ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದನ್ನು ಖಂಡಿಸಿ ರಾಜ್ಯ ಸರ್ಕಾರದ ಅಣಕು ಶವಯಾತ್ರೆ ಹಾಗೂ ಹಗ್ಗದಿಂದ ದ್ವಿಚಕ್ರ ವಾಹನವನ್ನು ಎಳೆದು ತಾಲೂಕು ಬಿಜೆಪಿ ಮಂಡಲದ ಕಾರ್ಯಕರ್ತರು ಗುರುವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ಬಿಜೆಪಿ ಮುಖಂಡ ಸಿದ್ಧರಾಜ ಹೊಳಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಉಳಿಸಿಕೊಳ್ಳಲು ವಾಮಮಾರ್ಗದಿಂದ ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರೆ ದಿನಬಳಕೆ ವಸ್ತುಗಳ ಬೆಳೆ ಏರಿಕೆ ಮಾಡುತ್ತಿದೆ. ಇದರಿಂದ ಬಡವರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ದೂರಿದರು.
ಈ ನಿಟ್ಟಿನಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ)ಯವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ಖಂಡಿಸಿ ತಾಲೂಕು ಮಂಡಲದಿಂದ ಹೋರಾಟ ಹಾಗೂ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಹಾಲಿನ ದರ, ವಿದ್ಯುತ್ ದರ, ಅಬಕಾರಿ ಸೇರಿದಂತೆ ಎಲ್ಲಾ ದರ ಹೆಚ್ಚು ಮಾಡಿದ್ದಾರೆ. ಮುದ್ರಾಂಕ ಶುಲ್ಕವನ್ನೂ ಹೆಚ್ಚಿಸಿದ್ದಾರೆ. ಇಷ್ಟೆಲ್ಲಾ ತೆರಿಗೆ ಜಾಸ್ತಿ ಮಾಡಿ ಸರ್ಕಾರದ ಆದಾಯ ಜಾಸ್ತಿ ಮಾಡಿಕೊಂಡಿದ್ದಾರೆ. ಈ ಆದಾಯ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಹಣ ಆಂಧ್ರಕ್ಕೆ ಹೋಗಿದೆ. ಆಂಧ್ರ ಚುನಾವಣೆಯಲ್ಲಿ ಬಳಕೆಯಾಗಿದೆ. ಬೇನಾಮಿ ಖಾತೆ ಮುಖಾಂತರ ಹೋಗಿದೆ. ನೀವು ರಾಜ್ಯದ ಹಣಕಾಸು ಮಂತ್ರಿಯಾಗಿದ್ದೀರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇದೆಯಾ? ಕೇಂದ್ರ ಸರ್ಕಾರವನ್ನು ದೂಷಿಸುತ್ತೀರಿ. ನಾವು ಪ್ರತಿಭಟನೆ ಮಾಡುತ್ತಿದ್ದರೆ, ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತೀರಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ೯ ಸ್ಥಾನ ಗೆದ್ದರೆ ದೇಶದಲ್ಲಿ ಕಾಂಗ್ರೆಸ್ ೯೯ ಸ್ಥಾನಗಳಲ್ಲಿ ಗೆಲುವು ಕಂಡಿದೆ. ಜನ ನಿಮ್ಮ ಬಿಟ್ಟಿ ಗ್ಯಾರಂಟಿಗಳನ್ನು ತಿರಸ್ಕರಿಸಿ, ಮತ್ತೇ ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನೇ ಪ್ರಧಾನಿಯಾಗಿಸುವ ಮೂಲಕ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಮುಖಂಡ ಸೋಮನಗೌಡ ಬಿರಾದಾರ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ. ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿರುವುದು ಎದ್ದು ಕಾಣುತ್ತಿದೆ ಎಂದು ದೂರಿದ ಅವರು, ಈ ಕೂಡಲೇ ಡೀಸೆಲ್ ಮತ್ತು ಪೆಟ್ರೋಲ್ ಸೇರಿದಂತೆ ಇತರೆ ದಿನ ಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗದಂತೆ ಮಾಡಬೇಕು ಎಂದು ಆಗ್ರಹಿಸಿದರು.ಇಲ್ಲದಿದ್ದರೇ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ರಸ್ತೆ ರೋಖೋದಂತ ಚಳವಳಿ ನಡೆಸುವ ಮೂಲಕ ಎಚ್ಚರಿಸಬೇಕಾಗುತ್ತದೆ ಎಂದರು.
ಈ ವೇಳೆ ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಲಕ್ಷ್ಮಣ ಬಿಜ್ಜೂರ, ವಿಠ್ಠಲ ಮೋಹಿತೆ, ಪುರಸಭೆ ಸದಸ್ಯೆಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಮುಖಂಡರಾದ ರಾಜು ಬಳ್ಳೊಳ್ಳಿ, ಪರುಶುರಾಮ ನಾಲತವಾಡ, ರಾಜಶೇಖರ ಹೊಳಿ, ಉದಯ ರಾಯಚೂರ, ಶುಭಾಷ ಕಟ್ಟಿಮನಿ, ಶಿವು ಕನ್ನೋಳ್ಳಿ, ಹಣಮಂತ ನಾಲವಡೆ, ರಾಜಶೇಖರ ಮ್ಯಾಗೇರಿ, ಶ್ರೀಕಾಂತ ಹಿರೇಮಠ, ಸಂಜು ಬಾಗೇವಾಡಿ, ಮಂಜುನಾಥ ಚಲವಾದಿ, ಶೇಖರ ಢವಳಗಿ, ಸೇರಿದಂತೆ ಹಲವರು ಇದ್ದರು.