ಸಾರಾಂಶ
ಕನ್ನಡಪ್ರಭ ವಾರ್ತೆ ತಾಂಬಾ
ದೇಶಭಕ್ತಿಯನ್ನು ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ. ಪ್ರಧಾನಿ ಮೋದಿ ಅವರು ಚುನಾವಣೆಗಳಲ್ಲಿ ತಮ್ಮ ಸಾಧನೆ ಹೇಳದೇ ಹಿಂದು-ಮುಸ್ಲಿಂ, ದೇವಸ್ಥಾನಗಳನ್ನು ಮುಂದಿಟ್ಟುಕೊಂಡು ಮತಕೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ ಹಾಗೂ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ಹರಿಹಾಯ್ದರು.ಗ್ರಾಮದ ಶ್ರೀ ಸಂಗನಬಸವೇಶ್ವರ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶ ಉಳಿಸಿ ಬೆಳೆಸಿದವರ ಕೊಡುಗೆ ಬಹಳವಿದೆ. ಈಗ ಹತ್ತು ವರ್ಷದಿಂದ ದೇಶ ಪ್ರೇಮ ಕಲಿಸಿಕೊಡಲಾಗುತ್ತಿದೆ. ನಮಗೆ ೧೯೪೭ರಲ್ಲಿ ಸ್ವಾತಂತ್ರ್ಯ ಸಿಕ್ಕಿತ್ತು. ಆಗ ಮೋದಿ ಮತ್ತು ಅಮಿತ್ ಶಾ ಎಲ್ಲಿದ್ದರು? ನಿಜವಾದ ದೇಶ ಭಕ್ತರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ವಿನಃ ಬಿಜೆಪಿಯಲ್ಲಿಲ್ಲ. ಮೋದಿ ಅವರ ರೊಟ್ಟಿ ತವೆ ಮೇಲೆ ಹೊತ್ತುತ್ತಿದೆ. ಅದನ್ನು ತಿರುವಿ ಹಾಕುವ ಕೆಲಸ ಈ ಬಾರಿ ಮತದಾರರು ಮಾಡಬೇಕು ಎಂದರು.ನಾವು ಬಿಜೆಪಿಯಲ್ಲಿದ್ದಾಗ ಏನೇನೋ ಹೇಳಿ ತಲೆ ಕೆಡಿಸಲಾಗುತ್ತಿತ್ತು. ಆರ್‌ಎಸ್‌ಎಸ್ ಮೂಲದವರಿಂದ ನಮಗೆ ಭಾಷಣ ಹೇಗೆ ಮಾಡಬೇಕು ಎಂದು ಕಲಿಸಲಾಗುತ್ತಿತ್ತು. ಇದನ್ನು ನಂಬಿ ನಾವು ಸ್ವಿಸ್ ಬ್ಯಾಂಕ್, ದೇಶದ ಸಾಲ, ಅಕೌಂಟಿಗೆ ಹದಿನೈದು ಲಕ್ಷ, ಚಿನ್ನದ ರಸ್ತೆ ಅಂತೆಲ್ಲ ಮಾತಾಡುತ್ತಿದ್ದೆವು. ಇದೆಲ್ಲ ಅವರ ರಾಷ್ಟ್ರ ಭಕ್ತಿ. ಆ ಭ್ರಮೆಯಿಂದ ನಾವೆಲ್ಲ ಹೊರ ಬಂದೆವು. ನೀವೂ ಬಿಜೆಪಿ ಬಿತ್ತಿರುವ ಸುಳ್ಳುಗಳಿಂದ ಹೊರಗೆ ಬನ್ನಿ ಎಂದು ಜನರಿಗೆ ಕರೆ ನೀಡಿದರು.
ವಿಷ ಬೀಜ ಬಿತ್ತುವ ಸೂಲಿಬೆಲೆ:ಬಿಜೆಪಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಜನರಿಗೆ ತನ್ನಮಾತಿನಿಂದ ಚುನಾವಣೆಯಲ್ಲಿ ಮರುಳುಮಾಡಿ ಹಿಂದು-ಮುಸ್ಲಿಂ ವಿಷಬೀಜ ಬಿತ್ತಿ ಹೋದವನು ಮತ್ತೆ ೫ ವರ್ಷದವರೆಗೆ ಯಾರಿಗೂ ಕಾಣಿಸುವುದಿಲ್ಲ. ಇಂತವರು ಬಿಜೆಪಿಯಲ್ಲಿ ತುಂಬಿದ್ದಾರೆ. ನಿಷ್ಠಾವಂತ ನಾಯಕರಿಗೆ ಅಲ್ಲಿ ಬೆಲೆಯಿಲ್ಲ. ದೇಶವನ್ನು ಇಬ್ಬರೇ ಆಳುತ್ತಿದ್ದಾರೆ. ಅಲ್ಲಿ ಸಂಸದರಿಗೆ ಮಾತನಾಡಲು ಬಿಡುವುದೇ ಇಲ್ಲ. ಅಂತಹ ಪಕ್ಷಕ್ಕೆ ನೀವು ಈ ಬಾರಿ ಬುದ್ಧಿ ಕಲಿಸಬೇಕು ಎಂದರು.
ಕಾಂಗ್ರೆಸ್ ಗೆಲವು ಖಚಿತ:ನೀವು ರಾಜು ಆಲಗೂರರಿಗೆ ವೋಟು ಹಾಕಿ ಎನ್ನಲು ನಮಗೆ ನೈತಿಕ ಹಕ್ಕಿದೆ. ನಮ್ಮ ಅಭ್ಯರ್ಥಿ ಅಭಿವೃದ್ಧಿ ಪರ ಚಿಂತಕರಾಗಿದ್ದಾರೆ. ನೀವು ಈ ಸಲ ಬದಲಾವಣೆ ತನ್ನಿ, ದೇಶದಲ್ಲೂ ಬದಲಾವಣೆ ಖಂಡಿತ ಆಗಲಿದೆ. ಯಾವ ಕೆಲಸವೂ ಮಾಡದೇ ಇರುವ ಕಾರಣ ಮೋದಿ ಅವರ ವರ್ಚಸ್ಸು ಮುಗಿದಿದೆ. ಹೇಳಿಕೊಳ್ಳಲು ಅವರ ಬಳಿ ವಿಷಯಗಳೇ ಇಲ್ಲ. ಬರೇ ಸುಳ್ಳಿನ ಸಾಮ್ರಾಜ್ಯ ಕಟ್ಟುತ್ತಿದ್ದಾರೆ. ಈ ಬಾರಿ ದೇಶದಲ್ಲಿ ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು.
ಸಂಪೂರ್ಣ ಅಭಿವೃದ್ಧಿಗೆ ಬದ್ಧ:ಪಕ್ಷದ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಬಹು ದೊಡ್ಡ ಕೆಲಸ ಮಾಡಲಾಗಿದೆ. ನಾವು ಬಸವ ನಾಡಿನವರು. ಕಾಂಗ್ರೆಸ್ ಪಕ್ಷ ಕೂಡ ಬಸವಣ್ಣನವರ ಹಾದಿಯಲ್ಲಿ ನಡೆಯುತ್ತಿದೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಶ್ರಮಿಸುತ್ತಿದ್ದೇವೆ. ಈಗಿನ ಕೇಂದ್ರ ಸರ್ಕಾರದ ಮೋದಿ ಹಾಗೂ ಇಲ್ಲಿನ ಸಂಸದ ಜಿಗಜಿಣಗಿ ಅವರು ಏನೊಂದು ಕೆಲಸ ಮಾಡಿಲ್ಲ. ಬರೀ ಅಧಿಕಾರದಲ್ಲಿ ಇದ್ದದ್ದೇ ಇವರ ಸಾಧನೆಯಾಗಿದೆ. ಮೂರು ಸಲ ಸಂಸದರಾದರೂ ಜಿಲ್ಲೆ ಹಾಗೇ ಉಳಿದಿದೆ. ಈ ಬಾರಿ ಬದಲಾವಣೆ ತಂದರೆ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಈ ಜಿಲ್ಲೆಗೆ ನೀರಾವರಿ ಸೇರಿದಂತೆ ಕಾಂಗ್ರೆಸ್ ಬಹುಪಾಲು ಕೆಲಸವನ್ನು ಮಾಡಿದೆ. ಗ್ಯಾರಂಟಿಗಳ ಮೂಲಕ ಹೆಣ್ಣುಮಕ್ಕಳ, ಸಾಮಾನ್ಯ ಜನರ ಬಾಳು ಬೆಳಗಲಾಗಿದೆ. ಅದೇ ರೀತಿ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಲಕ್ಷ ರುಪಾಯಿ, ರೈತರ ಸಾಲ ಮನ್ನಾ ಹಾಗೂ ಬೆಳೆದ ಬೆಳೆಗೆ ಒಂದೇ ಬೆಲೆ ನಿಗದಿ ಕಾರ್ಯಗಳು ಆಗಲಿವೆ. ನಮ್ಮವರೇ ಸಂಸದರಾದರೆ ಜಿಲ್ಲೆಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಮಾತನಾಡಿ, ಕಾಂಗ್ರೆಸ್‌ಗೆ ಯಾಕೆ ಮತ ನೀಡಬೇಕು ಎಂದು ತಿಳಿ ಹೇಳುತ್ತ ನಮಗೆ ಕೆಲಸ ಮಾಡುವ ಸಂಸದ ಬೇಕು. ಮೋದಿಯವರ ಸಾಧನೆ ಶೂನ್ಯವಾಗಿರುವಾಗ ಅವರ ಮುಖ ನೋಡಿ ಹೇಗೆ ಮತ ನೀಡಬೇಕು ಎಂದು ಕೇಳಿದರು.
ಈ ವೇಳೆ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ರವಿಕುಮಾರ ಚವ್ಹಾಣ, ಜೆ.ಎಸ್.ಹತ್ತಳ್ಳಿ, ಮಲ್ಲಣ್ಣ ಸಾಲಿ, ಕಾಮೇಶ ಉಕ್ಕಲಿ, ಗುರಣ್ಣಗೌಡ ಪಾಟೀಲ, ಶ್ರೀಮಂತ ಲೋಣಿ, ಅಪ್ಪಣ್ಣ ಕಲ್ಲೂರ, ಮಹಾದೇವ ಗಡ್ಡದ, ಸುರೇಶ ಗೊಣಸಗಿ, ಸಾದಿಕ್ ಸುಂಬಡ, ಸಿದ್ದು ಹತ್ತಳ್ಳಿ, ಬಿ.ಎಂ.ಪಾಟೀಲ, ಅಶೋಕ ಲಾಗಲೋಟಿ, ವಿನಾಸ ಬೂರಾಮಣಿ, ಭೀರಪ್ಪ ಮ್ಯಾಗೇರಿ, ಮಾದುರಾಯಗೌಡ ಪಾಟೀಲ, ಎಸ್.ಎಸ್.ಹಿರೇಕುರಬರ ಸೇರಿದಂತೆ ಅನೇಕರಿದ್ದರು.---ಕೋಟ್‌ರಮೇಶ ಜಿಗಜಿಣಗಿ ಅವರು ನಿಷ್ಕ್ರೀಯ ಸಂಸದರಾಗಿ ಹೆಸರು ಮಾಡಿದ್ದಾರೆ. ಒಂದು ಗ್ರಾಮವನ್ನು ದತ್ತು ಪಡೆದು ಅದನ್ನೂ ಉದ್ಧಾರ ಮಾಡದೇ ಹೋದರು. ಈ ಸಲ ಆಲಗೂರವರ ಜಯ ನಿಶ್ಚಿತ.
-ಮಲ್ಲಿಕಾರ್ಜುನ ಲೋಣಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ