ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ಸಚಿವರ ಆಪ್ತರೇ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಅಭಿವೃದ್ಧಿಗೂ ಅನುದಾನ ಸಿಗದೇ ಕಾಂಗ್ರೆಸ್ ಶಾಸಕರು ಇಲಾಖೆಗಳಲ್ಲಿ ಮಾಮೂಲಿ ವಸೂಲಿ ಮಾಡುತ್ತಿದ್ದು, ಇಂತಹ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಬಿಜೆಪಿ ನಿರಂತರ ಹೋರಾಟ ನಡೆಸುತ್ತದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನಾನೇ 5 ವರ್ಷ ಸಿ.ಎಂ. ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ವ್ಯಾಪ್ತಿಗೆ ಬಾರದ ವಿಷಯಗಳನ್ನು ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಅನ್ನು ಕಿತ್ತೊಗೆಯುತ್ತೇವೆ ಎಂದು ಹೇಳುತ್ತಾ ಲೇವಡಿಗೊಳಗಾಗಿದ್ದಾರೆ ಎಂದು ಛೇಡಿಸಿದರು.ಗ್ರಾಮಗಳನ್ನು ಉದ್ಧಾರ ಮಾಡಲಿ ಎಂದು ಗ್ರಾಮೀಣಾಭಿವೃದ್ಧಿ ಸ್ಥಾನವನ್ನು ನೀಡಿದ್ದಾರೆ. ಆದರೆ ಡ್ರಗ್ಸ್ ಮಾಫಿಯಾದಲ್ಲಿ ಅವರ ಮುಂದಾಳತ್ವದ ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಬಂಧಿಸಿದೆ ಎಂದರು. ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಮತ್ತು ಶಾಸಕ ಅಲ್ಲಮಪ್ರಭು ಹೆಸರು ತಳುಕು ಹಾಕುತ್ತಿದೆ. ಇವರು ಖಳನಾಯಕರಾಗಿದ್ದಾರೆ. ಕೂಡಲೇ ಸಚಿವರು ಮತ್ತು ಶಾಸಕರು ರಾಜೀನಾಮೆ ನೀಡಬೇಕೆಂದು ಎಂದು ಒತ್ತಾಯಿಸಿದರು. ಪ್ರಿಯಾಂಕ್ ಉಸ್ತುವಾರಿಯ ಕುಡಚಿ ಮತಕ್ಷೇತ್ರದ ಗ್ರಾಮ ಪಂಚಾಯಿತಿಯೊಂದರಲ್ಲಿ ನರೇಗಾ ಯೋಜನೆಯಲ್ಲಿ 14 ಕೋಟಿ ರು.ಗಳ ಅವ್ಯವಹಾರ ನಡೆದಿದೆ. ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಒಂದು ಗ್ರಾಮಪಂಚಾಯಿತಿ 14 ಕೋಟಿ ಅವ್ಯವಹಾರ ಎಂದರೆ 6 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಕೋಟ್ಯಾಂತರ ರು.ಗಳ ಅವ್ಯವಹಾರಗಳನ್ನು ನಡೆಸಿದ್ದಾರೆ ಎಂದರು.ರಾಯಭಾಗ ತಾಲೂಕಿನ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಗ್ಗೆ ಅವರ ಸಹೋದರ ಬಾಬಾ ಸಾಬ್ ಗದ್ದು ಅವರೇ ನರೇಗಾ ಕಾಮಗಾರಿಯಲ್ಲಿ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಹಗರಣ ನಡೆಸುತ್ತಿದ್ದಾರೆ ಎಂದರೆ ಇದಕ್ಕೆ ಪ್ರಿಯಾಂಕ ಖರ್ಗೆಯವರ ಕುಮ್ಮಕ್ಕು ಇದೆ ಎಂಬುದು ಸಾಬೀತಾದಂತೆ ಆಗುತ್ತಿದೆ ಎಂದರು.
ಸಿಎಂ ಹೇಳಿಕೆಗೆ ತೀವ್ರ ಖಂಡನೆ:60 ವರ್ಷಗಳ ಹೋರಾಟದ ಫಲವಾಗಿ 500 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿರುವ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ನೀಡಿದ್ದರೂ ಹೋಗುವ ಮುಖವಿಲ್ಲದೇ ಪ್ರಾಮಾಣಿಕ ಹಾಗೂ ಅಭಿವೃದ್ಧಿಯಲ್ಲಿ ನಂ. 1 ಎಂದು ಖ್ಯಾತಿ ಗಳಿಸಿರುವ ಕೇಂದ್ರ ಸಚಿವ ಗಡ್ಕರಿ ವಿರುದ್ಧ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಇದು ಅವರ ಕೀಳುಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.ಇವರು ಒಂದೇ ಒಂದು ಕಿಮೀ ರಸ್ತೆ ಮಾಡಿಲ್ಲ, ಕೇಂದ್ರ ಸಚಿವ ಗಡ್ಕರಿ ರಾಜ್ಯಕ್ಕೆ 3 ಲಕ್ಷ ಕೋಟಿ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದೆ, ಚೆನ್ನೈಕಾರಿಡಾರ್, ಮೈಸೂರು ವಕಾರಿಡಾರ್, ಡಾಬಸ್ ಪೇಟೆ ರಸ್ತೆ,ನರಸಾಪುರ ಮಾರ್ಗವಾಗಿ ಹೊಸೂರಿಗೆ ಸಂಪರ್ಕ ರಸ್ತೆ ಹೀಗೆ ಹಲವಾರು ಯೋಜನೆ ನೀಡಿದೆ ಎಂದರು.ಭ್ರಷ್ಟತೆಯಿಂದಾಗಿ ಉದ್ಯೋಗ ನಷ್ಟ:
ಕಾಂಗ್ರೆಸ್‌ನವರ ಭ್ರಷ್ಟಾಚಾರಕ್ಕೆ ಹೆದರಿ ಐಟಿಬಿಟಿ ಕಂಪನಿ ಆಂಧ್ರಕ್ಕೆ ಹೋಯಿತು. ಇನ್ಪೋಸಿಸ್‌ಗೆ ಜಮೀನು ನೀಡಲಾಗದ ಕಾರಣ ಹೊಸ ಕಂಪನಿ ಹೈದರಾಬಾದ್‌ಗೆ ಹೋಯಿತು. ಆಪೆಲ್ ಕಂಪನಿಗೆ ಜಾಗ ನೀಡದ ಕಾರಣ ಅದರ ಮತ್ತೊಂದು ಘಟಕ ತಮಿಳುನಾಡಿಗೆ ಹೋಯಿತು ಎಂದು ಟೀಕಿಸಿ, ಇದರಿಂದ ಸಹಸ್ರಾರು ಉದ್ಯೋಗ ಸೃಷ್ಟಿ ಇಲ್ಲದಂತಾಯಿತು ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಿರಾಜು, ಉಪಾಧ್ಯಕ್ಷ ಕೃಷ್ಣಮೂರ್ತಿ, ಮಾಧ್ಯಮ ಸಲಹೆಗಾರ ಪ್ರವೀಣ್‌ಗೌಡ, ಕೆಂಬೋಡಿ ನಾರಾಯಣಸ್ವಾಮಿ, ಮಹಿಳಾ ಅಧ್ಯಕ್ಷೆ ಅಮೃತ ಇದ್ದರು.