ಸಾರಾಂಶ
ರಾಮನಗರ: ಮುಂಬರುವ ಲೋಕಸಭಾ ಚುನಾವಣೆಗೆ ಅಡಿಪಾಯ ಎಂದೇ ಭಾವಿಸಲಾಗಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿಯೇ ಎನ್ ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟು ಕಗ್ಗಂಟಾಗಿಸಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಪುಟ್ಟಣ್ಣ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಲು ಆಕಾಂಕ್ಷಿತರಾಗಿದ್ದ ಜೆಡಿಎಸ್ ಕಾನೂನು ಘಟಕ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆದರೆ, ದೋಸ್ತಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳು ರಂಗನಾಥ್ ಅವರ ಓಟಕ್ಕೆ ಬ್ರೇಕ್ ಹಾಕಿದಂತಾಗಿದೆ.ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಮೈತ್ರಿಕೂಟದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಮೊದಲು ಪಕ್ಷದ ಹಿರಿಯರು ಮತ್ತು ಪದಾಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಆನಂತರ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು.
ಆದರೀಗ ಉಪ ಚುನಾವಣೆ ಘೋಷಣೆಯಾಗಿ ನಾಲ್ಕು ದಿನಗಳು ಕಳೆದರೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಕೂಟದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅಥವಾ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಅಲ್ಲದೆ, ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರ ಸಬೆಯಲ್ಲಿ ಬೆಂಗಳೂರು ನಗರ ಘಟಕ ಅಧ್ಯಕ್ಷ ಎಚ್ .ಎಂ.ರಮೇಶ್ ಗೌಡರವರು ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಸ್ಪರ್ಧಿಸುತ್ತಿದ್ದಾರೆ ಎಂದು ಘೋಷಣೆ ಮಾಡಿದ್ದರು. ಇದು ಕಮಲ ಪಾಳಯದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ:
ಜೆಡಿಎಸ್ ಮೈತ್ರಿಧರ್ಮ ಪಾಲನೆ ಉಲ್ಲಂಘನೆ ಮಾಡಿದ ಕಾರಣಕ್ಕೆ ಬಿಜೆಪಿ ಪಕ್ಷ ಮುಖ್ಯ ವಕ್ತಾರ ಅಶ್ವತ್ಥ್ ನಾರಾಯಣಗೌಡ ಅಥವಾ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲಕ್ಕೂ ಕಾರಣವಾಗಿದೆ.ಉಭಯ ಪಕ್ಷಗಳ ವಲಯದಲ್ಲಿ ಈ ಹಿಂದೆ ಹರಿದಾಡುತ್ತಿದ್ದ ಮಾಹಿತಿ ಪ್ರಕಾರ ಬಿಜೆಪಿ ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಜೆಡಿಎಸ್ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಂಚಿಕೊಂಡು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿದ್ದವು. ಇದಕ್ಕೆ ಪೂರಕವಾಗಿಯೇ ಎರಡೂ ಪಕ್ಷಗಳಲ್ಲಿ ಸಿದ್ಧತೆಗಳು ನಡೆದಿದ್ದವು.
ಶಿಕ್ಷಕರ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಎ.ಪಿ.ರಂಗನಾಥ್ ಅಭ್ಯರ್ಥಿಯಾದರೆ ಸುಲಭವಾಗಿ ಗೆಲ್ಲಬಹುದೆಂಬುದು ಜೆಡಿಎಸ್ ವರಿಷ್ಠರ ಲೆಕ್ಕಾಚಾರ. ಆದರೆ, ಜೆಡಿಎಸ್ ನ ಈ ಲೆಕ್ಕಾಚಾರಕ್ಕೆ ಬಿಜೆಪಿ ವಲಯದಲ್ಲಿ ತೀವ್ರ ವಿರೋಧವಿದೆ. ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನಷ್ಟೇ ಬಿಜೆಪಿಗೂ ಪ್ರಾಬಲ್ಯವಿದೆ. ಹಾಗಾಗಿ ಕಾಂಗ್ರೆಸ್ ಜೊತೆಗೆ ನೇರ ಹಣಾಹಣಿ ನಡೆಸಲು ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸಿದೆ.ಮುಂದಿನ ವಾರದೊಳಗೆ ಮೈತ್ರಿ ಅಭ್ಯರ್ಥಿ ಫೈನಲ್:
ಬಿಜೆಪಿ - ಜೆಡಿಎಸ್ ವರಿಷ್ಠ ಮಟ್ಟದಲ್ಲಿ ಅಭ್ಯರ್ಥಿ ಘೋಷಣೆ ಆಗಬೇಕಿತ್ತು. ಅದಕ್ಕೂ ಮೊದಲೇ ಜೆಡಿಎಸ್ ಮುಖಂಡರು ರಂಗನಾಥ್ ಅವರನ್ನು ಮೈತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿರುವುದರಿಂದ ಕಮಲ ಪಾಳಯದ ನಾಯಕರನ್ನು ಕೆರಳಿಸಿದೆ. ಈ ಕಾರಣದಿಂದಾಗಿಯೇ ಮೈತ್ರಿ ನಿರ್ಧಾರವನ್ನು ವರಿಷ್ಠರು ಮಾಡುತ್ತಾರೆಂದು ದೆಹಲಿಯತ್ತ ಬೊಟ್ಟು ತೋರಿಸುತ್ತಿರುವ ಬಿಜೆಪಿ ನಾಯಕರು ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಗೆ ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರದ ವಿರುದ್ಧ ಸಮರ ಸಾರಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ಸೇರಿದಂತೆ ಎದುರಾಗುವ ಎಲ್ಲ ಚುನಾವಣೆಗಳಲ್ಲಿಯೂ ದೋಸ್ತಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮೈತ್ರಿಯನ್ನು ಗಟ್ಟಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಅಡಿಪಾಯ ಹಾಕಬೇಕಿದೆ.
ಈ ಹಿನ್ನೆಲೆಯಲ್ಲಿ ನಿವೃತ್ತಿಯಿಂದ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ ಹಾಗೂ ರಾಜೀನಾಮೆ ಕಾರಣ ನಡೆಯುತ್ತಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಮೈತ್ರಿ ಸಾಧಿಸುವ ಕುರಿತು ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರು ಮುಂದಿನ ವಾರದೊಳಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಎ.ಪಿ.ರಂಗನಾಥ್ ದೋಸ್ತಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ರಾಜ್ಯ ನಾಯಕರೊಬ್ಬರು ಪ್ರತಿಕ್ರಿಯಿಸಿದರು.ಬಾಕ್ಸ್ ...............ದಳ - ಕಮಲ ದೋಸ್ತಿ ಲೋಕ ಸಮರಕ್ಕಷ್ಟೇ ಸೀಮಿತವೇ ?
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಿ ವಿಜಯ ಪತಾಕೆ ಹಾರಿಸಲು ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಈ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವೇ ಅಥವಾ ಎಲ್ಲ ಚುನಾವಣೆಗಳಿಗೂ ಅನ್ವಯವಾಗುತ್ತದೆಯೇ ಎಂಬುದು ಖಾತ್ರಿಯಾಗಿಲ್ಲ.ಉಭಯ ಪಕ್ಷಗಳ ವರಿಷ್ಠರಲ್ಲಿ ದೋಸ್ತಿ ಮೂಡಿದೆ. ಆದರೆ, ತಳಮಟ್ಟದಲ್ಲಿ ಕಾರ್ಯಕರ್ತರ ಮಧ್ಯೆ ಇನ್ನೂ ಸಹಮತ ಮೂಡಿಲ್ಲ. ಏಕಸೂತ್ರದ ಆಧಾರದ ಮೇಲೆಯೇ ಎಲ್ಲ ಚುನಾವಣೆಗಳಿಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗದೆ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳು ಪ್ರತ್ಯೇಕ ಸ್ಪರ್ಧೆಗೆ ಮುಂದಾಗಿವೆ ಎನ್ನಲಾಗುತ್ತಿದೆ.
ಕೋಟ್ ............ಸಂಸತ್ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತನಾಗಿದ್ದೇನೆ. ಆದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಗೆ ನನ್ನ ಮತ್ತು ಮಾಜಿ ಶಾಸಕ ಪ್ರೀತಂಗೌಡ ಹೆಸರನ್ನು ಕೇಂದ್ರ ಘಟಕಕ್ಕೆ ಕಳುಹಿಸಿದ್ದಾರೆ. ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಲು ಪಕ್ಷ ತೀರ್ಮಾನಿಸಿದೆ ಎಂದು ವರಿಷ್ಠರು ತಿಳಿಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಸ್ಪರ್ಧೆ ಮಾಡುತ್ತೇನೆ.
- ಅಶ್ವತ್ಥ ನಾರಾಯಣಗೌಡ, ರಾಜ್ಯ ಮುಖ್ಯ ವಕ್ತಾರರು, ಬಿಜೆಪಿ20ಕೆಆರ್ ಎಂಎನ್ 1,2,3,4.ಜೆಪಿಜಿ
1.ಬಿಜೆಪಿ ಲೋಗೊ2.ಜೆಡಿಎಸ್ ಲೋಗೊ
3.ಅಶ್ವತ್ಥ ನಾರಾಯಣಗೌಡ4.ಎ.ಮಂಜುನಾಥ್
------------------------