ಅಭಿವೃದ್ಧಿ ಹೆಸರಲ್ಲಿ ಮತ ಕೇಳುವ ಅಧಿಕಾರ ಬಿಜೆಪಿಗೆ ಇಲ್ಲ: ಅನ್ನಪೂರ್ಣ ತುಕಾರಾಂ

| Published : Apr 08 2024, 01:04 AM IST

ಸಾರಾಂಶ

ಬಳ್ಳಾರಿ ಬಿಜೆಪಿ ನಾಯಕರಿಗೆ ಜನಪರ ಅಭಿವೃದ್ಧಿ ಬೇಕಾಗಿಲ್ಲ. ಚುನಾವಣೆಗಳಲ್ಲಿ ಮಾತ್ರ ಅವರಿಗೆ ಮತದಾರರು ನೆನಪಾಗುತ್ತಾರೆ.

ಹೂವಿನಹಡಗಲಿ: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಆದರೆ ಜನಮಾಸನದಲ್ಲಿ ಉಳಿಯುವಂತಹ ಅಭಿವೃದ್ಧಿ ಕೆಲಸ ಮಾಡಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುವ ಅಧಿಕಾರ ಬಿಜೆಪಿಗೆ ಇಲ್ಲ ಎಂದು ಅನ್ನಪೂರ್ಣ ತುಕಾರಾಂ ಹೇಳಿದರು.

ತಾಲೂಕಿನ ಪಶ್ಚಿಮ ಕಾಲ್ವಿ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾನುವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪತಿ ತುಕಾರಾಂ ಪರ ಮತಯಾಚಿಸಿ ಅವರು ಮಾತನಾಡುತ್ತಾ, ಮತ ಕೇಳಲು ಹೇಳಿಕೊಳ್ಳುವಂತಹ ಕೆಲಸ ಮಾಡದಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತಯಾಚನೆ ಮಾಡುವಂತಹ ಸ್ಥಿತಿಗೆ ಬಂದಿದ್ದಾರೆಂದು ಟೀಕಿಸಿದರು.

ಬಳ್ಳಾರಿ ಬಿಜೆಪಿ ನಾಯಕರಿಗೆ ಜನಪರ ಅಭಿವೃದ್ಧಿ ಬೇಕಾಗಿಲ್ಲ. ಚುನಾವಣೆಗಳಲ್ಲಿ ಮಾತ್ರ ಅವರಿಗೆ ಮತದಾರರು ನೆನಪಾಗುತ್ತಾರೆ. ನಂತರ ಈ ಕಡೆ ನೋಡುವುದಿಲ್ಲ. ಕಾಂಗ್ರೆಸ್ ವರಿಷ್ಠರು ತುಕಾರಾಂ ಅವರನ್ನು ಸ್ಪರ್ಧೆಗೆ ಇಳಿಸಿದ್ದಾರೆ. ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಕೈ ಬಲಪಡಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.ಬಿಜೆಪಿ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಸಾಧನೆಗಳನ್ನು ಹೇಳಿ ಮತ ಕೇಳುತ್ತಿಲ್ಲ. ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ, ರಾಮ ಮಂದಿರ ನಿರ್ಮಿಸಿದ್ದೇ ಸಾಧನೆ ಎಂಬಂತೆ ಬಿಂಬಿಸಿ ಮತ ಕೇಳುತ್ತಿದ್ದಾರೆ. ರಾಹುಲ್ ಗಾಂಧಿಯವರ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯಿಂದ ದೇಶದಲ್ಲಿ ಕಾಂಗ್ರೆಸ್ ಅಲೆ ಸೃಷ್ಟಿಯಾಗಿದೆ ಎಂದರು.

ದೇಶದ ಜನರು ಬದಲಾವಣೆ ಬಯಸಿರುವುದರಿಂದ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು, ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಎಲ್ಲ ವರ್ಗದ ಜನರನ್ನು ಒಳಗೊಂಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಪತಿ ಮನೆ ಮನೆಗೂ ತಲುಪಿವೆ. ಈ ಯೋಜನೆಗಳಿಂದಾಗಿ ಬಡವರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ನಾವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೇಳಿ ಮತ ಕೇಳುತ್ತೇವೆ. ಅವರು ಕೇಂದ್ರದ ಸಾಧನೆಗಳನ್ನು ಜನರ ಮುಂದಿಟ್ಟು ಮತ ಕೇಳಲಿ ಎಂದು ಸವಾಲು ಹಾಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟವಾಳಗಿ ಕೊಟೇಶ, ಜಿ.ಹನುಮಂತಪ್ಪ, ಮುಖಂಡರಾದ ಹನಕನಹಳ್ಳಿ ಹಾಲೇಶ, ಚಂದ್ರನಾಯ್ಕ, ದಿವಾಕರ, ರಡ್ಡಿನಾಯ್ಕ, ಬಿ.ಎಲ್.ಶ್ರೀಧರ, ಜಿ. ವಸಂತ, ಜೆ.ಶಿವರಾಜ್ ಸೇರಿದಂತೆ ಇದ್ದರು.