ಕೇಂದ್ರದ ಬಿಜೆಪಿ ಸರ್ಕಾರ ಸುಳ್ಳು ಪ್ರಕರಣಗಳನ್ನು ದಾಖಲಿಸಿ ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿದೆ.

ಹೊಸಪೇಟೆ: ಕೇಂದ್ರದ ಬಿಜೆಪಿ ಸರ್ಕಾರ ಸುಳ್ಳು ಪ್ರಕರಣಗಳನ್ನು ದಾಖಲಿಸಿ ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿದೆ. ಕೂಲಿ ಕಾರ್ಮಿಕರಿಗಾಗಿ ಇರುವ ನರೇಗಾ ಯೋಜನೆಯ ಹೆಸರು ಬದಲಿಸಿ ಮಹಾತ್ಮ ಗಾಂಧೀಜಿ ಅವರನ್ನು ಅಪಮಾನಗೊಳಿಸಿದ್ದಾರೆ ಎಂದು ಆರೋಪಿಸಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರದ ವಿರುದ್ಧ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.

ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪ ಮಾತನಾಡಿ, ಜಾತಿ ಧರ್ಮದ ಮೇಲೆ ಚುನಾವಣೆ ಮಾಡುವ ಬಿಜೆಪಿಗೆ ನಾವು ಹೆದರಲ್ಲ. ಗಾಂಧೀಜಿ ಹೆಸರಿನಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ ಮನರೇಗಾ ಯೋಜನೆಯಿಂದ ಗಾಂಧಿ ಹೆಸರು ತೆಗೆಯುತ್ತಿದ್ದಾರೆ. ಇದು ರಾಷ್ಟ್ರಪಿತನಿಗೆ ಮಾಡುತ್ತಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ ಕಳ್ಳತನ ಮಾಡಿ ಸರ್ಕಾರ ರಚಿಸಿದ್ದು, ಅಧಿಕಾರ ಪಡೆದು ಅಲ್ಪಸಂಖ್ಯಾತರು, ಮಹಿಳೆಯರನ್ನು ಬೆದರಿಸುತ್ತಿದ್ದಾರೆ. ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆದರೆ ಬಿಜೆಪಿಯ ನಿಜ ಸ್ವರೂಪ ಗೊತ್ತಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದರೆ ರಾಜಿನಾಮೆ ಕೊಟ್ಟು ಬ್ಯಾಲೆಟ್ ಪೇಪರ್ ಚುನಾವಣೆ ನಡೆಸಲಿ. ಮತಕಳ್ಳತನದ ಬಣ್ಣ ಬಯಲಾಗಲಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಿನಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇಡೀ ದೇಶ ನಮ್ಮ ಜೊತೆಗಿದೆ. ಸುಳ್ಳು ಕೇಸುಗಳನ್ನು ಹಾಕಿ ವಿರೋಧ ಪಕ್ಷಗಳನ್ನು ಹತ್ತಿಕ್ಕುವುದನ್ನು ಸಹಿಸುವುದಿಲ್ಲ ಎಂದರು.

ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಮಹಾತ್ಮ ಗಾಂಧೀಜಿ ಹೆಸರಿನಲ್ಲಿ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆಯಿಂದ ವಲಸೆ ತಡೆಯಲಾಗಿತ್ತು. ಜಿಲ್ಲೆಯಲ್ಲಿ 2,34,871 ಜನ, 11,2,966 ಕುಟುಂಬ ಈ ಯೋಜನೆ ಮೇಲೆ ಅವಲಂಬಿತವಾಗಿವೆ. 3,89,660 ಜನ ಕೆಲಸ ಮಾಡುತ್ತಿದ್ದಾರೆ. ಇಷ್ಟು ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಇಡೀ ರಾಜ್ಯದಲ್ಲಿ 65ರಿಂದ 70 ಲಕ್ಷ ಜನ ಅವಲಂಬಿತರಾಗಿದ್ದು, ಯೋಜನೆಯನ್ನು ಜಿ ರಾಮ್ ಜಿ ಹೆಸರಿಗೆ ವರ್ಗಾಯಿಸುವ ಮೂಲಕ ಯೋಜನೆ ಮುಚ್ಚಿ ಹಾಕುವ ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದರು.ನ್ಯಾಷನಲ್‌ ಹೆರಾಲ್ಡ್ ಪತ್ರಿಕೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಪ್ರಧಾನಿ ಹುದ್ದೆಯನ್ನು ಗಾಂಧಿ ಕುಟುಂಬ ತ್ಯಾಗ ಮಾಡಿದೆ. ಅವರು ಮನಸ್ಸು ಮಾಡಿದ್ದರೆ ಎರಡನೇ ಅವಧಿಗೆ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬಹುದಿತ್ತು. ಆದರೆ, ದೇಶ ಮುಖ್ಯ ಎಂಬ ಕಾರಣಕ್ಕೆ ದೇಶ ಉಳಿಸಲು ಮನಮೋಹನ್‌ ಸಿಂಗ್ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲಾಯಿತು. ಕಾಂಗ್ರೆಸ್‌ ಯಾವತ್ತೂ ರಾಜಕಾರಣ ಮಾಡುವುದಿಲ್ಲ. ಬಡವರ ಪರ ನಿಲ್ಲುತ್ತದೆ. ಈಗ ಕೂಲಿ ಕಾರ್ಮಿಕರ ಯೋಜನೆಯನ್ನು ರದ್ದುಗೊಳಿಸುವ ಹುನ್ನಾರ ನಡೆದಿದೆ ಎಂದು ದೂರಿದರು.

ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಮಾತನಾಡಿದರು. ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಹುಡಾ ಅಧ್ಯಕ್ಷ ಇಮಾಮ್‌ ನಿಯಾಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧಾಕರ ಬಡಿಗೇರ, ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಕೆ. ರಮೇಶ್, ಕೆಪಿಸಿಸಿ ಮಾಧ್ಯಮ ಸಂಯೋಜಕ ಇರ್ಫಾನ್ ತೂಫಾನ್, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಕೆ.ಎಸ್. ದಾದಾ ಪೀರ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಕೊಟ್ರೇಶ್, ಹನುಮಂತಪ್ಪ, ವಿನಾಯಕ ಶೆಟ್ಟರ್, ಖಾಜಾ ಹುಸೇನ್, ಗುರು ಸಿದ್ದನಗೌಡ, ಕುಮಾರ್ ಗೌಡ, ವಿ.ಅಂಜಿನಪ್ಪ, ಕುಬೇರಪ್ಪ, ಮುಖಂಡರಾದ ಶಿವಪ್ಪ ನಾಯಕ, ಸೈಯದ್ ಶುಕ್ರು, ಕೆ .ಬಿ. ಶ್ರೀನಿವಾಸ ರೆಡ್ಡಿ, ಪಿ.ವೀರಾಂಜನೇಯ್ಯ, ಲಿಂಗಣ್ಣ ನಾಯಕ, ಬಿ.ಮಾರೆಣ್ಣ, ತಮ್ಮನ್ನೆಳ್ಳಪ್ಪ, ಸೋಮಶೇಖರ್ ಬಣ್ಣದಮನೆ, ಸಣ್ಣಮಾರೆಪ್ಪ, ಎಲ್‌.ಎಂ. ನಾಯ್ಕ, ವೆಂಕಟೇಶುಲು, ವಿಜಯಕುಮಾರ್, ಮರಡಿ ಮಂಜುನಾಥ, ಸದ್ದಾಂ ಹುಸೇನ್, ಸಂಗಪ್ಪ, ಇಂದುಮತಿ, ಶೇಖ್ ತಾಜುದ್ದೀನ್, ಸಿ.ಆರ್.ಭರತ ಕುಮಾರ್, ಕೆ.ಇಮ್ತಿಯಾಜ್, ಜೆ.ಶಿವಕುಮಾರ, ಅರ್ಬಾಜ್ ಖಾನ್ ಎಸ್.ಬಿ.ಮಂಜುನಾಥ, ಎಂ.ಎಂ..ಶ್ರೀನಿವಾಸ್‌ ಮತ್ತಿತರರಿದ್ದರು.