ಸಾರಾಂಶ
ಹುಬ್ಬಳ್ಳಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಿಜೆಪಿ ಎದುರಾಳಿಯೇ ಅಲ್ಲ. ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಳನ್ನು ಹಾಕಿದ್ದು ನಮ್ಮ ಗೆಲುವು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಆ ಕ್ಷೇತ್ರದಲ್ಲಿ ಜಯ ಗಳಿಸಿರಬಹುದು. ಆದರೆ ಈಗ ಎದುರಾಳಿ ಇಲ್ಲ ಅಂತಲ್ಲ. ಆಗ ನಮ್ಮ ಅಭ್ಯರ್ಥಿ ಪಠಾಣ 68 ಸಾವಿರ ಮತಗಳ ಪಡೆದಿದ್ದರು. ಅವರಿಗೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ನೀಡಲಾಗಿತ್ತು. ಆದರೂ ಉತ್ತಮ ಸ್ಪರ್ಧೆ ನೀಡಿದ್ದೇವೆ. ಅದರಂತೆ ಲೋಕಸಭಾ ಚುನಾವಣೆಯಲ್ಲಿ ಇದೇ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಸ್ಪರ್ಧಿಸಿದ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 8 ಸಾವಿರ ಮತ ಹೆಚ್ಚು ಪಡೆದಿದ್ದರು. ನಮ್ಮ ಅಭ್ಯರ್ಥಿ ಸಮರ್ಥರಾಗಿದ್ದು, ನಮಗೆ ಯಾರೂ ಎದುರಾಳಿಗಳಿಲ್ಲ ಎಂದು ಹೇಳಿದರು.
ಖಾದ್ರಿ ಮನವೊಲಿಕೆ:
ಶಿಗ್ಗಾವಿ ಕ್ಷೇತ್ರಕ್ಕೆ ಸೈಯದ್ ಅಜ್ಜಂಪೀರ್ ಖಾದ್ರಿ ಸಹ ಟಿಕೆಟ್ ಕೇಳಿದ್ದರು. ಅವರ ಹೆಸರು ಹೈಕಮಾಂಡ್‌ಗೆ ಕಳುಹಿಸಲಾಗಿತ್ತು. ಕಳೆದ ಬಾರಿ ಪಠಾಣ ಅವರು ಚುನಾವಣೆ ಸ್ಪರ್ಧಿಸಿದ್ದರಿಂದ ಈಗ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ. ಖಾದ್ರಿ ಸಹ ಅರ್ಹ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಬೇಕು. ನಾವು ಅವರ ಮನವೊಲಿಸುತ್ತೇವೆ. ಇನ್ನು ಕಾಂಗ್ರೆಸ್ ನೇರ ಪೈಟೋಟಿ ನೀಡುವ ಪಕ್ಷ, ಹೊಂದಾಣಿಕೆ ಏನಿದ್ದರೂ ಬಿಜೆಪಿ ಮಾಡಿಕೊಳ್ಳುತ್ತದೆ. ಚನ್ನಪಟ್ಟಣ ಜನತೆಗೆ ಭಾವನಾತ್ಮಕವಾಗಿ ಮಾತನಾಡುವುದು, ಅಳುವುದನ್ನು ನೋಡಿ ಸಾಕಾಗಿದೆ. ಇವರ ಅಳುವುದಕ್ಕೆ ಜನರು ಸ್ಪಂದಿಸಲ್ಲ ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.