ಸಾರಾಂಶ
ಶಿವಮೊಗ್ಗ : ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಗೆಲುವು ನಿಶ್ಚಿತ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಹೊಸದಲ್ಲ 1983ರಲ್ಲಿ ಶಿವಮೊಗ್ಗದಲ್ಲಿ ಆನಂದರಾವ್ ಸ್ಪರ್ಧೆ ಮಾಡಿದ್ದಾಗಲೂ ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. ಆದರೆ, ಅನಿವಾರ್ಯ ಕಾರಣದಿಂದ ಮೈತ್ರಿ ಮುರಿದುಬಿತ್ತು. ದೇಶ, ರಾಜ್ಯ, ನಾಗರಿಕರ ಹಿತದೃಷ್ಟಿಯಿಂದ ಮತ್ತೆ ಮೈತ್ರಿ ಮಾಡಿಕೊಂಡಿದ್ದೇವೆ. ಅನೇಕ ಯೋಜನೆ ರೂಪಿಸಿಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದೇವೆ ಎಂದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು, ಬಿ.ವೈ.ರಾಘವೇಂದ್ರ ಗೆಲ್ಲುವುದೊಂದೇ ನಮ್ಮ ಗುರಿಯಾಗಿದೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ 1.50 ಲಕ್ಷ ಮತಗಳು ದೊರೆಯಲಿದೆ. ಭದ್ರಾವತಿಯಲ್ಲೂ ಕೂಡ ಲೀಡ್ ಸಿಗಲಿದೆ. ಈಗ ಯಾವುದೇ ಗೊಂದಲವಿಲ್ಲ. ಜೆಡಿಎಸ್ ನಾಯಕರು, ಕಾರ್ಯಕರ್ತರು ದೇಶಕ್ಕೆ ಒಳ್ಳೆದಾಗಲು ಒಟ್ಟಾಗಿದ್ದೇವೆ. ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಮೋದಿಯವರನ್ನು ಪ್ರಧಾನಿ ಮಾಡಲು ಇಷ್ಟಪಟ್ಟು ರಾಘವೇಂದ್ರರನ್ನು ಗೆಲ್ಲಿಸಲಿದ್ದಾರೆ. ವಿಶ್ವಾಸವಿದೆ ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ನಾಗರಿಕರ ಹಿತ ಕಾಪಾಡುವ ದೃಷ್ಟಿಯಿಂದ ಈ ದೇಶದಲ್ಲಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕೆಂಬ ದೃಷ್ಟಿಯಿಂದ ಹಿರಿಯರ ತೀರ್ಮಾನದಂತೆ ಜೆಡಿಎಸ್ ಬೇಷರತ್ ಹೊಂದಾಣಿಕೆ ಮಾಡಿಕೊಂಡಿದ್ದು, ಬಿ.ವೈ.ರಾಘವೇಂದ್ರ ಅವರ ಗೆಲುವಿಗೆ ಕಾರಣೀಕರ್ತರಾಗುತ್ತೇವೆ ಎಂದರು.
ಯಾವುದೇ ಕಾರಣಕ್ಕೂ ಈ ಬಾರಿ ಶಿವಮೊಗ್ಗ ನಗರದಿಂದ ಅತ್ಯಂತ ಹೆಚ್ಚು ಅಂತರದ ಮತಗಳನ್ನು ರಾಘವೇಂದ್ರ ಪಡೆಯಲಿದ್ದಾರೆ. ಸಾಕಷ್ಟು ಸಭೆಗಳು ಆಗಿವೆ. ನಗರದಲ್ಲಿ ಜಂಟಿ ಪ್ರಚಾರ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಹೆಚ್ಚಿನ ಅಂತರದಿಂದ ಗೆಲುವು ನಮ್ಮದೇ. ಯಾವುದೇ ಅನುಮಾನಗಳು ಬೇಡ. ಗೊಂದಲಗಳು ಆರಂಭದಲ್ಲಿ ಇರುತ್ತೆ. ಅದೆಲ್ಲ ಈಗ ಬಗೆಹರಿದಿವೆ. ಮುಂದಿನ ಸ್ಥಳೀಯ ಚುನಾವಣೆಗಳಲ್ಲೂ ಕೂಡ ಈ ಮೈತ್ರಿ ಮುಂದುವರೆಯಲಿದೆ ಎಂದರು.
ಈಶ್ವರಪ್ಪ ಭ್ರಮೆಯಲ್ಲಿದ್ದಾರೆ. ಅವರು ಯಾರದ್ದೋ ಚದುರಂಗದಾಟಕ್ಕೆ ಕಾಯಿನ್ ಆಗ್ತಿದ್ದಾರೆ. ಇದು ನನ್ನ ಸ್ವಂತದ ಅಭಿಪ್ರಾಯ. ಜೆಡಿಎಸ್ ಸಂಪೂರ್ಣ ಬೆಂಬಲ ನೀಡುವುದಾಗಿ ಈಶ್ವರಪ್ಪ ಹೇಳುತ್ತಿದ್ದಾರೆ. ಅದೆಲ್ಲ ಸುಳ್ಳು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಎಸ್. ಜ್ಞಾನೇಶ್ವರ್, ನರಸಿಂಹ ಗಂಧದಮನೆ, ವಿನಯ್, ಎನ್.ಜಿ. ನಾಗರಾಜ್, ಪುಷ್ಪಾ, ಕೃಷ್ಣ, ಬೊಮ್ಮನಕಟ್ಟೆ ಮಂಜುನಾಥ, ವಿನ್ಸೆಂಟ್ ರೋಡ್ರಿಗಸ್ ಮತ್ತಿತರರು ಇದ್ದರು.