ಬಿಜೆಪಿಯವರಿಂದಲೇ ಪಂಚ ಗ್ಯಾರಂಟಿ ಸದ್ಬಳಕೆ

| N/A | Published : May 18 2025, 01:36 AM IST / Updated: May 18 2025, 08:12 AM IST

ಸಾರಾಂಶ

 ಭರವಸೆ ನೀಡಿದಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ.  

 ಮುದ್ದೇಬಿಹಾಳ : ಭರವಸೆ ನೀಡಿದಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ. ಇದನ್ನು ಸಹಿಸದ ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡುವುದಲ್ಲದೇ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಟೀಕಿಸುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಎಪಿಎಂಸಿ ಕರ್ನಾಟಕ ಕೋ ಆಪ್ ಬ್ಯಾಂಕ್‌ ಮಂಗಲ ಭವನದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಸರ್ಕಾರದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಸಂಪೂರ್ಣ ಸೌಲಭ್ಯಗಳನ್ನು ಕಾಂಗ್ರೆಸ್‌ಗಿಂತ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೇ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು. 

ರಾಜ್ಯದ ಬಿಜೆಪಿ ಕಾರ್ಯಕರ್ತರು, ಅವರ ಕುಟುಂಬದವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಗ್ಯಾರಂಟಿ ಯೋಜನೆಗಳೆ ಕಾರಣವಾಗಿದ್ದು, ಇದನ್ನು ಬಿಜೆಪಿ ವರಿಷ್ಠರು ಅರ್ಥೈಸಿಕೊಳ್ಳಬೇಕು. ಬಿಜೆಪಿಯವರಿಗೆ ಕೇವಲ ಅಧಿಕಾರದ ಆಸೆಯೇ ವಿನಃ ಬಡ ಜನರ ಉದ್ದಾರ ಮಾಡುವುದಾಗಲಿ ಅಥವಾ ಅಭಿವೃದ್ಧಿ ಪರವಾದ ಯಾವ ಚಿಂತನೆಯೂ ಇಲ್ಲ. ಅಧಿಕಾರಕ್ಕೆ ಬರಲು ಹಿಂದುತ್ವ ಹಾಗೂ ಪಾಕಿಸ್ತಾನ್‌ ಅಜೇಂಡಾ ಮುಂದೆ ಜನರನ್ನು ಭಾವನಾತ್ಮಕವಾಗಿ ದಿಕ್ಕು ಬದಲಿಸುತ್ತಾರೆ. 

ಬಿಜೆಪಿಯವರು ಹಿಂದೆ ಜನಪರ ಆಡಳಿತ ನೀಡಲಿಲ್ಲ, ಚುನಾವಣೆ ಬಂದಾಗೆಲ್ಲ ಜಾತಿ- ಧರ್ಮಗಳ ಬಗ್ಗೆ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಬಿಜೆಪಿಯವರು ಇಡೀ ವಿಶ್ವಕ್ಕೆ ಮಾದರಿ ಸಂವಿಧಾನ ನೀಡಿದ ಮಹಾತ್ಮ, ಅವರ ಭಾವಚಿತ್ರವನ್ನು ತಮ್ಮ ಕಚೇರಿಯಿಂದ ಹೊರಗಿಟ್ಟು ಅಪಮಾನಿಸುತ್ತಾರೆ. ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನಡೆಸುವುದನ್ನು ರಾಜ್ಯದ ಜನ ಮೆಚ್ಚಿಕೊಂಡಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ನಡೆಸುವ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಕಾರಣ ಎಲ್ಲ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು, ಮಹಿಳಾ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಾಧನಾ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಪಕ್ಷ ಮತ್ತು ಸರ್ಕಾರದ ಕೈ ಬಲಪಡಿಸಬೇಕು ಎಂದರು.

ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಂಪೂರ್ಣ ಎರಡು ವರ್ಷ ಪೂರೈಸುತ್ತಿದೆ. ಹೀಗಾಗಿ, ಮೇ 20ರಂದು ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕ್ಷೇತ್ರದ ಕಾಂಗ್ರೆಸ್‌ನ ಎಲ್ಲ ಘಟಕಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಈ ಬಾರಿ ಜಿಡಿಪಿ ವಹಿವಾಟು ಕ್ರಮೇಣ ಹೆಚ್ಚಳವಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯವರು ಯಾವತ್ತಿಗೂ ಅಭಿವೃದ್ಧಿಯ ಚಿಂತಕರಲ್ಲ, ಬರೀ ದೇವರು ಧರ್ಮದ ಹೆಸರಲ್ಲಿ ಭಾವನಾತ್ಮನಕವಾಗಿ ಜನರನ್ನು ಸೆಳೆದು ರಾಜಕೀಯ ಲಾಭ ಪಡೆಯೋದೇ ಅವರು ಉದ್ದೇಶ.

 ನಾವು ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರು ನಮ್ಮ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ವಿಫಲರಾಗಿದ್ದೇವೆ. ನಮ್ಮ ಸಾಧನೆಗಳ ಬಗ್ಗೆ ಪ್ರಚಾರ ಕೈಗೊಳ್ಳುವುದಿಲ್ಲ. ಇದು ನಮ್ಮ ಶಕ್ತಿಗೆ ಮಾರಕವಾಗಿ ಪರಿಣಮಿಸುತ್ತದೆ. ಆದರೆ, ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾಧನೆಕ್ಕಿಂತ ಪಕ್ಷದ ಸಿದ್ದಾಂತವನ್ನು ಚವಟುವಟಿಕೆಗಳನ್ನು ಪ್ರಚಾರ ಪಡೆದು ಜನರಿಗೆ ಹತ್ತಿರವಾಗುತ್ತಾರೆ ಎಂದು ಬಿಜೆಪಿಯನ್ನು ಟೀಕಿಸಿದರು.

ಪಂಚಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ತಾಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ಬಿ.ಎಸ್.ಪಾಟೀಲ, ಎಂ.ಬಿ.ನಾವದಗಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಪಿ.ಎಲ್.ಡಿ ಬ್ಯಾಂಕ್‌ ಅಧ್ಯಕ್ಷ ಬಿ.ಕೆ.ಬಿರಾದಾರ, ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ತಾಲೂಕು ಬ್ಲಾಕ್ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶಳ್ಳಗಿ, ಗೋಪಿ ಮಡಿವಾಳರ, ಸದ್ದಾಂ ಕುಂಟೋಜಿ ಸೇರಿ ಹಲವರು ಉಪಸ್ಥಿತರಿದ್ದರು.

ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಣಕಾಸು ಇಲಾಖೆಯ ಯಾವುದೇ ಪರವಾನಗಿ ಇಲ್ಲದೇ ಎಲ್ಲ ಇಲಾಖೆಯಲ್ಲಿಯೂ ಬೇಕಾಬಿಟ್ಟಿಯಾಗಿ ಅವೈಜ್ಞಾನಿಕ ಕಾಮಗಾರಿಗಳನ್ನು ಮಂಜೂರು ಮಾಡಿ ಸುಮಾರು ₹ 2.20 ಲಕ್ಷ ಕೋಟಿ ಬಿಲ್ ಪಾವತಿ ಮಾಡದೇ ಬಿಟ್ಟು ಹೋಗಿದ್ದರಿಂದ ಆ ಅವೈಜ್ಞಾನಿಕ ಬಾಕಿ ಬಿಲ್‌ಗಳನ್ನು ಇಂದು ಪಾವತಿಸಬೇಕಾದ ಸ್ಥಿತಿ ನಮ್ಮ ಸರ್ಕಾರಕ್ಕೆ ಬಂದಿದೆ. ಆದ್ರೆ, ಪಂಚಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಸಿ.ಎಸ್‌.ನಾಡಗೌಡ, ಶಾಸಕ

Read more Articles on