ಸಾರಾಂಶ
ತುರುವೇಕೆರೆ : ದೇಶದಲ್ಲಿ ಸಮಾನತೆಯನ್ನು ಸಾರುವಲ್ಲಿ ಭಾರತೀಯ ಜನತಾ ಪಕ್ಷ ತನ್ನದೇ ಆದ ಕೊಡುಗೆ ನೀಡಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ತುರುವೇಕೆರೆ ಮಂಡಲದ ಉಸ್ತುವಾರಿಯಾಗಿರುವ ಸಾಗರನಹಳ್ಳಿ ವಿಜಯಕುಮಾರ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿಯ ೪೫ ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದ ಐಕ್ಯತೆಗೆ ಧಕ್ಕೆ ಬಂದ ವೇಳೆ ಸ್ವತಂತ್ರವಾಗಿ ೧೯೮೦ ರಲ್ಲಿ ಬಿಜೆಪಿ ಅಸ್ಥಿತ್ವಕ್ಕೆ ಬಂದಿತು. ಅಂದಿನಿಂದಲೂ ಬಿಜೆಪಿ ರಾಷ್ಟ್ರದ ಸಮಗ್ರತೆಗೆ ಹೋರಾಟ ನಡೆಸುತ್ತಿದೆ. ದೇಶದಲ್ಲಿ ಒಂದೇ ಕಾನೂನು, ಒಂದೇ ರಾಷ್ಟ್ರಧ್ವಜ, ಒಂದೇ ಸಂವಿಧಾನ ಇರಬೇಕೆಂಬ ಅಚಲ ನಂಬಿಕೆಯನ್ನು ಹೊಂದಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಠ ಅಡ್ವಾನಿ, ಮುರುಳಿ ಮನೋಹರ್ ಜೋಶಿ ಯವರಂತಹ ದೇಶ ಪ್ರೇಮಿಗಳ ಮಾರ್ಗದರ್ಶನದಲ್ಲಿ ಬಿಜೆಪಿ ಮುನ್ನೆಡೆದಿದೆ ಎಂದು ಅವರು ಹೇಳಿದರು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಗಳಾದ ವೇಳೆ ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡಿದರು. ನದಿಗಳ ಜೋಡಣೆ, ರಾಜ್ಯ ಮತ್ತು ರಾಷ್ಟ್ರಗಳ ನಡುವೆ ಹೆದ್ದಾರಿಗಳ ನಿರ್ಮಾಣ, ಬಡವರ ಏಳಿಗೆಗೆ ಕ್ರಮ, ಸರ್ಕಾರದ ಸವಲತ್ತುಗಳು ನೇರವಾಗಿ ಫಲಾನುಭವಿಯ ಮನೆ ಬಾಗಿಲಲ್ಲೇ ವಿತರಣೆ ಸೇರಿದಂತೆ ಹಲವಾರು ಕ್ರಾಂತಿಕಾರಕ ಬದಲಾವಣೆಯನ್ನು ವಾಜಪೇಯಿಯವರು ತಂದಿದ್ದರು ಎಂದರು.
ಈಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ರವರ ನೇತೃತ್ವದಲ್ಲಿ ಅಖಂಡ ಹಿಂದೂಸ್ಥಾನ ಮಾಡಬೇಕೆಂಬ ಅಭಿಲಾಷೆ ಹೊಂದಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದ ಇಂದಿನವರೆಗೆ ಆಡಳಿತ ನಡೆಸಿರುವ ಸರ್ಕಾರಗಳಲ್ಲಿ ಮುಸ್ಲಿಮರು ಮತ್ತು ದಲಿತರು ನೆಮ್ಮದಿಯ ಜೀವನ ನಡೆಸಿದ್ದಾರೆ ಎಂದರೆ ಅದು ಬಿಜೆಪಿಯ ಸರ್ಕಾರದಲ್ಲಿ ಮಾತ್ರ. ಮುಸ್ಲಿಮರನ್ನು ಮತ್ತು ದಲಿತರನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿತ್ತೇ ವಿನಃ ಅವರ ಶ್ರೇಯೋಭಿವೃದ್ದಿಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಿಜೆಪಿ ಮುಸ್ಲಿಂ ಸಮುದಾಯದ ಮತ್ತು ಬುಡಕಟ್ಟು ಜನಾಂಗದ ಮಹಿಳೆಗೆ ದೇಶದ ಸರ್ವ ಶ್ರೇಷ್ಠ ಹುದ್ದೆ ನೀಡಿ ಮಾದರಿಯಾಗಿದೆ ಎಂದು ಹೇಳಿದರು.
ದಲಿತ ಮುಖಂಡ ಸೋಮೇನಹಳ್ಳಿ ಜಗದೀಶ್ ಮಾತನಾಡಿ ಕಾಂಗ್ರೆಸ್ ಬಿಜೆಪಿಯನ್ನು ಕೋಮುವಾದಿ, ದಲಿತ ವಿರೋಧಿ ಎಂದು ಬಿಂಬಿಸುತ್ತಿದೆ. ಆದರೆ ನಿಜವಾದ ಕೋಮುವಾದಿ ಮತ್ತು ದಲಿತ ವಿರೋಧಿ ಎಂದರೆ ಅದು ಕಾಂಗ್ರೆಸ್ ಮಾತ್ರ. ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಹೋರಾಟ ಮಾಡುವುದು ಕಾಂಗ್ರೆಸ್ ಗೆ ಕೋಮುವಾದದಂತೆ ಕಾಣುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ವೇಳೆ 7 ಮಂದಿ ದಲಿತರು ಮಂತ್ರಿಗಳಾಗಿದ್ದರು. ಈಗ ಕೇಂದ್ರದಲ್ಲೂ ಸಹ ಹಲವಾರು ಮಂದಿ ಮಂತ್ರಿಗಳಿದ್ದಾರೆ.
ದೇಶ ಮೊದಲು ಎನ್ನುವ ರಾಷ್ಟ್ರ ಪ್ರೇಮಿ ಪಕ್ಷ ಬಿಜೆಪಿಯಾಗಿದೆ ಎಂದು ಅವರು ಹೇಳಿದರು. ತುರುವೇಕೆರೆ ಮಂಡಲ ಅಧ್ಯಕ್ಷ ಮೃತ್ಯಂಜಯ ಮಾತನಾಡಿ ಕಾಂಗ್ರೆಸ್ ಕುತಂತ್ರಕ್ಕೆ ಹೆಸರುವಾಸಿ. ತುರ್ತು ಪರಿಸ್ಥಿತಿ ಹೇರಿದ ನಂತರ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ಸೇತರ ಸರ್ಕಾರವನ್ನು ಕಿತ್ತೊಗೆಯುವಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡ ಎಲ್ಲರಿಗೂ ಗೊತ್ತಿದೆ. ಬಡವರ ಹೆಸರಿನಲ್ಲಿ ಬಹು ವರ್ಷ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬಡವರ ಶೋಷಣೆ ಮಾಡಿದೆ ಎಂದು ಆಪಾದಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಮಾಚೇನಹಳ್ಳಿ ರಾಮಣ್ಣ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಅನಿತಾ ನಂಜುಂಡಯ್ಯ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಚೂಡಾಮಣಿ, ಜಿಲ್ಲಾ ಎಸ್ ಟಿ ಘಟಕದ ಉಪಾಧ್ಯಕ್ಷೆ ಉಮಾರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಸದಸ್ಯ ಚಿದಾನಂದ್, ತಾಲೂಕು ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ಕಣತೂರು ನಾಗೇಶ್, ಹರಿಕಾರನಹಳ್ಳಿ ಪ್ರಸಾದ್, ನವೀನ್ ಬಾಬು, ಸಿದ್ದಪ್ಪಾಜಿ, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.