದ ವ್ಯಕ್ತಪಡಿಸ ಬೇಕೆಂದು ಜಿಲ್ಲಾ ಬಿಜೆಪಿ ಅವರಿಗೆ ಸೂಚಿಸಿದ್ದು, ಆ ಕೆಲಸ ಮಾಡುವ ಮೂಲಕ ಸಮುದಾಯಗಳನ್ನು ಒಂದುಗೂಡಿಸುವ ಕಾರ್ಯ ಮಾಡಬೇಕೆಂದು ಬಿಜೆಪಿ ಬಯಸುತ್ತದೆ ಎಂದು ಹೇಳಿದ್ದಾರೆ.