ಸಾರಾಂಶ
ಸವಣೂರು: ಶಿಗ್ಗಾಂವಿ-ಸವಣೂರು ಉಪ ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಸೋಲುವುದು ಖಚಿತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ ಪಠಾಣ ಗೆಲ್ಲುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ಚಿಲ್ಲೂರ-ಬಡ್ನಿ ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ ಪಠಾಣ ಪರ ಬಹಿರಂಗ ಪ್ರಚಾರ ಕೈಗೊಂಡು ಮತ ಯಾಚಿಸಿ ಮಾತನಾಡಿದರು. ೨೦೧೮ರ ಚುನಾವಣೆಯಲ್ಲಿ ಬಿಜೆಪಿ ೬೦೦ ಭರವಸೆ ನೀಡಿ ಶೇ.೧೦ರಷ್ಟೂ ಈಡೇರಿಸದೇ ಜನರಿಗೆ ಮೋಸ ಮಾಡಿದೆ. ನಾವು ನುಡಿದಂತೆ ನಡೆದಿದ್ದೇವೆ. ಬಡವರಿಗಾಗಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳನ್ನು ನೀಡಿದ್ದೇವೆ. ಇದರಿಂದಾಗಿ ಬಿಜೆಪಿಯವರಿಗೆ ಹೊಟ್ಟೆಯುರಿಯ ಜತೆಗೆ ಸೋಲಿನ ಭಯವೂ ಕಾಡುತ್ತಿದೆ ಎಂದರು.
ಈ ಕ್ಷೇತ್ರದ ಅಭಿವೃದ್ಧಿ ಸಮಗ್ರ ಅಭಿವೃದ್ಧಿ ಆಗಲು ಕೈ ಗೆಲ್ಲಿಸಿ. ಭರತ ಬೊಮ್ಮಾಯಿ ಒಬ್ಬ ಬಡವನೂ ಅಲ್ಲ ರೈತನೂ ಅಲ್ಲ. ಬೊಮ್ಮಾಯಿ ಜನರಿಗೆ ಸುಳ್ಳು ಹೇಳಿ ತಮ್ಮ ಮಗನಿಗೆ ಟಿಕೆಟ್ ತಂದಿದ್ದಾರೆ. ದುಂಡಿಗೌಡರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿ ತಮ್ಮ ಮಗನಿಗೆ ಟಿಕೆಟ್ ನೀಡಿದ್ದಾರೆ. ನಾಲ್ಕು ಬಾರಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದೀರಿ. ಬಸವರಾಜ ಬೊಮ್ಮಾಯಿ ಎಲ್ಲ ಖಾತೆಗಳನ್ನು ಅನುಭವಿಸಿದರು. ೨೦೦೮ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದ್ದಾಗ ಅವರು ಕೊಟ್ಟ ಉತ್ತರ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ, ನಾವೇನು ನೋಟ್ ಪ್ರಿಂಟ್ ಮಾಡುವ ಮಶಿನ್ ಇಟ್ಟಿಲ್ಲ ಎನ್ನುವುದು ಇಂದಿಗೂ ವಿಧಾನ ಪರಿಷತ್ತಿನ ರೆಕಾರ್ಡನಲ್ಲಿದೆ. ರೈತರ ಪರ ಹೋರಾಟ ಮಾಡುವ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಲಿಲ್ಲ. ಆದರೆ, ೨೦೧೩ರಿಂದ ೨೦೧೮ರ ವರೆಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ₹೫೦೦೦೦ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದ್ದೇನೆ. ನರೇಂದ್ರ ಮೋದಿ ಅವರು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ಕಾರ್ಪೊರೇಟರ್‌ಗಳ ₹೧೬ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಅಚ್ಛೇ ದಿನ ಆಯೇಗಾ ಎಂದು ಹೇಳಿದರು. ಆದರೆ, ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದವೆ ಹೊರತು ಬಡವರಿಗೆ ಅಚ್ಛೆ ದಿನ ಬರಲೇ ಇಲ್ಲ. ಯಾರು ನಿಮಗೆ ಧಮ್ ಇದ್ರೆ, ತಾಕತ್ ಇದ್ರೆ ಎಂದು ಸವಾಲು ಹಾಕುವವರು ತಿಳಿದುಕೊಳ್ಳಬೇಕು ಈ ಧಮ್, ತಾಕತ್ತು ಕೊಡುವವರು ಮತದಾರರು ಎಂದು ಬಸವರಾಜ ಬೊಮ್ಮಾಯಿ ಹೆಸರೆತ್ತದೆ ವ್ಯಂಗ್ಯವಾಡಿದರು. ನೀವು ನೀಡುವ ದಮ್ಮು-ತಾಕತ್ತು ನನಗೆ ಇರುವವರೆಗೂ ಯಾವ ಯಡಿಯೂರಪ್ಪನಿಗೆ, ಬಸವರಾಜ ಬೊಮ್ಮಾಯಿಗೆ, ವಿಜಯೇಂದ್ರನಿಗೆ ನಾನು ಜಗ್ಗಲ್ಲ ಬಗ್ಗಲ್ಲ. ಇದು ಜನರಲ್ ಚುನಾವಣೆಯಲ್ಲ, ಇದು ಉಪ ಚುನಾವಣೆ, ನೀವು ತಿಪ್ಪರಲಾಗ ಹಾಕಿದರೂ ಕೂಡ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.ಪರಿವಾರವಾದ ಬಗ್ಗೆ ಮಾತನಾಡುತ್ತಾರೆ. ಆದರೆ, ಯಡಿಯೂರಪ್ಪ ಅವರ ಮಕ್ಕಳನ್ನು ಎಂಎಲ್‌ಎ, ಎಂಪಿ ಮಾಡಿದ್ದೀರಿ. ಎಚ್.ಡಿ. ದೇವೇಗೌಡ, ರೇವಣ್ಣ, ಕುಮಾರಸ್ವಾಮಿ, ಅನಿತಾ , ಇದೀಗ ನಿಖಿಲ್ ಕುಮಾರಸ್ವಾಮಿಯನ್ನು ಎಂಎಲ್‌ಎ ಮಾಡಲು ಹೊರಟಿದ್ದೀರಿ. ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಮಗ ಭರತ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದ್ದೀರಿ, ಇದಕ್ಕೇನಂತೀರಿ ಮೋದಿಯವರೆ? ಯಾವ ನೈತಿಕತೆ ಇದೆ ನಿಮಗೆ ಮತ್ತು ನಿಮ್ಮ ಬಿಜೆಪಿಯವರಿಗೆ? ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ೩ ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸುಳ್ಳು ಆರೋಪಗಳನ್ನು ಸೃಷ್ಟಿ ಮಾಡ್ತಾ ಇದ್ದಾರೆ. ಸುಳ್ಳು ಕೇಸಿನಲ್ಲಿ ಹೇಳಿಕೆ ಕೊಡುವ ಪರಿಸ್ಥಿತಿ ಬಂದಿದೆ. ನಾವು ನುಡಿದಂತೆ ನಡೆದಿದ್ದೇವೆ. ಆದ್ದರಿಂದ ಪಠಾಣ ಅವರನ್ನು ಗೆಲ್ಲಿಸಿ ನನಗೆ ಶಕ್ತಿ ನೀಡಿ ಎಂದು ಮನವಿ ಮಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಬಸವರಾಜ ಬೊಮ್ಮಾಯಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಕೇವಲ ಹುಸಿ ಭರವಸೆಗಳನ್ನೇ ನೀಡುತ್ತಾ ಬಂದಿದ್ದಾರೆ. ೨೦೧೮ರಲ್ಲಿ ಸೋಮಣ್ಣ ಬೇವಿನಮರದ ಅವರಿಗೆ ಆಸೆ ಹುಟ್ಟಿಸಿ ಕೊನೆಗಳಿಗೆಯಲ್ಲಿ ತಾವೇ ಟಿಕೆಟ್ ಗಿಟ್ಟಿಸಿಕೊಂಡರು. ಈ ಸಲದ ಉಪಚುನಾವಣೆಗೆ ಶ್ರೀಕಾಂತ ದುಂಡಿಗೌಡ್ರ ಅವರಿಗೆ ಆಸೆ ತೋರಿಸಿ ಟಿಕೆಟ್ ತಮ್ಮ ಮಗನಿಗೆ ಕೊಡಿಸಿದ್ದಾರೆ. ಹೀಗೆ ಸುಳ್ಳು ಹೇಳಿಯೇ ನಾಲ್ಕು ಬಾರಿ ಶಾಸಕರಾಗಿದ್ದಾರೆ ಎಂದರು.
ಈ ಚುನಾವಣೆಯಲ್ಲಿ ಯಾಸೀರಖಾನ ಪಠಾಣರಿಗೆ ಟಿಕೆಟ್ ಸಿಕ್ಕರೆ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ನನ್ನ ದುಂಬಾಲು ಬೀಳುತ್ತಾರೆ ಎಂದು ತಿಳಿದಿದ್ದ ಬೊಮ್ಮಾಯಿ ಅವರಿಗೆ ಭ್ರಮನಿರಸನವಾಗಿದೆ. ನ. ೧೩ರಂದು ಕಾಂಗ್ರೆಸ್‌ನ ಸಾಮಾನ್ಯ ಅಭ್ಯರ್ಥಿ ಯಾಸೀರಖಾನ ಪಠಾಣ ಅವರಿಗೆ ಮತನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಸಚಿವರಾದ ಈಶ್ವರ ಖಂಡ್ರೆ, ಮಲ್ಲಿಕಾರ್ಜುನ ಶಾಮನೂರ, ಮಾಜಿ ಸಚಿವ ಎಚ್. ಆಂಜನೇಯ, ಉಪ ಸಭಾಧ್ಯಾಕ್ಷ ರುದ್ರಪ್ಪ ಲಮಾಣಿ, ಮುಖ್ಯ ಸಚೇತಕ ಸಲೀಂ ಅಹ್ಮದ, ಶಾಸಕ ಬಸವರಾಜ ಶಿವಣ್ಣವರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ, ತಾಲೂಕು ಅಧ್ಯಕ್ಷ ಎಮ್.ಜೆ.ಮುಲ್ಲಾ, ಮುಖಂಡರಾದ ಬಸವರಾಜ ಗೌಳಿ, ಸುಭಾಸ ಮಜ್ಜಗಿ, ರವಿ ಕರಿಗಾರ, ಬಸವರಾಜ ಹರಿಜನ ಇದ್ದರು.