ಸಾರಾಂಶ
ಮಂಗಳೂರು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ಸಿಎಂ ರಾಜೀನಾಮೆ ವಿಚಾರದಲ್ಲಿ ಬಿಜೆಪಿಗೊಂದು ನ್ಯಾಯ, ಕಾಂಗ್ರೆಸ್‌ಗೊಂದು ನ್ಯಾಯವಾ ಎಂದು ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ. ಸಿಎಂ ರಾಜೀನಾಮೆ ನೀಡುವ ಅಗತ್ಯವೂ ಇಲ್ಲ. ಇಡೀ ಕಾಂಗ್ರೆಸ್ ಸಿದ್ದರಾಮಯ್ಯ ಅವರ ಜತೆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಎಂಎಲ್ಸಿ ಮಂಜುನಾಥ ಭಂಡಾರಿ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ಸಿಎಂ ರಾಜೀನಾಮೆ ವಿಚಾರದಲ್ಲಿ ಬಿಜೆಪಿಗೊಂದು ನ್ಯಾಯ, ಕಾಂಗ್ರೆಸ್‌ಗೊಂದು ನ್ಯಾಯವಾ ಎಂದು ಪ್ರಶ್ನಿಸಿದರು.
2010ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಚೆಕ್‌ನಲ್ಲಿ ಲಂಚ ಸ್ವೀಕಾರ ಮತ್ತು ಎರಡು ಡಿನೋಟಿಫಿಕೇಶನ್ ಕುರಿತಂತೆ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದರು. 2011ರಲ್ಲಿ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾದರೂ ಯಡಿಯೂರಪ್ಪ ರಾಜೀನಾಮೆ ನೀಡಿರಲಿಲ್ಲ. ಲೋಕಾಯುಕ್ತ ತನಿಖೆಯಲ್ಲಿ ತಪ್ಪಿತಸ್ಥ ಎಂದ ಬಳಿಕ ರಾಜೀನಾಮೆ ನೀಡಿದ್ದರು. ಯಡಿಯೂರಪ್ಪ ಅವರು ಚೆಕ್ ಮೂಲಕ ಹಣ ಪಡೆದಿದ್ದರೆ, ಸಿದ್ದರಾಮಯ್ಯ ಅವರು ಮೂಡ ಪ್ರಕರಣದಲ್ಲಿ ನೇರವಾಗಿ ಭಾಗಿಯೇ ಆಗಿಲ್ಲ. ಕೇವಲ ರಾಜಕೀಯವಾಗಿ ಆರೋಪ ಮಾಡಿದ ಮಾತ್ರಕ್ಕೆ ರಾಜೀನಾಮೆ ನೀಡುವ ಅಗತ್ಯವೇ ಬರಲ್ಲ ಎಂದರು.ದೋಸ್ತಿಗಳ ಷಡ್ಯಂತ್ರ:
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಜೀವನದಲ್ಲಿ ಭ್ರಷ್ಟಾಚಾರದ ಯಾವುದೇ ಕಪ್ಪು ಚುಕ್ಕೆ ಇಲ್ಲ. ಈಗ ಆರೋಪ ಮಾಡುತ್ತಿರುವುದು ಬಿಜೆಪಿ, ಜೆಡಿಎಸ್ ದೋಸ್ತಿಗಳ ಷಡ್ಯಂತ್ರ. ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟದ್ದು ಯಾವುದೇ ತನಿಖಾ ಸಂಸ್ಥೆಯಾಗಲೀ, ಪೊಲೀಸರಾಗಲೀ ಅಲ್ಲ. ಬದಲಾಗಿ ಮೂವರು ಖಾಸಗಿ ವ್ಯಕ್ತಿಗಳು ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್., ಶಾಲೆಟ್ ಪಿಂಟೊ, ಶುಭೋದಯ ಆಳ್ವ, ಮನೋರಾಜ್, ಟಿ.ಕೆ. ಸುಧೀರ್, ಸುಹಾನ್ ಆಳ್ವ, ಲಾರೆನ್ಸ್ ಡಿಸೋಜ ಮತ್ತಿತರರಿದ್ದರು.
ಎಂಎಲ್ಸಿ ಚುನಾವಣೆ: ಉಡುಪಿಗೆ ಪ್ರಾಶಸ್ತ್ಯಮುಂಬರುವ ವಿಧಾನ ಪರಿಷತ್ ಚುನಾವಣೆ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ ಈ ಬಾರಿ ಉಡುಪಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಮಂಜುನಾಥ ಭಂಡಾರಿ ತಿಳಿಸಿದರು.
ಉಡುಪಿಯಿಂದ ಆರು ಮಂದಿ ಮುಖಂಡರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಜಿಪಂ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಭುಜಂಗ ಶೆಟ್ಟಿ, ಮುಖಂಡರಾದ ರಾಜು ಕಾರ್ಕಳ ಸೇರಿದಂತೆ ಇನ್ನು ಮೂವರ ಹೆಸರಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಶನಿವಾರ ಆಗಮಿಸಲಿದ್ದು, ಎಲ್ಲ ನಾಯಕರು ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.