ಬಿಜೆಪಿಯವರಿಂದ ಧರ್ಮ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ: ಸಿಎಂ ಆಕ್ರೋಶ

| Published : Sep 14 2025, 01:04 AM IST

ಸಾರಾಂಶ

ರಾಜ್ಯದಲ್ಲಿ ಉತ್ತಮ ಮಳೆಯಿಂದ 82 ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆಯಾಗಿದೆ. ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನಾನು ಈಗಾಗಲೇ ಡಿಸಿ ಮತ್ತು ಸಿಇಒರವರಿಗೆ ಸಭೆ ಕರೆದು ಹತ್ತು ದಿನಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ

ಬಿಜೆಪಿಯವರು ಧರ್ಮ-ಧರ್ಮಗಳ ನಡುವೆ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಪ್ರಚೋಧನೆ ಮಾಡುವುದೇ ವಿಪಕ್ಷದವರ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಶಿವನಸಮುದ್ರದ ಬ್ಲಪ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯಿಂದ ನಡೆದ ಗಗನಚುಕ್ಕಿ ಜಲಪಾತೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಿ, ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದು, ಎತ್ತಿಕಟ್ಟುವುದು ಬಿಜೆಪಿಯವರ ಕೆಲಸ. ಇದರ ಜೊತೆಗೆ ಈಗ ಜೆಡಿಎಸ್‌ನವರೂ ಸೇರಿಕೊಂಡಿದ್ದಾರೆ. ಅವರ ಮಾತುಗಳಿಗೆ ಯಾರೂ ಕಿವಿಗೊಡಬಾರದು ಎಂದರು.

ರಾಜ್ಯದಲ್ಲಿ ಉತ್ತಮ ಮಳೆಯಿಂದ 82 ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆಯಾಗಿದೆ. ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನಾನು ಈಗಾಗಲೇ ಡಿಸಿ ಮತ್ತು ಸಿಇಒರವರಿಗೆ ಸಭೆ ಕರೆದು ಹತ್ತು ದಿನಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಕಳೆದ ವರ್ಷ ಗುಲ್ಬರ್ಗಾದಲ್ಲಿ ಆದ ಮಳೆ ಹಾನಿಗೆ 600 ಕೋಟಿ ರು. ಹಣ ಬಿಡುಗಡೆ ಮಾಡಿದ್ದೇನೆ. ಈ ವರ್ಷವೂ ಬೆಳೆ ಪರಿಹಾರ ನೀಡುವುದಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ನಮ್ಮಲ್ಲಿ ಅಭಿವೃದ್ಧಿಗೂ ಹಣವಿದೆ, ಗ್ಯಾರಂಟಿ ಯೋಜನೆಗಳಿಗೂ ಹಣವಿದೆ. ಬೆಳೆ ಪರಿಹಾರಕ್ಕೂ ಹಣವಿದೆ. ಈ ಬಗ್ಗೆ ಜನರಿಗೆ ಯಾವುದೇ ಆತಂಕ ಬೇಡ ಎಂದರು.

ಗಗನಚುಕ್ಕಿ ಜಲಪಾತೋತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಗಗನಚುಕ್ಕಿ ಜಲಪಾತ ವೀಕ್ಷಣೆಗೆ 22 ಲಕ್ಷ ಜನರು ಆಗಮಿಸಿದ್ದಾರೆ. ಪ್ರವಾಸೀ ಸ್ಥಳಗಳಿಗೆ ತೆರಳಲು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಶಕ್ತಿ ಯೋಜನೆ ಜಾರಿಗೊಳಿಸಿದ್ದು, ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಮಾದೇಗೌಡ, ಸುಧಾಂದಾಸ್, ಹನೂರು ಶಾಸಕ ಮಂಜುನಾಥ್, ದಡದಪುರ ಶಿವಣ್ಣ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಐಜಿಪಿ ನಂಜುಂಡಸ್ವಾಮಿ, ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಮುಖಂಡರಾದ ಕೆ.ಬಿ. ಚಂದ್ರಶೇಖರ್, ಬಿ.ಎಲ್. ದೇವರಾಜು ಇತರರು ಭಾಗವಹಿಸಿದ್ದರು.