ಸಾರಾಂಶ
ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಮನವಿ ನೀಡಿದರು.
ಕೂಡಲೇ ವಾಪಾಸ್ ಪಡೆಯದಿದ್ದರೆ ಹೋರಾಟ: ರೆಡ್ಡಿಹಳ್ಳಿವೀರಣ್ಣಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕರ್ನಾಟಕದಲ್ಲಿ ಕಳೆದ 2023 ರಲ್ಲಿ ಬಹುಮತ ಪಡೆದು ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತ ಹಿತವನ್ನು ಕಡೆಗಣಿಸಿದೆಯಲ್ಲದೆ, ಪ್ರತಿನಿತ್ಯ ಎಲ್ಲ ವಸ್ತುಗಳ ಬೆಲೆ ಏರಿಸುವ ಮೂಲಕ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ. ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಏರಿಸಿದ ಎಲ್ಲಾ ಬೆಲೆಯನ್ನು ಕೂಡಲೇ ರದ್ದುಗೊಳಿಸಿ ರೈತ ಸಮುದಾಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಬೆಳೆವಿಮೆ ಹಣ ಸೇರಿದಂತೆ ಸೌಲಭ್ಯಗಳನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸರ್ಕಾರವನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.ಬುಧವಾರ ರೈತರು ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿನಿತ್ಯವೂ ಸಾರ್ವಜನಿಕರು, ರೈತರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ರಾಜ್ಯ ಯಾವುದೇ ನೀರಾವರಿ ಯೋಜನೆಗಳಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ, ಭದ್ರಾ ಮೇಲ್ದಂಡೆಯೋಜನೆಗಳ ಪೂರ್ಣಗೊಳಿಸಲು ಆಸಕ್ತಿ ವಹಿಸಿಲ್ಲ, ರೈತರ ಬದುಕಿಗೆ ಬರೆ ಎಳೆಯುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ರೈತ ಸಂಘದ ತಾಲೂಕು ಅದ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ ಮಾತನಾಡಿ, ಸರ್ಕಾರಗಳು ರೈತರ ಮನವಿಯನ್ನು ಪುರಸ್ಕರಿಸದೇ ಹೋದಲ್ಲಿ ಪ್ರತಿಭಟನೆಯನ್ನು ತೀರ್ವಗೊಳಿಸಲಾಗುವುದು. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಸಚಿವ ಸಂಪುಟ ಸಭೆ ಕರೆದು ಬೆಲೆ ಏರಿಕೆ ನಿಯಂತ್ರಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರೇಹಾನ್ ಪಾಷ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಂದಿನಕ್ರಮಕ್ಕಾಗಿ ಸರ್ಕಾರಕ್ಕೆ ಕಳಿಸುವ ಭರವಸೆ ನೀಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಬಸವರಾಜು, ರಾಜಣ್ಣ, ಸಣ್ಣಪಾಲಯ್ಯ, ಬಿ.ಒ.ಒಬಯ್ಯ, ಶಿವಕುಮಾರ್, ಕೃಷ್ಣಪ್ಪ, ಈರಣ್ಣ, ತಿಪ್ಪೇಸ್ವಾಮಿ, ಚಿತ್ತಯ್ಯ, ಮೊಹಮ್ಮದ್ ನಯಾಜ್, ಬಂಗಾರಯ್ಯ, ಜಯಣ್ಣ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.