ಮುರಿನಕಟ್ಟೆ ಧ್ವಂಸ ಖಂಡಿಸಿ ಇಲ್ಲಿನ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು.

ಮುರಿನಕಟ್ಟೆ ಧ್ವಂಸ ಮಾಡಿದವರನ್ನು ಗಡಿಪಾರು ಮಾಡಿ: ಆರ್. ಅಶೋಕ

ಕನ್ನಡಪ್ರಭ ವಾರ್ತೆ ಭಟ್ಕಳ

ಮುರಿನಕಟ್ಟೆ ಧ್ವಂಸ ಖಂಡಿಸಿ ಇಲ್ಲಿನ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನಸಭೆ ವಿಪಕ್ಷದ ನಾಯಕ ಆರ್. ಅಶೋಕ, ಮುರಿನಕಟ್ಟೆ ಪ್ರದೇಶ ಹಿಂದೂಗಳ ಶ್ರದ್ಧಾಭಕ್ತಿಯ ಸ್ಥಳವಾಗಿದೆ. ಈ ಪ್ರದೇಶದಲ್ಲಿ ನಿರ್ಮಿಸಿದ್ದ ಕಟ್ಟೆಯನ್ನು ಧ್ವಂಸ ಮಾಡಿದವರನ್ನು ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಬೇಕು. ಕಟ್ಟೆ ಧ್ವಂಸ ಮಾಡಿದವರು ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟೆಯನ್ನು ಇದ್ದ ಸ್ಥಳದಲ್ಲೇ ನಿರ್ಮಿಸಿಕೊಡಬೇಕು. ಸರಕಾರ ಕಟ್ಟೆ ನಿರ್ಮಿಸಿಕೊಡದೇ ಇದ್ದಲ್ಲಿ ನಾನೇ ಬಂದು ಕಟ್ಟೆ ಕಟ್ಟುತ್ತೇನೆ. ಮುರಿನಕಟ್ಟೆಯನ್ನು ಮತ್ತೊಂದು ದತ್ತಪೀಠ ತರ ವಿವಾದಿತ ಪ್ರದೇಶವನ್ನಾಗಿ ಮಾಡಬೇಡಿ ಎಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.

ಮುರಿನಕಟ್ಟೆಗೆ ನೂರಾರು ವರ್ಷದ ಇತಿಹಾಸ ಇದೆ. ಆದರೆ ಸುತ್ತಮುತ್ತಲಿನಲ್ಲಿ ಮನೆ ಕಟ್ಟಿಕೊಂಡವರು ಯಾವಾಗನಿಂದ ಇದ್ದಾರೆ. ಹೀಗಾಗಿ ಮುರಿನಕಟ್ಟೆ ಸಕ್ರಮ, ಅದರ ಪಕ್ಕಕ್ಕೆ ಇದ್ದವರು ಅಕ್ರಮ ಎಂದ ಅವರು, ಶಾಂತಿ ಶಾಂತಿ ಎಂದು ನಮಗೆ ವಾಂತಿ ಮಾಡಿಸಬೇಡಿ. ಇಂದು ಮುರಿನಕಟ್ಟೆ ಧ್ವಂಸ ಮಾಡಿದವರು, ನಾಳೆಗೆ ಮನೆಯ ತುಳಸಿಕಟ್ಟೆಯ ವರೆಗೂ ಬರಬಹುದು. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಾವು ನ್ಯಾಯ, ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ನಮ್ಮ ದೇಶ, ಭಾರತ ಮಾತೆ ಪ್ರೀತಿಸುವವರನ್ನು ನಂಬುತ್ತೇವೆ. ಆದರೆ ಪಾಕಿಸ್ತಾನದ ಏಜೆಂಟ್‌ರಾಗಿ ಕೆಲಸ ಮಾಡುತ್ತಿರುವ ದೇಶದ್ರೋಹಿಗಳನ್ನು ಎಂದಿಗೂ ನಂಬುವುದಿಲ್ಲ. ಇವರನ್ನು ಗಡಿಪಾರು ಮಾಡಬೇಕು. ಬಿಹಾರ, ಪಶ್ಚಿಮ ಬಂಗಾಳದಲ್ಲಿನ ಅಕ್ರಮ ಬಾಂಗ್ಲಾದೇಶಿಗರನ್ನು ಗಡಿಪಾರು ಮಾಡುತ್ತಿದ್ದೇವೆ. ಕರ್ನಾಟಕದಲ್ಲೂ 10 ಲಕ್ಷ ಬಾಂಗ್ಲಾಗಳು ಇದ್ದು, ಭಟ್ಕಳದಲ್ಲೂ ಇದ್ದಾರೆ. ಅಂತವರನ್ನು ಗಡಿಪಾರು ಮಾಡಬೇಕಿ ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಇದ್ದ ಸ್ಥಳದಲ್ಲೇ ಕಟ್ಟೆ ಕಟ್ಟುತ್ತೇವೆ. ಮುಸ್ಲಿಮರಿಗೆ ಮುರಿನಕಟ್ಟೆ ಸಂಬಂಧ ಇಲ್ಲದಿದ್ದರೂ ಧ್ವಂಸ ಮಾಡುವುದರ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಿದ್ದಾರೆ. ಕಟ್ಟೆ ಧ್ವಂಸಕ್ಕೆ ಕುಮ್ಮಕ್ಕು ನೀಡಿದ ಮುಖಂಡರ ಮೇಲೂ ಕೇಸು ದಾಖಲಿಸಿ ಬಂಧಿಸಬೇಕು. ನ್ಯಾಯ ಕೇಳಲು ಹೋದ ಹಿಂದೂಗಳ ಮೇಲಿನ ಕೇಸು ವಾಪಸ್ ಪಡೆಯಬೇಕು ಎಂದ ಅವರು ಹಿಂದೂಗಳು ಒಗ್ಗಟ್ಟಾಗಬೇಕು. ನಮ್ಮಲ್ಲಿ ಒಡಕು ಮೂಡಿಸುವ ಕೆಲಸ ಕೆಲವರು ಮಾಡುತ್ತಿದ್ದು, ಇದಕ್ಕೆಲ್ಲಾ ಆಸ್ಪದ ಕೊಡಬಾರದು ಎಂದು ಹೇಳಿದರು.

ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಹಿಂದೂಗಳ ತಾಳ್ಮೆ ಕೆದಕಬೇಡಿ. ಕಟ್ಟೆ ಕಟ್ಟುತ್ತೇವೆ. ನಮ್ಮ ಮೇಲೆ ದಬ್ಬಾಳಿಕೆ, ಕೇಸು ದಾಖಲಿಸುವುದಕ್ಕೆ ನಾವು ಹೆದರುವುದಿಲ್ಲ ಎಂದರು.

ಮುಖಂಡ ಗೋವಿಂದ ನಾಯ್ಕ ಮಾತನಾಡಿ, ಕಟ್ಟೆ ಧ್ವಂಸಕ್ಕೆ ತಂಝೀಂ ಕಾರಣ. ತಂಝೀಂ ಕುಮ್ಮಕ್ಕಿನಿಂದಲೇ ಕಟ್ಟೆ ಧ್ವಂಸ ಮಾಡಲಾಗಿದೆ. ತಂಜೀಂಗೆ ತಮ್ಮ ಸಮುದಾಯದ ಯುವಕರ ನಿಯಂತ್ರಿಸುವ ತಾಕತ್ತು ಇಲ್ಲ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಮಾಜಿ ಎಮ್ಮೆಲ್ಸಿ ಸಿದ್ದರಾಮಣ್ಣ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಪಟ್ಟಣದ ಆಟೋ ರಿಕ್ಷಾ ಗಣೇಶೋತ್ಸವ ಮೈದಾನದಿಂದ ಪ್ರತಿಭಟನೆ ರ್‍ಯಾಲಿ ನಡೆಯಿತು.