ಬಿಜೆಪಿಗರಿಗೆ ಪದ ಬಳಕೆಯ ಕನಿಷ್ಠ ಪ್ರಜ್ಞೆ ಇಲ್ಲ

| Published : Dec 25 2024, 12:51 AM IST

ಸಾರಾಂಶ

ಬಿಜೆಪಿ ಅನೈತಿಕತೆ ಧುರೀಣರಿಂದ ಕೂಡಿದ ಪಕ್ಷವೆಂದು ಈಗಾಗಲೇ ಹಲವು ಬಾರಿ ಜಗಜ್ಜಾಹೀರಾಗಿದೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಡಾ.ಅಂಬೇಡ್ಕರ ಬಗ್ಗೆ ಅವಮಾನಕರ ಮಾತುಗಳಾಡಿರುವ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ರಾಷ್ಟ್ರಪತಿಗಳು ತಕ್ಷಣ ಕ್ರಮ ಜರುಗಿಸಬೇಕೆಂದು ಹಾಗೂ ವಿಪ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ಸ್ತ್ರೀಕುಲವೇ ನಾಚಿಕೆ ಪಡುವಂಥ ಪದ ಬಳಸಿ ಅವಮಾನಿಸಿರುವುದಕ್ಕೆ ರಾಜ್ಯಪಾಲರು ಶಾಸಕತ್ವ ರದ್ದುಗೊಳಿಸಿ ವಿಚಾರಣೆ ನಡೆಸಬೇಕೆಂದು ತೇರದಾಳ ಕ್ಷೇತ್ರ ಕಾಂಗ್ರೆಸ್ ವರಿಷ್ಠ ಸಿದ್ದು ಕೊಣ್ಣೂರ ಆಗ್ರಹಿಸಿದರು.

ಮಂಗಳವಾರ ಬನಹಟ್ಟಿ ಬಸ್ ನಿಲ್ದಾಣದಿಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಎಂ.ಎಂ.ಬಂಗ್ಲೆ ಮತ್ತು ಸಿಪಿಐ ಕಚೇರಿ ಎದುರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ಬಿಜೆಪಿ ಅನೈತಿಕತೆ ಧುರೀಣರಿಂದ ಕೂಡಿದ ಪಕ್ಷವೆಂದು ಈಗಾಗಲೇ ಹಲವು ಬಾರಿ ಜಗಜ್ಜಾಹೀರಾಗಿದೆ. ಸದನದಲ್ಲಿ ಸಂವಿಧಾನದತ್ತ ಮಾನ್ಯ ಶಬ್ಧಗಳನ್ನು ಬಳಸಬೇಕೆಂಬ ಕನಿಷ್ಠ ಪ್ರಜ್ಞೆ ಇಲ್ಲದವರ ಮೇಲೆ ಸಭಾಧ್ಯಕ್ಷರು ಉಗ್ರ ಕ್ರಮ ಜರುಗಿಸಬೇಕೆಂದರು.

ರಾಜ್ಯ ಸಹ ಕಾರ್ಯದರ್ಶಿ ಬಸವರಾಜ ಕೊಕಟನೂರ ಮಾತನಾಡಿ, ಅಸಂವಿಧಾನಿಕ ನಡೆ ಮತ್ತು ಮಾತುಗಳನ್ನು ಬಳಸುವ ಮೂಲಕ ಸದನದ ಘನತೆಗೆ ಮತ್ತು ಸಚಿವೆ ಚಾರಿತ್ರ್ಯಕ್ಕೆ ಧಕ್ಕೆ ತರುವ ಮೂಲಕ ರಾಜ್ಯದ ಸಮಸ್ತ ಸ್ತ್ರೀ ಸಂಕುಲಕ್ಕೆ ಅವಮಾನಿಸಿರುವ ಮತ್ತು ಸಂವಿಧಾನ ಕರ್ತೃವಿನ ಬಗ್ಗೆ ಹಗುರ ಮಾತಾಡುವ ಮೂಲಕ ಅಮಿತ್ ಶಾ ತಾವೆಷ್ಟು ಸಂವಿಧಾನಕ್ಕೆ ಗೌರವಿಸುತ್ತೇವೆಂದು ಬಿಂಬಿಸಿದ್ದಾರೆಂದರು.

ಶಿವಲಿಂಗ ಗೊಂಬಿಗುಡ್ಡ, ಭೀಮಶಿ ಮಗದುಂ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಡ್ಡಿಮನಿ ಮಾತನಾಡಿ, ಬಿಜೆಪಿ ಮನುವಾದದ ಪಕ್ಷವಾಗಿದೆ. ಡಾ.ಬಾಬಾಸಾಹೇಬರ ಘನತೆಗೆ ಚ್ಯುತಿ ಮಾಡಲು ಬಾಲಿಶ ಮಾತಾಡಿದ್ದರೆ, ರಾಜ್ಯದ ಬೆಳಗಾವಿ ಸದನದಲ್ಲಿ ಮಾತೆತ್ತಿದರೆ ಮಾತೆಯರೇ, ಭಗಿನಿಯರೇ ಎಂದು ಸಂಬೋಧಿಸುವ ಬಿಜೆಪಿ ಹಿರಿಯ ನಾಯಕರು, ಯುವ ನಾಯಕರು ಸಾಕಷ್ಟು ಲೈಂಗಿಕ ಹಗರಣಗಳನ್ನು ನಡೆಸುವ ಮೂಲಕ ನೈತಿಕ ದಿವಾಳಿತನ ತೋರಿದ್ದಾರೆ. ಪರಮೋಚ್ಛ ನಾಯಕನ ಮೇಲೆಯೇ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇಂಥ ಹಿನ್ನೆಲೆ ಪಕ್ಷದ ಪೀಪೀ ರವಿ ಸಚಿವೆ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಸಿರುವುದು ಅವರ ಪಕ್ಷದ ರಕ್ತಗುಣದ ಪ್ರತೀಕವಾಗಿದೆ. ಸಿ.ಟಿ.ರವಿ ಸದಸ್ಯತ್ವ ರದ್ದುಗೊಳಿಸುವ ಮೂಲಕ ನಾಡಿನ ಮಹಿಳೆಯರ ಘನತೆ ಎತ್ತಿಹಿಡಯಲು ಸಭಾಧ್ಯಕ್ಷರು, ರಾಜ್ಯಪಾಲರು ಮುಂದಾಗಬೇಕೆಂದರು.

ಪ್ರತಿಭಟನೆಯಲ್ಲಿ ಡಾ.ಎ.ಆರ್.ಬೆಳಗಲಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೆಂಕನಗೌಡ ಪಾಟೀಲ, ಪರಪ್ಪ ಉರಭಿನವರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ನೀಲೇಶ ದೇಸಾಯಿ, ಅಶೋಕ ಆಳಗೊಂಡ, ಹರ್ಷವರ್ಧನ ಪಟವರ್ಧನ್, ಬಸವರಾಜ ಗುಡೋಡಗಿ, ಶೆಟ್ಟೆಪ್ಪ ಸುಣಗಾರ, ಶಂಕರ ಕೆಸರಗೊಪ್ಪ, ಆಯೇಶಾ ಫಣಿಬಂಧ, ರವಿ ಬಾಡಗಿ, ಸದಾಶಿವ ಗೊಂದಕರ, ಕಿರಣ ಕರ್ಲಟ್ಟಿ, ರಾಹುಲ ಕಲಾಲ್, ಭರಮು ಉಳ್ಳಾಗಡ್ಡಿ, ಸಂಜೀವ ಜೋತಾವರ, ಅನೀಲ ಬೀಳಗಿ ಮುಂತಾದವರು ನೇತೃತ್ವ ವಹಿಸಿದ್ದರು.