ಸಾರಾಂಶ
ಧಾರವಾಡ:
ಬಿಜೆಪಿ ಮುಖಂಡರು ಬರೀ ಹಿಂದೂ ಪರ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಎಷ್ಟು ಹಿಂದುಗಳಿಗೆ ಹಾಗೂ ಹಿಂದೂ ಧರ್ಮಕ್ಕೆ ಅನುಕೂಲ ಮಾಡಿದ್ದಾರೆ? ಮಧ್ಯಮ ವರ್ಗದ ಹಿಂದೂಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದಕ್ಕೆ ಇವರ ಪ್ರಯತ್ನವೇನು? ಎಂದು ಬಿಜೆಪಿ ಮುಖಂಡರ ವಿರುದ್ಧ ಕಾರ್ಮಿಕ ಸಚಿವ ಸಂತೋಷ ಲಾಡ್ ತೀವ್ರ ತರಾಟೆಗೆ ತೆಗೆದುಕೊಂಡರು.ಸುದ್ದಿಗೋಷ್ಠಿಯಲ್ಲಿ ಹೀಗೆ ಪ್ರಶ್ನಿಸಿದ ಲಾಡ್, ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಎಷ್ಟು ಪ್ರಮಾಣದಲ್ಲಿ ಹಿಂದೂಗಳು ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹಿಂದೂ ಕಾರ್ಡ್ ಆಡುವ ಬಿಜೆಪಿ ಮುಖಂಡರು ಅವರಿಂದ ಮತ ಪಡೆಯುತ್ತಿದ್ದಾರೆ. ಬಡತನ ರೇಖೆಯಿಂದ ಅವರನ್ನು ಹೊರ ತಂದಿದ್ದೀರಾ? ನಿತ್ಯ ಹಿಂದೂ ಹಾಗೂ ದೇವರ ಕಾರ್ಡ್ ಬಳಸುತ್ತಿದ್ದು, ಜನರು ಸಹ ಇನ್ನಾದರೂ ಬದಲಾವಣೆ ಆಗಬೇಕು. ಚೀನಾ ಅಂತಹ ದೇಶಗಳೊಂದಿಗೆ ಭಾರತ ಹೋಲಿಸಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದರು.
ದೇಶದ ವ್ಯವಸ್ಥೆಗೆ ಒಬ್ಬರು ಅನಿವಾರ್ಯವಲ್ಲ. ಇವರಿಂದಲೇ ದೇಶ ನಡೆಯುತ್ತಿದೆ. ಇವರು ಜೇಮ್ಸ್ ಬಾಂಡಾ? ಎಲ್ಲರ ಸಮಸ್ಯೆಗೆ ಮೋದಿನಾ ಪರಿಹಾರ ನೀಡುತ್ತಿದ್ದಾರೆಯೇ? ದೇಶಕ್ಕೆ ಅನುಕೂಲ ಆಗುವ ನೀತಿಗಳನ್ನು ಜಾರಿಗೆ ತರಬೇಕು ಹಾಗೂ ಈ ಬಗ್ಗೆ ಚರ್ಚೆ ಮಾಡಬೇಕೆ ಹೊರತು ಹಿಂದೂ ಕಾರ್ಡ್ ಒಗೆಯುವುದಲ್ಲ. ಇಂತಹ ಪ್ರಶ್ನೆಗಳಿಗೆ ಬಿಜೆಪಿ ಮುಖಂಡರಲ್ಲಿ ಯಾವುದೇ ಉತ್ತರವಿಲ್ಲ. ಹತ್ತು ವರ್ಷದಿಂದ ಏನು ಮಾಡಿದ್ದೀರಿ ಎಂದು ಕೇಳಿದರೆ, 70 ವರ್ಷ ನೀವೇನು ಮಾಡಿದ್ದೀರಿ ಎಂದು ಮರು ಪ್ರಶ್ನೆ ಹಾಕುತ್ತಾರೆ ಎಂದರು.ಫಸಲ್ ಬಿಮಾ ಯೋಜನೆ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುತ್ತಿದ್ದು, 2014ರಿಂದ 2024ರ ವರೆಗೆ ಎಷ್ಟು ಜನ ರೈತರಿಗೆ ವಿಮೆ ಹಣ ಬಂದಿದೆ? ಬಿಜೆಪಿ ಸರ್ಕಾರ ಎಷ್ಟು ಕೋಟಿ ಜನರಿಗೆ ಉದ್ಯೋಗ ಭಾಗ್ಯ ನೀಡಿದೆ ಎಂದು ಪ್ರಶ್ನಿಸಿದ ಲಾಡ್, ಪ್ರಧಾನಿ ಮೋದಿ ಅವರು ತಮ್ಮ 11 ವರ್ಷದಲ್ಲಿ ಎಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ? ಈ ಹಿಂದಿನ ಪ್ರಧಾನಿಗಳು ತಂದಿರುವ 23ಕ್ಕೂ ಹೆಚ್ಚು ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚುವ ಕಾರ್ಯ ಮಾಡಿದರು. ಬಿಎಸ್‌ಎನ್‌ಎಲ್ ಸಂಸ್ಥೆ ಉಳಿಸುವ ಬದಲು ಖಾಸಗಿ ಕಂಪನಿಗಳಿಗೆ ಉತ್ತೇಜನ ನೀಡಿದರು. ಈ ಬಗ್ಗೆ ಯಾರೂ ಪ್ರಶ್ನೆ ಮಾಡದೇ ಇರುವುದು ನಮ್ಮ ದೇಶದ ದುರಂತ ಎಂದು ಲಾಡ್ ಬೇಸರ ವ್ಯಕ್ತಪಡಿಸಿದರು.