ಹಾವೇರಿಯಲ್ಲಿ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಅಹೋರಾತ್ರಿ ಬಿಜೆಪಿ ವತಿಯಿಂದ ಪ್ರತಿಭಟನೆ

| N/A | Published : Apr 11 2025, 12:37 AM IST / Updated: Apr 11 2025, 01:13 PM IST

ಹಾವೇರಿಯಲ್ಲಿ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಅಹೋರಾತ್ರಿ ಬಿಜೆಪಿ ವತಿಯಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನರು ರೋಸಿ ಹೋಗಿದ್ದಾರೆ. ಬೆಲೆ ಏರಿಕೆಯಿಂದ ಬಡವರು ಬದುಕುವುದೇ ದುಸ್ತರವಾಗಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮರ್ಯಾದೆ ಇಲ್ಲದಂತಾಗಿದೆ.

ಹಾವೇರಿ: ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಜಿಲ್ಲಾ ಘಟಕದಿಂದ ಇಲ್ಲಿಯ ಮೈಲಾರ ಮಹದೇವಪ್ಪ ವೃತ್ತದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪಕ್ಷದ ಮುಖಂಡರು ವಾಗ್ದಾಳಿ ನಡೆಸಿದರು.

ಬೆಳಗ್ಗೆ 11 ಗಂಟೆಗೆ ಶುರುವಾದ ಪ್ರತಿಭಟನೆಗೆ ಜಿಲ್ಲೆಯ ವಿವಿಧೆಡೆಯಿಂದ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಆಗಮಿಸಿದ್ದರು. ಬಿಸಿಲನ್ನೂ ಲೆಕ್ಕಿಸದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್, ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನರು ರೋಸಿ ಹೋಗಿದ್ದಾರೆ. ಬೆಲೆ ಏರಿಕೆಯಿಂದ ಬಡವರು ಬದುಕುವುದೇ ದುಸ್ಥರವಾಗಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮರ್ಯಾದೆ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಹೆಸರಿನಲ್ಲಿ ₹2 ಸಾವಿರ ಕೊಟ್ಟು ಗಂಡುಮಕ್ಕಳಿಂದ ₹20 ಸಾವಿರ ಕಿತ್ತುಕೊಳ್ಳುತ್ತಿದೆ. ಎಲ್ಲ ಫ್ರೀ ಕೊಟ್ಟು ಜನರ ಜೇಬಿಗೆ ಕತ್ತರಿ ಹಾಕಿ ಹಗಲು ದರೋಡೆ ಮಾಡುತ್ತಿದ್ದಾರೆ. 

ಮುಂದಿನ ದಿನಗಳಲ್ಲಿ ಜನರು ರಸ್ತೆಯಲ್ಲಿ ನಿಲ್ಲಿಸಿ ಹೊಡೆಯುವ ದಿನ ಬರಲಿದೆ. ಜಿಲ್ಲೆಯಲ್ಲಿ ಬೆಳೆ ಹಾನಿ ಸಂಭವಿಸಿದ್ದಾಗ ನಮ್ಮ ಸರ್ಕಾರದಿಂದ ₹430 ಕೋಟಿ ಹಣ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ₹1.46 ಲಕ್ಷ ಕೋಟಿ ಸಾಲ ಮಾಡಿ ಲೂಟಿ ಮಾಡ್ತಿದ್ದಾರೆ. ಸಿಎಂ, ಡಿಸಿಎಂ ನಡುವೆಯೇ ಲೂಟಿ ಹೊಡೆಯಲು ಸ್ಪರ್ಧೆ ಏರ್ಪಟ್ಟಿದೆ. ತಾಕತ್ ಇದ್ದರೆ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದ ಅವರು, ಹಾಲು ಕೊಡುವ ರೈತರಿಗೆ ಜಿಲ್ಲೆಯಲ್ಲಿ ಹಾಲಿನ ದರ ಇಳಿಕೆ ಮಾಡಿ ವಿಷ ಕೊಡುವ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರು, ರೈತರಿಗೆ ಮೋಸ ಮಾಡಿದೆ. ಭ್ರಷ್ಟರಲ್ಲಿ ಶ್ರೇಷ್ಠ ಸರ್ಕಾರವಾಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರು. ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಬೆಲೆ ಏರಿಕೆ ಮಾಡಿ ಬಡರವನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದರು.

 ಈ ವೇಳೆ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೆಲಗಾರ, ಭೋಜರಾಜ ಕರೂದಿ, ಗವಿಸಿದ್ದಪ್ಪ ದ್ಯಾಮಣ್ಣವರ, ಭರತ್ ಬೊಮ್ಮಾಯಿ, ಮಂಜುನಾಥ ಓಲೇಕಾರ, ಪಾಲಾಕ್ಷಗೌಡ ಪಾಟೀಲ, ಮುರಿಗೆಪ್ಪ ಶೆಟ್ಟರ, ಕೆ. ಶಿವಲಿಂಗಪ್ಪ, ಸುರೇಶ ಹೊಸಮನಿ, ನಾಗೇಂದ್ರ ಕಡಕೋಳ, ಕಲ್ಯಾಣಕುಮಾರ ಶೆಟ್ಟರ, ಜಗದೀಶ ಬಸೇಗಣ್ಣಿ, ವೆಂಕಟೇಶ ನಾರಾಯಣಿ, ರುದ್ರೇಶ ಚಿನ್ನಣ್ಣನವರ, ಪ್ರಭು ಹಿಟ್ನಳ್ಳಿ, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ವಿಜಯಕುಮಾರ ಚಿನ್ನಿಕಟ್ಟಿ, ಶಿವಯೋಗಿ ಹುಲಿಕಂತಿಮಠ, ರಾಜ್ಯ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ, ಭಾರತಿ ಜಂಬಗಿ, ಲಲಿತಾ ಗುಂಡೇನಹಳ್ಳಿ, ರೋಹಿಣಿ ಪಾಟೀಲ, ಪುಷ್ಪಾ ಚಕ್ರಸಾಲಿ ಸೇರಿದಂತೆ ಇತರರು ಇದ್ದರು.