ಬಿಜೆಪಿ ಸಂವಿಧಾನದ ಬದಲಾವಣೆ ಸುಳಿವು ನೀಡುತ್ತಿದೆ- ಶಾಸಕ ಬಸವರಾಜ ಶಿವಣ್ಣನವರ

| Published : Mar 31 2024, 02:13 AM IST

ಬಿಜೆಪಿ ಸಂವಿಧಾನದ ಬದಲಾವಣೆ ಸುಳಿವು ನೀಡುತ್ತಿದೆ- ಶಾಸಕ ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಶೋಷಿತರ ಧ್ವನಿಗೆ ಹೆಚ್ಚು ಶ್ರಮಿಸಿದವರು. ಅವರು ರಚಿಸಿದ ಸಂವಿಧಾನವನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಆದರೆ ಬಿಜೆಪಿ ಸಂವಿಧಾನದ ಬದಲಾವಣೆ ಸುಳಿವನ್ನು ನೀಡುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಆರೋಪಿಸಿದರು.

ಬ್ಯಾಡಗಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಶೋಷಿತರ ಧ್ವನಿಗೆ ಹೆಚ್ಚು ಶ್ರಮಿಸಿದವರು. ಅವರು ರಚಿಸಿದ ಸಂವಿಧಾನವನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಆದರೆ ಬಿಜೆಪಿ ಸಂವಿಧಾನದ ಬದಲಾವಣೆ ಸುಳಿವನ್ನು ನೀಡುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಆರೋಪಿಸಿದರು.

ಹಾವೇರಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮಾಜದ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಕಳೆದ 60 ವರ್ಷ ದೇಶದಲ್ಲಿ ಸುಭದ್ರ ಆಡಳಿತ ನಡೆಸಿದೆ. ಆದರೆ ಸನದಿ ಅವರ ಬಳಿಕ ಕಾಂಗ್ರೆಸ್ ಹಾವೇರಿ ಕ್ಷೇತ್ರವನ್ನು ಕಳೆದುಕೊಂಡಿದೆ. ಹೀಗಾಗಿ ಮತ್ತೆ ಕ್ಷೇತ್ರವನ್ನು ತಂದುಕೊಡುವಲ್ಲಿ ತಮ್ಮೆಲ್ಲರ ಸಹಕಾರದ ಅವಕಾಶವಿದೆ ಎಂದರು.

ಕಾಂಗ್ರೆಸ್ ಕೊಡುಗೆ ಸ್ಮರಿಸಬೇಕು: ಸ್ವಾತಂತ್ರ್ಯಾ ನಂತರ ದೇಶಕ್ಕೆ ಬದಲಾವಣೆ ತಂದುಕೊಟ್ಟಿದ್ದೇ ಕಾಂಗ್ರೆಸ್. ಹೀಗಾಗಿ ಪಕ್ಷವು ಪರಿಶಿಷ್ಟ ಜಾತಿ ಜನಾಂಗದ ಸಮಾಜದ ಅಭಿವೃದ್ಧಿಗೆ, ಕೊಟ್ಟಿರುವಂತಹ ಕೊಡುಗೆಗಳನ್ನು ಮತದಾರರಿಗೆ ನೀಡುವ ಕೆಲಸವಾಗಬೇಕು. ಇನ್ನಾದರೂ ಪರಿಶಿಷ್ಟ ಜಾತಿ ಜನರು ಎಚ್ಚೆತ್ತುಕೊಂಡು ಮತಗಳನ್ನು ಪಕ್ಷಕ್ಕೆ ನೀಡುವಂತೆ ಮನವಿ ಮಾಡಿದರು.

ಮತಗಳು ಪೇಟೆಂಟ್: ಪರಿಶಿಷ್ಟ ಜಾತಿ ಮತಗಳು ಎಂದಿಗೂ ಕಾಂಗ್ರೆಸ್ ಪೇಟೆಂಟ್ ಮತಗಳಾಗಿವೆ, ಆದರೆ ಬಿಜೆಪಿಯ ಪೊಳ್ಳು ಭರವಸೆಗಳನ್ನು ನಂಬಿಕೊಂಡು ಇತ್ತೀಚಿನ ದಿನಗಳಲ್ಲಿ ಸದರಿ ಸಮಾಜ ಕಾಂಗ್ರೆಸ್‌ನಿಂದ ವಿಮುಖವಾಗುತ್ತಿದೆ, ಇದರ ಪರಿಣಾಮ ಈಗಾಗಲೇ ಸದರಿ ಜನಾಂಗದ ಮೇಲಾಗಿದ್ದು ಇನ್ನಾದರೂ ಕಾಂಗ್ರೆಸ್ ಪಕ್ಷದ ಜೊತೆಗೆ ನಿಲ್ಲುವಂತೆ ಮನವಿ ಮಾಡಿದರು.

ಕಚ್ಚಾಡುವಂತೆ ಮಾಡಿದೆ: ಪುರಸಭೆ ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಹಲವಾರು ಸಮುದಾಯಗಳು ಸೇರಿಕೊಂಡಿವೆ, ಮೀಸಲಾತಿ ವಿಷಯವನ್ನು ಮುಂದಿಟ್ಟುಕೊಂಡು ನಮ್ಮೆಲ್ಲರ ನಡುವೆ ಕಚ್ಚಾಡುವಂತೆ ಮಾಡಿದ್ದೇ ಬಿಜೆಪಿಗರ ಸಾಧನೆಯಾಗಿದೆ. ಕೂಡಲೇ ಸದರಿ ವಿಷಯವನ್ನು ನಮ್ಮೆಲ್ಲ ಸಮಾಜದ ಜನರ ಮುಂದಿಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ದಾನಪ್ಪ ಚೂರಿ, ಚಿಕ್ಕಣ್ಣ ಹಾದಿಮನಿ, ಶಿವನಗೌಡ ವೀರನಗೌಡ್ರ, ಮಾರುತಿ ಅಚ್ಚಿಗೇರಿ ಬಸವರಾಜ ಹೆಡಿಗ್ಗೊಂಡ, ಶಂಕರ ಕುಸಗೂರ, ಬಸವರಾಜ ಗೋಟನವರ, ಗದಿಗೆಪ್ಪ ಲಮಾಣಿ, ಜಗದೀಶ ದೊಡ್ಮನಿ, ಮಾರುತಿ ಹಂಜಗಿ, ರವಿ ಹುಣಶೀಮರದ, ಹಾಲಪ್ಪ ನೀಲಪ್ಪನವರ, ಸೋಮು ಮಾಳಗಿ, ಮಂಜುನಾಥ ಹಂಜಗಿ ಇನ್ನಿತರರಿದ್ದರು.