ಪಾದಯಾತ್ರೆ ಕೌಲ್‌ಬಜಾರ್‌ ಪ್ರವೇಶಿಸುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಜನರು ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಬಳ್ಳಾರಿ: ಬಳ್ಳಾರಿ ನಗರದ ಅತಿ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಿಕೊಂಡಿರುವ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೌಲ್‌ಬಜಾರ್‌ ಪ್ರದೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಳ್ಳಾರಿ ಚಲೋ ಪಾದಯಾತ್ರೆ ಬುಧವಾರ ಸಂಜೆ ಭರ್ಜರಿ ಪ್ರವೇಶ ಪಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ವಿಜಯೇಂದ್ರ ಕೌಲ್‌ಬಜಾರ್‌ನ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದರು.

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೌಲ್‌ಬಜಾರ್‌ ಹಾಗೂ ರೇಡಿಯೋ ಪಾರ್ಕ್ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲೊಂದಾಗಿದೆ. ಈ ಹಿನ್ನೆಲೆ ಪಾದಯಾತ್ರೆ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಕಲ್ಪಿಸಿದ್ದರು.

ಪಾದಯಾತ್ರೆ ಕೌಲ್‌ಬಜಾರ್‌ ಪ್ರವೇಶಿಸುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಜನರು ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಿಜೆಪಿ ಬಾವುಟ, ಪಕ್ಷದ ಘೋಷಣೆ ಹಾಗೂ ವಿಜಯೇಂದ್ರ ಪರ ಘೋಷಣೆಗಳು ಮೊಳಗಿದವು. ಪಾದಯಾತ್ರೆಯುದ್ದಕ್ಕೂ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು.

ಐದು ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ: ಕೌಲ್‌ಬಜಾರ್‌ ಪ್ರದೇಶದ ಸೂಕ್ಷ್ಮತೆ ಹಿನ್ನೆಲೆ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು. ಸುಮಾರು ಐದು ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವಿವಿಧೆಡೆ ನಿಯೋಜಿಸಲಾಗಿತ್ತು. ಪ್ರಮುಖ ವೃತ್ತ, ಸಂಪರ್ಕ ರಸ್ತೆಗಳು, ಮೆರವಣಿಗೆ ಸಾಗುವ ಮಾರ್ಗ ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಸಂಚಾರ ವ್ಯವಸ್ಥೆ ನಿಯಂತ್ರಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸಿದರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಕೂಡ ಶಿಸ್ತು ಕಾಪಾಡುವಂತೆ ಪಕ್ಷದ ಮುಖಂಡರು ಸೂಚನೆ ನೀಡಿದ್ದರು.

ಅಲ್ಪಸಂಖ್ಯಾತರ ಪ್ರದೇಶದಲ್ಲಿ ಶಕ್ತಿ ಪ್ರದರ್ಶನ:ಇದುವರೆಗೆ ಬಿಜೆಪಿ ಸಂಘಟನೆಗೆ ಸವಾಲಿನ ಪ್ರದೇಶವೆಂದು ಪರಿಗಣಿಸಲಾಗುತ್ತಿದ್ದ ಕೌಲ್‌ಬಜಾರ್‌ನಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿರುವುದು ಪಕ್ಷದ ಪಾಲಿಗೆ ರಾಜಕೀಯವಾಗಿ ಮಹತ್ವ ಪಡೆದಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಪಾದಯಾತ್ರೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಸಾರ್ವಜನಿಕರು ಮೆರವಣಿಗೆ ವೀಕ್ಷಿಸಿದರು. ಕೆಲವರು ಮೊಬೈಲ್‌ಗಳಲ್ಲಿ ಪಾದಯಾತ್ರೆಯ ದೃಶ್ಯ ಸೆರೆಹಿಡಿದರು.

ಜನರ ಧ್ವನಿಯಾಗಿಯೇ ನಮ್ಮ ಹೋರಾಟ: ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಳ್ಳಾರಿ ಚಲೋ ಪಾದಯಾತ್ರೆ ಯಾವುದೇ ಒಂದು ಸಮುದಾಯದ ವಿರುದ್ಧದ ಹೋರಾಟವಲ್ಲ. ರಾಜ್ಯದ ಜನರ ಸಮಸ್ಯೆ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ನಡೆಸುತ್ತಿರುವ ಹೋರಾಟ ಎಂದು ಹೇಳಿದರು.

ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡಲು ಬಂದಿಲ್ಲ. ರಾಜ್ಯದ ಜನರ ಪರ ಧ್ವನಿ ಎತ್ತಲು ಬಂದಿದ್ದೇವೆ. ಬಡವರು, ರೈತರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಜನರ ತೆರಿಗೆ ಹಣ ಸಮರ್ಪಕವಾಗಿ ಬಳಸಬೇಕು. ಸರ್ಕಾರದ ವೈಫಲ್ಯ ಜನರ ಮುಂದಿಡುವುದು ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ಎಂದು ಹೇಳಿದರು.

ಕೌಲ್‌ಬಜಾರ್‌ ಸೇರಿದಂತೆ ಬಳ್ಳಾರಿಯ ಪ್ರತಿಯೊಂದು ಪ್ರದೇಶವೂ ನಮಗೆ ಒಂದೇ. ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ನಮ್ಮ ಸಹೋದರ, ಸಹೋದರಿಯರಿದ್ದಂತೆ. ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ರಾಜಕಾರಣ ಬಿಜೆಪಿಯ ಉದ್ದೇಶವಲ್ಲ. ಅಭಿವೃದ್ಧಿ ಮತ್ತು ಜನಪರ ಆಡಳಿತವೇ ನಮ್ಮ ಗುರಿ ಎಂದು ವಿಜಯೇಂದ್ರ ಹೇಳಿದರು.

ಸರ್ಕಾರಕ್ಕೆ ಎಚ್ಚರಿಕೆ: ಜನರ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ. ನಾವು ವಿಧಾನಸಭೆಯ ಒಳಗೂ, ಹೊರಗೂ ಜನರ ಪರ ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಿರಂತರವಾಗಿ ಧ್ವನಿ ಎತ್ತಲಿದೆ. ಅಧಿಕಾರದಲ್ಲಿರುವವರು ಜನರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು.

ಬಳ್ಳಾರಿಯ ಜನರು ಹೋರಾಟದ ಇತಿಹಾಸ ಹೊಂದಿರುವವರು. ಈ ನೆಲದಲ್ಲಿ ಜನರ ಹಕ್ಕುಗಳಿಗಾಗಿ ಅನೇಕ ಹೋರಾಟಗಳು ನಡೆದಿವೆ. ಇಂದು ಬಳ್ಳಾರಿ ಚಲೋ ಮೂಲಕ ರಾಜ್ಯ ಸರ್ಕಾರದ ಗಮನ ಜನರ ಸಮಸ್ಯೆಗಳತ್ತ ಸೆಳೆಯುತ್ತಿದ್ದೇವೆ. ಈ ಹೋರಾಟ ಕೇವಲ ಬಿಜೆಪಿಯ ಹೋರಾಟವಲ್ಲ, ಜನರ ಸಮಸ್ಯೆಗಳ ಪರವಾದ ಹೋರಾಟ ಎಂದು ವಿಜಯೇಂದ್ರ ಪುನರುಚ್ಛಿಸಿದರು.