ಸಾರಾಂಶ
ಶಂಕರ ಹಾವಿನಾಳ
ಕನ್ನಡಪ್ರಭ ವಾರ್ತೆ ಚಡಚಣಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ್ದ ದಾವೆಗೆ ನಿರ್ಬಂಧ ತೆರವುಗೊಂಡು ಚುನಾವಣೆ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆಗಳು ನಡೆಯದೇ ಇರುವುದು ಜಿಲ್ಲಾಧಿಕಾರಿಗಳ ಸೂಚನೆಗೆ ಯಾವ ಬೆಲೆ ಇಲ್ಲದಂತಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ್ದ ದಾವೆ ತೆರವುಗೊಂಡಿರುವುದರಿಂದ ರಾಜ್ಯ ಸರ್ಕಾರ ಆ.5ರಂದು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿದೆ. ಪ್ರಕಟಿಸಿ ಮೀಸಲಾತಿಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಸದಸ್ಯರಲ್ಲಿ ಅಭ್ಯರ್ಥಿಗಳೇ ಇಲ್ಲದೆ ಇರುವುದೇ ಈ ಚುನಾವಣೆ ಪ್ರಕ್ರಿಯೆಯ ವಿಳಂಬಕ್ಕೆ ಕಾರಣ ಎನ್ನುವುದು ಬಿಜೆಪಿಯವರ ಕಣ್ಣು ಕೆಂಪಾಗಿಸುವಂತೆ ಮಾಡಿದೆ.ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಕಿಡಿ:
ಕಳೆದ ಡಿಸೆಂಬರ್ 27ರಂದು ಚುನಾವಣೆ ನಡೆದಿದ್ದು, ಡಿ.30ಕ್ಕೆ ಫಲಿತಾಂಶ ಪ್ರಕಟವಾಗಿತ್ತು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ ಪರಿಣಾಮ ನಿರ್ಬಂಧ ಹೇರಲಾಗಿತ್ತು. ಸದ್ಯ ನಿರ್ಬಂಧಕ್ಕೆ ತೆರವು ಬಿದ್ದಿರುವುದರಿಂದ ಆ.5ರಂದು ಸರ್ಕಾರ ಮೀಸಲಾತಿ ಘೋಷಣೆ ಮಾಡಿದೆ. ಆದರೆ, ತಿಂಗಳ ಸನಿಹವಾದರೂ ಚುನಾವಣೆ ಪ್ರಕ್ರಿಯೆಗಳು ಮಾತ್ರ ನಡೆಯರುವುದು ಅಧಿಕಾರ ಹಿಡಿಯುವ ತುಡಿತದಲ್ಲಿರುವ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಅಸಮಾಧಾನ ಹೊರಹಾಕುತ್ತಿದೆ.ಬಿಜೆಪಿಗೆ ಅಧ್ಯಕ್ಷ ಸ್ಥಾನ ಸಲೀಸು, ಉಪಾಧ್ಯಕ್ಷಕ್ಕೆ ಪೈಪೋಟಿ:
ರಾಜ್ಯ ಸರ್ಕಾರ ಆ.5 ರಂದು ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮೀಸಲಾತಿ ಪ್ರಕಟಗೊಂಡಿದೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಮೀಸಲಾದ ಎಸ್ಸಿ ಅಭ್ಯರ್ಥಿಗಳು ಕಾಂಗ್ರೆಸ್‌ನಲ್ಲಿ ಇಲ್ಲದೇ ಇರುವುದರಿಂದ ಅಧ್ಯಕ್ಷ ಸ್ಥಾನ ಅತೀ ಹೆಚ್ಚು ಸ್ಥಾನ ಪಡೆದ ಬಿಜೆಪಿ ಪಾಲಾಗುವುದು ನಿಚ್ಚಳವಾಗಿದೆ.ಚಡಚಣ ಪಪಂಗೆ 16 ಸದಸ್ಯರ ಬಲವಿದ್ದು, ಅಧಿಕಾರ ಹಿಡಿಯಲು 9 ಜನ ಸದಸ್ಯರ ಬೆಂಬಲ ಬೇಕು. ಈ ಪೈಕಿ ಬಿಜೆಪಿ 8, ಕಾಂಗ್ರೆಸ್ 4 ಹಾಗೂ ಪಕ್ಷೇತರ 4 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಎಸ್ಸಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ. ಹೀಗಾಗಿ ಬಿಜೆಪಿಯಲ್ಲಿ ಮಾತ್ರ ಮೂವರು ಎಸ್ಸಿ ಅಭ್ಯರ್ಥಿಗಳಿದ್ದು, ಆಯ್ಕೆಯಾದ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಲ್ಲಿ ಎಸ್ಸಿ ಅಭ್ಯರ್ಥಿಗಳೇ ಇಲ್ಲದಿರುವುದು ಬಿಜೆಪಿಗೆನೇ ಅಧ್ಯಕ್ಷ ಪಟ್ಟ ಖಾತರಿಯಾಗಿದೆ.
ಇರುವ ಮೂರರಲ್ಲಿ ಮಣೆ ಯಾರಿಗೆ?:ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. 15ನೇ ವಾರ್ಡ್‌ನಿಂದ ಮಲ್ಲಿಕಾರ್ಜುನ ದೋತ್ರೆ, 10ನೇ ವಾರ್ಡ್‌ನಿಂದ ಬಾಲಾಜಿ ಗಾಡಿವಡ್ಡರ ಹಾಗೂ 7ನೇ ವಾರ್ಡ್‌ನಿಂದ ಸುರೇಖಾ ಬನಸೋಡೆ ಮಧ್ಯ ಅಧ್ಯಕ್ಷ ಗಾದಿಗೆ ಭಾರಿ ಪೈಪೋಟಿ ಶುರುವಾಗಿದ್ದು, ಕೊನೆಗೆ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುವುದು ಎಂಬುವುದು ಕಾದು ನೋಡಬೇಕಿದೆ.
ಉಪಾಧ್ಯಕ್ಷ ಗದ್ದುಗೆ ಬಿಜೆಪಿ ಪಾಲಾಗಲಿದೆಯೇ ಎಂಬುವುದು ಮಾತ್ರ ನಿಗೂಢವಾಗಿದೆ. ಪಟ್ಟಣ ಪಂಚಾಯತಿಯಲ್ಲಿ ಒಟ್ಟು 16 ಸದಸ್ಯರ ಬಲಾಬಲ ಹೊಂದಿದ್ದು, ಅದರಲ್ಲಿ 8 ಬಿಜೆಪಿ ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಬೆಂಬಲ ಪಡೆದು ಅಧಿಕಾರದ ಗದ್ದುಗೆ ಏರಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡಕ್ಕೂ ತಮ್ಮದೇ ಪಕ್ಷದ ಅಭ್ಯರ್ಥಿಗಳ ಆಯ್ಕೆಯಾಗುವ ನಿರೀಕ್ಷೆಯಲ್ಲಿ ಬಿಜೆಪಿ ಪಕ್ಷವಿದ್ದರೇ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಪ್ರಾರಂಭವಾಗಿದೆ. ಉಪಾಧ್ಯಕ್ಷ ಹುದ್ದೆ ಒಂದು, ಆಕಾಂಕ್ಷಿಗಳು ನೂರು ಎಂಬುವಂತೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಉಪಾಧ್ಯಕ್ಷ ಗದ್ದುಗೇರುವವರು ಯಾರು ಎಂಬ ಪ್ರಶ್ನೆ ಶುರುವಾಗಿದೆ.-------------------
ಅಧ್ಯಕ್ಷ, ಉಪಾಧ್ಯಕ್ಷಗೀರಿಗೆ ಪಕ್ಷೇತರರೇ ನಿರ್ಣಾಯಕ!ಪಟ್ಟಣ ಪಂಚಾಯತಿಯಾದ ಮೊದಲ ಚುನಾವಣೆಯಲ್ಲಿಯೇ ಬಿಜೆಪಿಯ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯೇ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಆದರೆ, ಈ ಬಾರಿ ಮೀಸಲಾತಿಯಿಂದ ಎಸ್ಸಿ ಅಭ್ಯರ್ಥಿಗಳು ಕಾಂಗ್ರೆಸ್ ಮತ್ತು ಪಕ್ಷೇತರವಾಗಿ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಇಲ್ಲದೇ ಇರುವುದು ಬಿಜೆಪಿಗೆ ಅಧ್ಯಕ್ಷಗಿರಿ ಒಲಿದು ಬಂದಿದೆ. ಮೊದಲ ಚುನಾವಣೆಯ ಇತಿಹಾಸ ಮರುಕಳಿಸಿದ್ದು, ಈ ಬಾರಿ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಬಿಜೆಪಿ ಅಭ್ಯರ್ಥಿ ಅಧ್ಯಕ್ಷರಾಗುತ್ತಿರುವುದು ರಾಜಕೀಯ ಕಾಕತಾಳೀಯ ಎನ್ನುವಂತಾಗಿದೆ.
----ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಂಡಿದೆ. ಅದರಂತೆ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸುವಂತೆ ಆದೇಶ ಮಾಡಿದ್ದಾರೆ. ಆದಷ್ಟು ಬೇಗನೆ ಚುನಾವಣೆ ನಡೆಸಲಾಗುವುದು.
-ಸಂಜಯ ಇಂಗಳೆ, ತಾಲೂಕು ದಂಡಾಧಿಕಾರಿಗಳು ಚಡಚಣ.--------
ಈ ಬಾರಿ ಬಹುತೇಕ ಮೀಸಲಾತಿ ಬಿಜೆಪಿ ಪಕ್ಷದ ಪರವಾಗಿಯೇ ಬಂದಂತಾಗಿದೆ. ಬಿಜೆಪಿಯಿಂದ 8 ಅಭ್ಯರ್ಥಿಗಳು ಇದ್ದಾರೆ. ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿದೆ ಅದ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹೈಕಾಂಡ್ ನಿರ್ಧಾರದಂತೆ ಅಭ್ಯರ್ಥಿಗಳ ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಲ್ಲಿ ಅಧ್ಯಕ್ಷ ಗಾದಿಗೆ ಪೈಪೋಟಿ ಮಾಡಲು ಪರಿಶಿಷ್ಟ ಜಾತಿಯ ಸದಸ್ಯರೇ ಇಲ್ಲದಿರುವುದರಿಂದ ಅಧ್ಯಕ್ಷ ಹುದ್ದೆಗೆ ಪೈಪೋಟಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.- ಕಾಂತುಗೌಡ ಪಾಟೀಲ, ಅಧ್ಯಕ್ಷರು ಬಿಜೆಪಿ ಮಂಡಲ ಚಡಚಣ.
------------ಸರ್ಕಾರ ರೋಸ್ಟರ್ ಪ್ರಕಾರ ಮೀಸಲಾತಿ ಪ್ರಕಟಗೊಳಿಸಿದೆ. ಅಧ್ಯಕ್ಷ ಮೀಸಲಾತಿ ಪರಿಶಿಷ್ಟ ಜಾತಿ ಬಂದಿರುವುದರಿಂದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ನಮ್ಮ ಪಕ್ಷದಲಿಲ್ಲ. ಉಪಾಧ್ಯಕ್ಷ ಗದ್ದುಗೇರಲು ರಣತಂತ್ರ ರೂಪಿಸುತ್ತೇವೆ.
-ಆರ್.ಡಿ.ಹಕ್ಕೆ ಅಧ್ಯಕ್ಷರು, ಕಾಂಗ್ರೆಸ್ ಮಂಡಲ ಚಡಚಣ.-------------
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನಮ್ಮ ಸದಸ್ಯರು ಗದ್ದುಗೆ ಏರುವುದು ನಿಶ್ಚಿತ. ಸಂಸದರು, ಜಿಲ್ಲಾ ಅಧ್ಯಕ್ಷರು, ಮಂಡಲ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರು ಸೇರಿಕೊಂಡು ಯಾರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಿದ್ದೇವೆ.-ಸಂಜೀವ ಐಹೊಳ್ಳಿ ಬಿಜೆಪಿ ಮುಖಂಡ.