ಲೋಕಸಭೆ ಚುನಾವಣೆಯನ್ನು ಬಿಜೆಪಿ ಧರ್ಮಯದ್ಧದಂತೆ ಬಿಂಬಿಸುತ್ತಿದೆ-ಆನಂದಸ್ವಾಮಿ

| Published : Mar 25 2024, 12:51 AM IST

ಸಾರಾಂಶ

ಪ್ರಸಕ್ತ ಲೋಕಸಭೆ ಚುನಾವಣೆಯನ್ನು ಧರ್ಮಯದ್ಧದಂತೆ ಬಿಜೆಪಿಗರು ಬಿಂಬಿಸ ಹೊರಟಿದ್ದಾರೆ ಎಂದು ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಿಷಾಧಿಸಿದರು.

ಬ್ಯಾಡಗಿ:ಪ್ರಸಕ್ತ ಲೋಕಸಭೆ ಚುನಾವಣೆಯನ್ನು ಧರ್ಮಯದ್ಧದಂತೆ ಬಿಜೆಪಿಗರು ಬಿಂಬಿಸ ಹೊರಟಿದ್ದಾರೆ ಎಂದು ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಿಷಾಧಿಸಿದರು.

ತಾಲೂಕಿನ ಕದರಮಂಡಲಗಿ, ಬಿಸಲಹಳ್ಳಿ, ಶಿಡೇನೂರ, ಕೆರವಡಿ ಹಾಗೂ ಮೋಟೆಬೆನ್ನೂರು ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಚುನಾವಣೆಯಾಗಿದ್ದು, ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದೆ ಎಂದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 5 ವರ್ಷಗಳಿಗೊಮ್ಮೆ ಚುನಾವಣೆ ಅನಿವಾರ್ಯ. ಪ್ರತಿ ಚುನಾವಣೆಯಲ್ಲಿಯೂ ಬಡವರು, ಶೋಷಿತರು, ಯುವಕರು ಎಲ್ಲದಕ್ಕೂ ಪ್ರಮುಖವಾಗಿ ರೈತರ ಸಮಸ್ಯೆಗಳ ಪರಿಹಾರದ ವಿಷಯಗಳನ್ನು ಮುಂದಿಟ್ಟು ಮತ ಯಾಚಿಸಲಾಗುತ್ತದೆ. ಆದರೆ ಕಳೆದೊಂದು ದಶಕದಿಂದ ಜನರಲ್ಲಿ ಭಾವನಾತ್ಮಕ ವಿಷಯಗಳನ್ನು ಹರಿಯಬಿಡುವ ಮೂಲಕ ಬಿಜೆಪಿ ಇದನ್ನು ಧರ್ಮಯುದ್ಧವನ್ನಾಗಿ ಪರಿವರ್ತಿತಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶ ಇಬ್ಭಾಗವಾಗಲಿದೆ. ಇನ್ಯಾರದೋ ಕೈಗೆ ಅಧಿಕಾರ ಸಿಗಲಿದೆ. ಇನ್ನಿತರ ಸೂಕ್ಷ್ಮ ವಿಷಯಗಳನ್ನು ಜನರಲ್ಲಿ ಹರಿಯ ಬಿಡುತ್ತಿರುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರೋಧವಾಗಿ ನಡೆದುಕೊಳ್ಳುತ್ತಿದೆ. ದೇಶದ ಅಖಂಡತೆಗೆ ಯಾರಿಂದಲೂ ಧಕ್ಕೆಯಾಗುವುದಿಲ್ಲ. ಇನ್ನಾದರೂ ಬಿಜೆಪಿ ಪ್ರಸ್ತುತ ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಹೀಗಾಗಿ ಮತದಾರ ಪ್ರಭುಗಳು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಮೂಲಕ ನಮ್ಮಿಂದಲೂ ದೇಶದ ಅಭಿವೃದ್ಧಿ ಸಾಧ್ಯವೆಂಬುದನ್ನು ಸಾಬೀತುಪಡಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.ಸೋಮಣ್ಣ ಬೇವಿನಮರದ, ಶಿವನಗೌಡ ಪಾಟೀಲ, ಪ್ರಭು ಶೀಗಿಹಳ್ಳಿ, ಮಾಲತೇಶ ದೊಡ್ಮನಿ, ದುರ್ಗೇಶ ಗೊಣೆಮ್ಮನವರ, ಖಾದರಸಾಬ್‌ ದೊಡ್ಮನಿ, ಚನ್ನಬಸಪ್ಪ ಹುಲ್ಲತ್ತಿ, ಶಂಭಣ್ಣ ಯಲಿಗಾರ, ಲಕ್ಷ್ಮೀ ಜಿಂಗಾಡೆ, ಶಂಕರಗೌಡ ಪಾಟೀಲ, ಗಿರೀಶಸ್ವಾಮಿ ಇಂಡೀಮಠ, ಪರಮೇಶಪ್ಪ ಮುಚ್ಚಟ್ಟಿ, ರಾಜೆಸಾಬ ಕಳ್ಯಾಳ, ಮುನಾಫ್ ಎರೆಶೀಮಿ ಸೇರಿದಂತೆ ಇನ್ನಿತರಿದ್ದರು.