ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಿಜೆಪಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಕಡಿಮೆ ಮಾಡಲಿಲ್ಲ. ಕಪ್ಪು ಹಣ ಬಡವರ ಖಾತೆಗೆ ಬರಲಿಲ್ಲ. ಬಿಜೆಪಿ ಏನಿದ್ದರೂ ಶ್ರೀಮಂತರ ಪರವಾದ ಪಕ್ಷ ಎಂದು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ನಡೆದ ಕಬ್ಬಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಡವರು ಖರೀದಿಸುವ ಪ್ರತಿ ವಸ್ತುವಿಗೂ ಜಿಎಸ್‌ಟಿ ಹಾಕಿದ್ದಾರೆ ಅದೇ ಶ್ರೀಮಂತರಿಗೆ ಸಾಲ ಮನ್ನಾ ಮಾಡ್ತಾರೆ. ಜೊತೆಗೆ ಜಿಎಸ್‌ಟಿ ಕಡಿತಗೊಳಿಸುತ್ತಿದ್ದಾರೆ. ಬಿಜೆಪಿಗೆ ಬಡವರು, ಮದ್ಯಮ ವರ್ಗದ ಜನ ಓಟು ನೀಡಬೇಕಾ ಎಂದು ಗುಡುಗಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರ ಇದ್ದ ಕಾರಣದಿಂದಲೇ ಐದು ಗ್ಯಾರಂಟಿ ಜಾರಿಗೆ ತಂದಿದೆ. ಕಾಂಗ್ರೆಸ್ ಬಡವರು, ಮದ್ಯಮ ವರ್ಗದ ಪರ ಎಂದು ಕಾಂಗ್ರೆಸ್ ಕಾರ್ಯಕ್ರಮಗಳೇ ಹೇಳುತ್ತಿವೆ. ಇದನ್ನು ಮತದಾರರು ಅರ್ಥ ಮಾಡಿಕೊಂಡು ಬಿಜೆಪಿಗೆ ಈ ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು. ರಾಜ್ಯದ ಬಡವರಿಗೆ ಐದು ಗ್ಯಾರಂಟಿ ನೀಡುವುದನ್ನು ಬಿಜೆಪಿಗರು ಸಹಿಸುತ್ತಿಲ್ಲ. ಬಿಜೆಪಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಐದು ಗ್ಯಾರಂಟಿಗಳು ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗುತ್ತಿದೆ. ಇದು ಶ್ರೀಮಂತರ ಪರವಿರುವ ಬಿಜೆಪಿಗರಿಗೆ ಅರ್ಥವಾಗುತ್ತಿಲ್ಲ ಎಂದು ಕಿಡಿ ಕಾರಿದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರನ್ನು ೨೬ ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅತೀ ಹೆಚ್ಚಿನ ಲೀಡ್ ಕಾಂಗ್ರೆಸ್‌ಗೆ ಬಂದರೆ ಗಣೇಶ್ ಪ್ರಸಾದ್ ಅವರಿಗೆ ಶಕ್ತಿ ಬರಲಿದೆ ಎಂದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಸಂಸದ ಎ.ಸಿದ್ದರಾಜು, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್ ಮಾತನಾಡಿದರು.ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಹಳ್ಳಿ ಶಿವನಾಗಪ್ಪ, ಮೃತ್ಯುಂಜಯ, ಮುಖಂಡರಾದ ಸಾಹುಕಾರ್ ಸುಬ್ಬಣ್ಣ, ಸಿರಿಯಪ್ಪ, ಕೆ.ಎನ್.ಪ್ರದೀಪ್ ಕುಮಾರ್, ಕಬ್ಬಹಳ್ಳಿ ನಂಜುಂಡಸ್ವಾಮಿ, ಸೋಮಹಳ್ಳಿ ರವಿ, ದೀರಜ್ ಪ್ರಸಾದ್, ಹಿರೀಕಾಟಿ ದಿನೇಶ್ ಸೇರಿದಂತೆ ನೂರಾರು ಮಂದಿ ಇದ್ದರು.ರಾಷ್ಟ್ರದಲ್ಲೂ ಕಾಂಗ್ರೆಸ್ ಪರ ಅಲೆ ಎದ್ದಿದೆ: ಶಾಸಕ ಗಣೇಶ್
ರಾಷ್ಟ್ರದಲ್ಲೂ ಜನ ಬದಲಾವಣೆ ಬಯಸಿದ್ದಾರೆ ಕಾಂಗ್ರೆಸ್ ಪರ ಅಲೆ ಎದ್ದಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ತಾಲೂಕಿನ ಕಬ್ಬಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಾಂಗ್ರೆಸ್ ದೇಶದಲ್ಲಿ ಬಲಿಷ್ಠವಾಗಿದೆ. ದೇಶದಲ್ಲಿ ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರಿಗೆ ತಟ್ಟಿದೆ. ಬಿಜೆಪಿ ಸರ್ಕಾರ ಬಡವರ ಪರವಾಗಿಲ್ಲ ಎಂಬುದು ಬಡವರು, ಮದ್ಯಮ ವರ್ಗದ ಜನರು ಹೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿ ಹಾಯ್ದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಐದು ಗ್ಯಾರಂಟಿ ಜಾರಿಗೆ ತರುವ ಮೂಲಕ ಚುನಾವಣಾ ಪೂರ್ವ ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಈಡೇರಿಸಿದೆ. ಆದರೆ ಕೇಂದ್ರದಲ್ಲಿ ಬಿಜೆಪಿ ೧೦ ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದರೂ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದರು. ಸುನೀಲ್ ಬೋಸ್ ಚಾಮರಾಜನಗರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ನನಗೆ ಕಳೆದ ಚುನಾವಣೆಯಲ್ಲಿ ಬಂದ ಓಟಿಗಿಂತ ಹೆಚ್ಚಿನ ಓಟು ಸುನೀಲ್ ಬೋಸ್ ನೀಡಬೇಕು ಎಂದರು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ವಿರುದ್ಧ ಅಪ್ರಚಾರದಲ್ಲಿ ವಿಪಕ್ಷಗಳು ತೊಡಗಿವೆ. ಸುನೀಲ್ ಬೋಸ್ ಬಗೆಗಿನ ಅಪಪ್ರಚಾರ ನಂಬದೆ ಹೆಚ್ಚಿನ ಮತ ನೀಡುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿ ಎಂದರು.