ಸಾರಾಂಶ
ಕೊಪ್ಪಳ ನಗರದ ಹದಿನೆಂಟನೇ ವಾರ್ಡಿನ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸಮಿತಿಯಿಂದ ಜರುಗಿದ ಮತ ಕಳ್ಳತನ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಭಾಗವಹಿಸಿದ್ದರು.
ಕೊಪ್ಪಳ: ಅಧಿಕಾರದ ದಾಹಕ್ಕೆ ಬಿಜೆಪಿ ಮತಗಳ್ಳತನದ ಅಡ್ಡದಾರಿ ಹಿಡಿದಿದೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಹದಿನೆಂಟನೇ ವಾರ್ಡಿನ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸಮಿತಿಯಿಂದ ಜರುಗಿದ ಮತ ಕಳ್ಳತನ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನದಾನ, ರಕ್ತದಾನ, ನೇತ್ರದಾನ, ಅಕ್ಷರ ಜ್ಞಾನದಂತೆ ಮತದಾನ ಕೂಡ ಅತ್ಯಂತ ಶ್ರೇಷ್ಠ ಮತ್ತು ಮಹತ್ವದ್ದು. ಈ ದಾನ ಒಂದು ಸಾರಿ ಮಾಡಿದರೆ ಮತ್ತೆ ವಾಪಸ್ ಪಡೆದುಕೊಳ್ಳಲು ಸಾಧ್ಯವಿಲ್ಲ. ಮತದಾನ ದುರ್ಬಳಕೆ ಮಾಡಿಕೊಂಡು ಕೇಂದ್ರದಲ್ಲಿ ಬಿಜೆಪಿ ಮೂರು ಬಾರಿ ಅಧಿಕಾರಕ್ಕೆ ಬಂದಿದೆ. ಅದಕ್ಕಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದ ಜನರಿಗೆ ಜಾಗೃತಿ ಮೂಡಿಸಲು ಮತ ಕಳ್ಳತನದ ವಿರುದ್ಧ ಸಾರ್ವಜನಿಕರಿಂದ ಸಹಿ ಸಂಗ್ರಹಣೆ ಮಾಡಲಾಗುತ್ತದೆ ಎಂದರು.ಮುಂಬರುವ ದಿನಗಳಲ್ಲಿ ಇಂತಹ ಮತ ಕಳ್ಳತನ ಮಾಡುವಂತಹ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ದೇಶದ ಸಾಮಾನ್ಯ ಜನರು ಇದರ ಬಗ್ಗೆ ಜಾಗೃತಿ ವಹಿಸಿ, ತಮ್ಮ ಅತ್ಯಂತ ಮಹತ್ವದ ಮತ ಚಲಾವಣೆ ಮಾಡುವ ಮುನ್ನ ನೂರು ಬಾರಿ ಆಲೋಚನೆ ಮಾಡಿ, ಉತ್ತಮರಿಗೆ ತಮ್ಮ ಮತ ದಾನ ಮಾಡಿದರೆ ಸಾರ್ಥಕವಾಗುತ್ತದೆ ಎಂದರು.
ಕಾಂಗ್ರೆಸ್ ಯುವ ನಾಯಕ ಕೆ. ಸೋಮಶೇಖರ ಹಿಟ್ನಾಳ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೈನುದ್ದೀನ್ ಮುಲ್ಲಾ ಕುಷ್ಟಗಿ, ದಲಿತ ಸಮುದಾಯದ ಯುವ ನಾಯಕ ಮಲ್ಲು ಪೂಜಾರ, ಗವಿಸಿದ್ದನ ಗೌಡ, ಸೇವಾ ದಳದ ಮುಖಂಡ ಜಾಕಿರ್ ಹುಸೇನ್ ಕಿಲ್ಲೇದಾರ್, ಮಹಿಳಾ ಮುಖಂಡರಾದ ಜ್ಯೋತಿ ಗೊಂಡಬಾಳ, ಅಲ್ಪಸಂಖ್ಯಾತ ಸಮುದಾಯದ ನಾಯಕ ಮೊಹಮ್ಮದ್ ಜಿಲಾನ್ ಕಿಲ್ಲೆದಾರ್, ಅಲಿಯಾಸ್, ಸಯ್ಯದ್ ನಾಸಿರುದ್ದೀನ್ ಹುಸೇನಿ ಹಾಗೂ ಕಾರ್ಯಕರ್ತರಿದ್ದರು.