ಸರ್ಕಾರಿ ಕಚೇರಿಯಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಒತ್ತು ನೀಡಿದ ಪರಿಣಾಮ ಇ-ಆಫೀಸ್ ಬಳಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಕಲಬುರಗಿ ಜಿಲ್ಲಾ ಪಂಚಾಯತ ಇಡೀ ರಾಜ್ಯದಲ್ಲಿಯೇ ನಂಬರ್-1 ಸ್ಥಾನ ಪಡೆದುಕೊಂಡಿದೆ
ಕಲಬುರಗಿ: ಸರ್ಕಾರಿ ಕಚೇರಿಯಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಒತ್ತು ನೀಡಿದ ಪರಿಣಾಮ ಇ-ಆಫೀಸ್ ಬಳಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಕಲಬುರಗಿ ಜಿಲ್ಲಾ ಪಂಚಾಯತ ಇಡೀ ರಾಜ್ಯದಲ್ಲಿಯೇ ನಂಬರ್-1 ಸ್ಥಾನ ಪಡೆದುಕೊಂಡಿದೆ
ಕಳೆದ 2025ನೇ ಕ್ಯಾಲೆಂಡರ್ ವರ್ಷದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 2,938 ಇ-ಕಡತ ಸೃಷ್ಟಿಸಿ 54,381 ಕಡತ ವಿಲೇವಾರಿ ಮಾಡಲಾಗಿದೆ. ಅದೇ ರೀತಿ ಸಾರ್ವಜನಿಕರಿಂದ ಸ್ವೀಕೃತ 13,664 ಪತ್ರಗಳನ್ನು ಇ-ರಸೀದಿಯಡಿ ಸೃಷ್ಟಿಸಿ 3,52,221 ಇ-ರಸೀದಿ ವಿಲೇವಾರಿ ಮಾಡಲಾಗಿದೆ.ಸರ್ಕಾರಿ ಕಚೇರಿಗಳು ಜನಸ್ನೇಹಿಯಾಗಬೇಕು. ಸಾರ್ವಜನಿಕರು ತಮ್ಮ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅನಗತ್ಯ ವರ್ಷಗಟ್ಟಲೆ ಅಲೆದಾಡುವುದನ್ನು ತಪ್ಪಿಸಲೆಂದೆ ಇ-ಆಫೀಸ್ ಅನುಷ್ಟಾನದ ಮೂಲಕ ಪ್ರತಿ ಅಧಿಕಾರಿ-ಸಿಬ್ಬಂದಿಗೆ ಕಾಲಮಿತಿಯಲ್ಲಿಯೆ ಕಡತ ವಿಲೇವಾರಿಗೆ ಹೊಣೆಗಾರಿಕೆ ನೀಡಿದ ಫಲ ಇದಾಗಿದೆ. ಆಡಳಿತ ಸುಧಾರಣೆಯಲ್ಲಿ ಕಲಬುರಗಿ ಜಿಲ್ಲೆ ಮುಂಚೂಣಿಯಲ್ಲಿರುವುದಕ್ಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ 10 ನಲ್ಲಿ ನಾಲ್ಕು ಜಿಲ್ಲೆ: 2025 ಕ್ಯಾಲೆಂಡರ್ ವರ್ಷದಲ್ಲಿ ಜಿ.ಪಂ ಇ-ಕಡತ ಬಳಕೆಯಲ್ಲಿ ಟಾಪ್-10 ಜಿಲ್ಲೆಗಳ ಅಂಕಿ-ಸಂಖ್ಯೆ ಅವಲೋಕಿಸಿದರೆ 2,938 ಇ-ಕಡತ ಸೃಜಿಸಿ ಜಿಪಂ ಮೊದಲನೇ ಸ್ಥಾನದಲ್ಲಿದ್ದರೆ, 2,523 ಕಡತ ಸೃಜಿಸಿ ಚಿತ್ರದುರ್ಗ ಜಿ.ಪಂ. ಎರಡನೇ ಹಾಗೂ 2,476 ಕಡತದೊಂದಿಗೆ ಬೆಂಗಳೂರು ನಗರ ಜಿ.ಪಂ ಜಿಲ್ಲೆ ಮೂರನೇ ಸ್ಥಾನ ಪಡೆದಿದೆ. 2,339 ಇ-ಕಡತ ಸೃಜಿಸಿ ಐದನೇ ಸ್ಥಾನದಲ್ಲಿ ಬೀದರ್, 1,955 ಇ-ಕಡತ ಸೃಜಿಸಿ ಎಂಟನೇ ಸ್ಥಾನದಲ್ಲಿ ಯಾದಗಿರಿ, 1,924 ಇ-ಕಡತ ಸೃಜನೆಯೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಕೊಪ್ಪಳ ಜಿಪಂ ಸ್ಥಾನ ಪಡೆದಿದೆ. ಅಗ್ರ 10ರಲ್ಲಿ ಕಲ್ಯಾಣ ಕರ್ನಾಟಕ 4 ಜಿಲ್ಲೆಗಳು ಇ-ಆಫೀಸ್ ಅನುಷ್ಠಾನದಲ್ಲಿ ಸ್ಥಾನ ಪಡೆದಿರುವುದು ಪ್ರದೇಶದ ಗ್ರಾಮೀಣ ಭಾಗದಲ್ಲಿ ಆಡಳಿತ ವೇಗ ಪಡೆದುಕೊಂಡಿರುವುದಕ್ಕೆ ಹಿಡಿದ ಕನ್ನಡಿ. ಸುಗಮ ಆಡಳಿತಕ್ಕೆ ಕಲಬುರಗಿ ಜಿಲ್ಲೆ ಮಾದರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಗಮನ ಸೆಳೆದ ಆಳಂದ-ಅಫಜಲಪೂರ:
ತಾಲೂಕಾ ಪಂಚಾಯತಿವಾರು ಇ.ಆಫೀಸ್ ಬಳಕೆಯಲ್ಲಿಯೂ ಕಳೆದ ವರ್ಷದಲ್ಲಿ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಪಂ 1,508 ಇ-ಕಡತ ಸೃಜಿಸಿ 3,089 ಇ-ಕಡತ ವಿಲೇವಾರಿ ಮಾಡಿ ಅಗ್ರ ಸ್ಥಾನ ಪಡೆದರೆ, ಆಳಂದ ತಾಪಂ 1,127 ಇ-ಕಡತ ಸೃಜಿಸಿ 3,560 ಕಡತ ವಿಲೇವಾರಿ ಮತ್ತು 526 ಇ-ರಸೀದಿ ಸೃಷ್ಟಿಸಿ 2,022 ಇ-ರಸೀದಿ ವಿಲೇವಾರಿಯೊಂದಿಗೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದೆ.ಅಫಜಲಪುರ ತಾಪಂ 668 ಇ-ಕಡತ ಸೃಜಿಸಿ 3,189 ಕಡತ ವಿಲೇವಾರಿ ಮಾಡಿ ಏಳನೇ ಸ್ಥಾನ ಹಾಗೂ ಕಲಬುರಗಿ ತಾಪಂ 564 ಇ-ಕಡತ ಸೃಜಿಸಿ 1,527 ಕಡತ ವಿಲೇವಾರಿ ಮಾಡಿ ಒಂಭತ್ತನೇ ಸ್ಥಾನ ಕಾಯ್ದುಕೊಂಡಿದೆ. ತಾಲೂಕಾವಾರು ಟಾಪ್ ಟೆನ್ ನಲ್ಲಿ ಕಲಬುರಗಿ ಜಿಲ್ಲೆಯ ಮೂರು ತಾಲೂಕುಗಳು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.
ಅರ್ಜಿ ವಿಲೇವಾರಿ: ಜಿಪಂ ಮತ್ತು ತಾಪಂ ಇ-ಕಡತ ಬಳಕೆಯಲ್ಲಿನ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಸಾರ್ವಜನಿಕರು ಕಚೇರಿಗೆ ಸಲ್ಲಿಸುವ ಅರ್ಜಿಗಳನ್ನು ಇ-ಆಫೀಸ್ ಸಹಾಯದಿಂದ ಪ್ರಥಮಾದ್ಯತೆ ಮೇಲೆ ಕಡತ ವಿಲೇವಾರಿ ಮಾಡಿ ಪತ್ರಗಳಿಗೆ ಭೌತಿಕ ಸಹಿ ಬದಲಾಗಿ ಡಿಜಿಟಲ್ ಸಹಿವುಳ್ಳ ಪತ್ರದಮುಲಕವೆ ವ್ಯವಹರಿಸಲಾಗುತ್ತಿದೆ. ಸಿಬ್ಬಂದಿ ಶ್ಲಾಘಿಸಿದ ಅವರು ಮುಂದೆಯೂ ತ್ವರಿತ ಕಡತ ವಿಲೇವಾರಿ ಮೂಲಕ ಜನರ ಕೆಲಸ ಕಾರ್ಯಗಳಿಗೆ ಸ್ಪಂದಿಸುವಂತೆ ಕೆಳ ಹಂತದ ಸಿಬ್ಬಂದಿಗೆ ಸೂಚಿಸಿದ್ದಾರೆ.