ಸಾರಾಂಶ
ಅಳ್ನಾವರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಕ್ಷೇತ್ರವೊಂದರಲ್ಲಿ ಚುನಾವಣೆ ವೇಳೆ ಮತಗಳ್ಳತನವಾಗಿದೆ ಎನ್ನುವ ಆರೋಪವನ್ನು ಲೋಕಸಭಾ ವಿಪಕ್ಷನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮ್ದ್ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಅತಿ ಹೆಚ್ಚು ಬೆಂಬಲ ವ್ಯಕ್ತವಾಗಿದ್ದ ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನ ಗಳಿಸುವಂತೆ ಆಗಿದ್ದು ನೋಡಿದರೆ ಅಲ್ಲಿವೂ ಸಹ ಬಿಜೆಪಿ ಮತವನ್ನು ಕದಿಯುವ ಕೆಲಸ ಮಾಡಿದೆ. ಜತೆಗೆ ಈಗ ಬಿಹಾರದಲ್ಲಿಯೂ ಮತವನ್ನು ಕದಿಯವ ಕೆಲಸ ಆರಂಭಿಸಿದ್ದಾರೆ. ಇದರ ಬಗ್ಗೆ ಚರ್ಚೆ ನಡೆಯಬೇಕು ಎನ್ನುವುದು ಕಾಂಗ್ರೆಸ್ ಹಿರಿಯರ ಆಗ್ರಹವಾಗಿದೆ ಎಂದರು.ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷ ಗತಿಸಿದರೂ ಸಹ ಬೆಲೆ ಏರಿಕೆ ನಿಯಂತ್ರಣವಾಗುತ್ತಿಲ್ಲ. ಬಿಜೆಪಿಯವರಿಗೆ ಜನಸಾಮಾನ್ಯರ ಮೇಲೆ ಕರುಣೆ ಇಲ್ಲದಂತಾಗಿದೆ. ದೇಶದಲ್ಲಿ ಬಿಜೆಪಿ ಮೇಲೆ ಜನರ ನಂಬಿಕೆ ಕಡಿಮೆಯಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನೂರು ದಿನದಲ್ಲಿ ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿದ್ದರು. ಆದರೆ, ಈಗ ಅದರ ಬಗ್ಗೆ ಮಾತೇ ಇಲ್ಲ. ಯುವಕರಿಗೆ 2 ಕೋಟಿ ಉದ್ಯೋಗ ಕೊಡುವುದಾಗಿ ಮತ್ತು ರೈತರ ಆದಾಯ ದ್ವಿಗುಣ ಮಾಡುವುದು ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದ್ದರು. ಆದರೆ, ಈಗ ಎಲ್ಲವೂ ಹುಸಿ ಮಾತುಗಳೆ ಆಗಿದ್ದು, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶ ಹಿಂದಕ್ಕೆ ಸಾಗುತ್ತಿದೆ. ಬಿಜೆಪಿ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಹೇಳಿದ ಸಲೀಂ ಅಹ್ಮದ, ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಷ್ಟು ಸೀಟು ಗೆಲ್ಲಲಿಕ್ಕಾಗದೆ ಚಂದ್ರಬಾಬು ನಾಯ್ಡು ಮತ್ತು ನಿತೀಶಕುಮಾರ ಕೃಪಾಕಟಾಕ್ಷದಿಂದ ಈ ಬಾರಿ ಅಧಿಕಾರ ಹಿಡಿದಿದ್ದಾರೆ. ಮುಂಬರುವ ದಿನಗಳಲ್ಲಿ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದು ರಾಗಾ ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತಹ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಯಾವುದೇ ಬೇಧ ಭಾವವಿಲ್ಲದೆ ಜನರಿಗೆ ತಲುಪಿಸುವ ಕಾರ್ಯವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರು ಅನುದಾನ ತರಲು ಪ್ರಯತ್ನಿಸಲಿ ಎಂದರು.ಮಹಾದಾಯಿ ವಿಚಾರದಲ್ಲಿಯೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕೇಂದ್ರದ ಧೋರಣೆಯನ್ನು ಬಿಜೆಪಿ ಸಂಸದರು, ಸಚಿವರು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಬೇಕು. ಈ ಭಾಗದ ಸಂಸದರು, ಕೇಂದ್ರದ ಸಚಿವರಾದ ಪ್ರಹ್ಲಾದ ಜೋಶಿ ಅವರು ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ತಂದು ವಿಜಯೋತ್ಸವಕ್ಕೆ ಕಾಂಗ್ರೆಸ್‌ನವರನ್ನು ಕರೆಯುವುದಾಗಿ ಈ ಹಿಂದೆ ಹೇಳಿದ್ದರು. ಆದರೆ, ಈಗ ತಮ್ಮ ಮಾತನ್ನು ಮರೆತು ರಾಜ್ಯದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ, ಪಪಂ ಅಧ್ಯಕ್ಷ ಅಮೋಲ ಗುಂಜೀಕರ, ಕಾರ್ಮಿಕ ಸಚಿವರ ಆಪ್ತ ಸಹಾಯಕ ಶ್ರೀಕಾಂತ ಗಾಯಕವಾಡ, ಸ್ಥಾಯಿ ಸಮಿತಿ ಚೇರಮನ್ ಜೈಲಾನಿ ಸುದರ್ಜಿ, ಅನ್ವರಖಾನ ಬಾಗೇವಾಡಿ, ನದೀಮ ಕಂಟ್ರಾಕ್ಟರ, ಎಂ.ಎಂ. ತೇಗೂರ, ತಮೀಮ ತೇರಗಾಂವ ಸೇರಿದಂತೆ ಹಲವರಿದ್ದರು.