ಸಾಮಾನ್ಯರಿಗೂ ಉನ್ನತ ಹುದ್ದೆ ನೀಡುವ ಪಕ್ಷ ಬಿಜೆಪಿ: ಶೈಲೇಂದ್ರ ಬೆಲ್ದಾಳೆ

| Published : Apr 07 2024, 01:49 AM IST

ಸಾಮಾನ್ಯರಿಗೂ ಉನ್ನತ ಹುದ್ದೆ ನೀಡುವ ಪಕ್ಷ ಬಿಜೆಪಿ: ಶೈಲೇಂದ್ರ ಬೆಲ್ದಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವರ ಹಿತದ ಜೊತೆಗೆ ದೇಶದ ಸಮಗ್ರ ವಿಕಾಸಕ್ಕೆ ಬಿಜೆಪಿ ದುಡಿಯುತ್ತಿದೆ. ಬಿಜೆಪಿ ತನ್ನದೇ ಆದ ಸಿದ್ಧಾಂತ, ವಿಚಾರಧಾರೆಗಳ ಮೇಲೆ ಗಟ್ಟಿಯಾಗಿ ನಿಂತಿದೆ. ಸಣ್ಣ, ಸಣ್ಣ ಕಾರ್ಯಕರ್ತರಿಗೆ, ಸಾಮಾನ್ಯರಿಗೂ ದೊಡ್ಡ ಅವಕಾಶ ಕೊಡುವ ಏಕೈಕ ಪಕ್ಷವಿದು. ಕಾರ್ಯಕರ್ತರ ಶ್ರಮಕ್ಕೆ ಇಲ್ಲಿ ಮಾತ್ರ ಬೆಲೆಯಿದೆ ಎಂದು ಶೈಲೇಂದ್ರ ಬೆಲ್ದಾಲೆ ಬಿಜೆಪಿ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಬಿಜೆಪಿ ವಿಶ್ವದಲ್ಲೇ ಅತೀ ದೊಡ್ಡದಾದ ಪಕ್ಷವಾಗಿದೆ. ಇಂತಹ ಪಕ್ಷದಲ್ಲಿ ಇದ್ದಿರುವುದೇ ನಮ್ಮೆಲ್ಲರ ಹೆಮ್ಮೆ ಮತ್ತು ಸೌಭಾಗ್ಯ. ಸಾಮಾನ್ಯರಿಗೂ ಸಹ ಉನ್ನತ ಹುದ್ದೆ ಕೊಡುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು,ಬಿಜೆಪಿ ದೇಶದ ಸೇವೆಗೆ ಅವಕಾಶ ಕೊಟ್ಟಿದೆ. ಸರ್ವರ ಹಿತದ ಜೊತೆಗೆ ದೇಶದ ಸಮಗ್ರ ವಿಕಾಸಕ್ಕೆ ಬಿಜೆಪಿ ದುಡಿಯುತ್ತಿದೆ. ಅನೇಕರ ಅವಿರತ ಶ್ರಮ, ಹಲವರ ತ್ಯಾಗ, ಬಲಿದಾನ, ಸಂಘರ್ಷದ ಫಲವಾಗಿ ಇಂದು ಪಕ್ಷ ಹೆಮ್ಮರವಾಗಿ ಬೆಳೆದಿದೆ. ಆದರೆ ತನ್ನದೇ ಆದ ಸಿದ್ಧಾಂತ, ವಿಚಾರಧಾರೆಗಳ ಮೇಲೆ ಗಟ್ಟಿಯಾಗಿ ನಿಂತಿದೆ. ಸಣ್ಣ, ಸಣ್ಣ ಕಾರ್ಯಕರ್ತರಿಗೆ, ಸಾಮಾನ್ಯರಿಗೂ ದೊಡ್ಡ ಅವಕಾಶ ಕೊಡುವ ಏಕೈಕ ಪಕ್ಷವಿದು. ಕಾರ್ಯಕರ್ತರ ಶ್ರಮಕ್ಕೆ ಇಲ್ಲಿ ಮಾತ್ರ ಬೆಲೆಯಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಈ ಸಲ ಬಹಳ ಅರ್ಥಪೂರ್ಣವಾಗಿ ಸಂಸ್ಥಾಪನಾ ದಿನ ಆಯೋಜಿಸಿದ್ದಾರೆ. ಹಿಂದಿನ ಮಾಜಿ ಜಿಲ್ಲಾಧ್ಯಕ್ಷ ದಂಪತಿಗೂ ಸಹ ಆಹ್ವಾನಿಸಿ ಗೌರವಿಸುವ ಮೂಲಕ ಕಾರ್ಯಕ್ರಮಕ್ಕೆ ಭಾವನಾತ್ಮಕ ಸಂದೇಶ ಕೊಟ್ಟಿದ್ದಾರೆ. ಭಾವನೆ, ದೇಶಾಭಿಮಾನ, ಸಂಬಂಧಕ್ಕೆ ಬಿಜೆಪಿಯಲ್ಲಿ ಮಾತ್ರ ಬೆಲೆಯಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಮಾತನಾಡಿ, ದೇಶದ ಅಖಂಡತೆ, ದೇಶದ ಪರಮವೈಭವದ ಪುನರುತ್ಥಾನಕ್ಕೆ ಮೊದಲು ಜನಸಂಘ ಅಸ್ತಿತ್ವಕ್ಕೆ ಬಂತು. 1980ರ ಏ.6ರಂದು ಇದು ಬಿಜೆಪಿಯಾಗಿ ರಚನೆಗೊಂಡಿತು. ಅಟಲ್ ಬಿಹಾರಿ ವಾಪೇಯಿ ಬಿಜೆಪಿ ಮೊದಲ ಅಧ್ಯಕ್ಷರಾಗಿ ಹಾಗೂ ಇವರ ಜೊತೆಗೆ ಲಾಲಕೃಷ್ಣ ಆಡ್ವಾಣಿ ಇತರರು ಸೇರಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದರು. ಜನಸಂಘದಿಂದ ನಮ್ಮ ದಾರಿ ಆರಂಭವಾಯಿತು. ಶ್ಯಾಮಾಪ್ರಸಾದ ಮುಖರ್ಜಿ ಕಂಡಿದ ಕನಸು ನನಸು ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಬಿಜೆಪಿ ಬರೀ ಪಕ್ಷವಲ್ಲ ಎಂದರು.

ವಿಭಾಗ ಸಂಘಟನಾ ಸಹ ಕಾರ್ಯದರ್ಶಿ ಸೂರ್ಯಕಾಂತ ಢೋಣೆ, ಎಂಎಲ್‌ಸಿ ರಘುನಾಥರಾವ ಮಲ್ಕಾಪುರೆ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷರಾದ ಸುಭಾಷ ಕಲ್ಲೂರ್, ಪ್ರಕಾಶ ಖಂಡ್ರೆ, ಬಾಬುರಾವ ಮದಕಟ್ಟಿ, ನಂದಕಿಶೋರ ವರ್ಮಾ, ಶಿವರಾಜ ಗಂದಗೆ, ಶಿವಾನಂದ ಮಂಠಾಳಕರ್ ಅವರು ಮಾತನಾಡಿ, ಪಕ್ಷದ ಸಂಘಟನೆಗಾಗಿ ಮಾಡಿರುವ ಕಾರ್ಯವನ್ನು ಮೆಲಕು ಹಾಕಿದರು.

ಈ ವೇಳೆ ಎಲ್ಲ ಮಾಜಿ ಜಿಲ್ಲಾ ಅಧ್ಯಕ್ಷರಿಗೆ ದಂಪತಿ ಸಮೇತವಾಗಿ ಗೌರವ ಸನ್ಮಾನ ಮಾಡಲಾಯಿತು. ದಿ.ನಾರಾಯಣರಾವ ಮನ್ನಳ್ಳಿ ಅವರ ಧರ್ಮಪತ್ನಿ, ದಿ.ಅಶೋಕ ಗುತ್ತೇದಾರ್ ಅವರ ಧರ್ಮಪತ್ನಿ ಆಗಮಿಸಿ ಸನ್ಮಾನ ಸ್ವೀಕರಿಸಿದರು. ಪ್ರಮುಖರಾದ ಜಯಕುಮಾರ ಕಾಂಗೆ, ರಾಜಶೇಖರ ಮೂರ್ತಿ, ಕಿರಣ ಪಾಟೀಲ್ ಹಕ್ಯಾಳ್ ಇತರರಿದ್ದರು. ಪೀರಪ್ಪ ಯರನಳ್ಳೆ ನಿರೂಪಣೆ ಮಾಡಿದರೆ, ಮಾಧವ ಹಸೂರೆ ವಂದಿಸಿದರು.