ಸಾರಾಂಶ
ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನಂತೆ ಮುಸ್ಲಿಮರಿಗೆ 20 ವರ್ಷಗಳ ಹಿಂದೆ ಶೇ.4 ಮೀಸಲಾತಿ ನೀಡಲಾಗಿದೆ.
ಬಳ್ಳಾರಿ: ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಬಿಜೆಪಿಗರು ಹಸಿಸುಳ್ಳು ಹೇಳುತ್ತಿದ್ದು, ಆ ಪಕ್ಷ ಸುಳ್ಳು ಹೇಳುವ ಇನ್‌ಸ್ಟಿಟ್ಯೂಟ್ ತೆರೆದಿದೆ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕರೂರು ಮತ್ತು ಸಿರಿಗೇರಿಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಪರ ಮತ ಪ್ರಚಾರ ನಡೆಸಿ ಅವರು ಮಾತನಾಡಿದರು.ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನಂತೆ ಮುಸ್ಲಿಮರಿಗೆ 20 ವರ್ಷಗಳ ಹಿಂದೆ ಶೇ.4 ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿಯನ್ನು ತೆಗೆಯಲು ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಸರ್ಕಾರ ಪ್ರಯತ್ನಿಸಿತ್ತು. ಬಳಿಕ ಬಸವರಾಜ ಬೊಮ್ಮಾಯಿ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಮೀಸಲಾತಿ ಮುಂದುವರಿಸುವುದಾಗಿ ಅಫಿಡವಿಟ್ ಸಲ್ಲಿಸಿತು. ಈಗಲೂ ಹಿಂದಿನಂತೆ ಮೀಸಲಾತಿ ಮುಂದುವರೆದಿದೆ. ಈ ವಿಚಾರದಲ್ಲಿ ಬಿಜೆಪಿಗರು ಸುಳ್ಳು ಹೇಳುತ್ತಿದ್ದಾರೆ ಎಂದರು.
ಅತೀ ಹೆಚ್ಚು ಸುಳ್ಳು ಹೇಳುವವರು ಬಳ್ಳಾರಿಯಲ್ಲಿದ್ದು, ಅದರಲ್ಲಿ ಓರ್ವ ಮಹಾಶಯ ನಮ್ಮ ಜಿಲ್ಲೆಗೆ ಬಂದು ಶಾಸಕರಾಗಿದ್ದಾರೆ. ನಿತ್ಯ ಜನಕ್ಕೆ ಸುಳ್ಳು ಹೇಳುವುದನ್ನೇ ಪರಿಪಾಠ ಮಾಡಿಕೊಂಡಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಿ.ಎಂ. ನಾಗರಾಜ್, ಗಣೇಶ್ ಪ್ರಸಾದ್, ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವಾಷಿಂಗ್ ಮಷಿನ್‌ನಲ್ಲಿ ರೆಡ್ಡಿ: ಬಿಜೆಪಿಯಲ್ಲಿ ಭ್ರಷ್ಟಾಚಾರ ನಡೆಸಿದ್ದವರನ್ನು ವಾಷಿಂಗ್ ಮಷಿನ್ ಗೆ ಹಾಕಿ ಶುಚಿ ಮಾಡುವ ಪದ್ಧತಿ ಇದೆ. ಇದಕ್ಕೆಂದೇ ಆ ಪಕ್ಷದ ಕಚೇರಿಯಲ್ಲಿ ಮಾತ್ರ ದೊಡ್ಡದಾದ ವಾಷಿಂಗ್ ಮಷಿನ್ ಇಟ್ಟಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ಭ್ರಷ್ಟಾಚಾರವೆಸಗಿದ್ದರು. ರೆಡ್ಡಿಯನ್ನು ಇತ್ತೀಚೆಗೆ ಮಷಿನ್‌ನಲ್ಲಿ ಅದ್ದಿ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಶಿವರಾಜ್ ತಂಗಡಗಿ ಛೇಡಿಸಿದರು.