ಬಿಜೆಪಿ-ಜೆಡಿಎಸ್ ಒಟ್ಟಾಗಿ ಮತ್ತೊಮ್ಮೆ ಸುವರ್ಣ ಕಾಲ ಸರ್ಕಾರ ರಚನೆ ಮಾಡುತ್ತೇವೆ : ಎಚ್ಡಿಕೆ

| Published : Nov 12 2024, 01:30 AM IST / Updated: Nov 12 2024, 11:05 AM IST

ಸಾರಾಂಶ

ಚನ್ನಪಟ್ಟಣ: ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಮತ್ತೊಮ್ಮೆ ಸುವರ್ಣ ಕಾಲ ಸರ್ಕಾರವನ್ನು ರಚನೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.

ಚನ್ನಪಟ್ಟಣ: ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಮತ್ತೊಮ್ಮೆ ಸುವರ್ಣ ಕಾಲ ಸರ್ಕಾರವನ್ನು ರಚನೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.

ಚನ್ನಪಟ್ಟಣದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಬಿಜೆಪಿ ಜೆಡಿಎಸ್ ಮೈತ್ರಿ ಹಾಲು ಜೇನಿನಂತೆ ಬೆರೆತು ಹೋಗಿದ್ದು, ಅದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ನಾಡಿನ ಜನರ ಬದುಕನ್ನು ಸರಿಪಡಿಸುವ ನಿಟ್ಟಿನಲ್ಲಿ ಎನ್‌ಡಿಎ ಮೈತ್ರಿಕೂಟ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ ಎಂದರು.

ಬಿಜೆಪಿ ಜತೆ ಸರ್ಕಾರ ಮಾಡಿದ್ದು ಸುವರ್ಣ ಕಾಲ. ಅಂದು ಬಿಜೆಪಿ ನಮಗೆ ಆಸರೆಯಾಗಿತ್ತು. 20 ತಿಂಗಳ ಆಡಳಿತದಲ್ಲಿ ಜನಪರ ಕೆಲಸಗಳನ್ನು ಯಡಿಯೂರಪ್ಪ ಅವರ ಸಹಕಾರದಿಂದ ಮಾಡಿದೆ. ಇವತ್ತು ನನಗೆ ರಾಜಕೀಯವಾಗಿ ಹೆಸರು ಬಂದಿದೆ ಎಂದರೆ ಅದಕ್ಕೆ ಯಡಿಯೂರಪ್ಪ ಪಾಲು ಇದೆ ಎಂದು ಹೇಳಿದರು.

ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ನಾನು ಪ್ರಾಮಾಣಿಕವಾಗಿ ತೀರ್ಮಾನ ಮಾಡಿದ್ದೆ. ಅದನ್ನು ತಪ್ಪಿಸಲು ನಡೆದ ಘಟನೆಗಳನ್ನು ನಾನು ಬಹಿರಂಗ ಪಡಿಸುವುದಿಲ್ಲ. ಆದರೆ, ಕೆಲವರು ಮಾಡಿದ ಕೃತ್ಯದಿಂದ ನಾನು ಹದಿನಾಲ್ಕು ವರ್ಷಗಳ ಕಾಲ ವನವಾಸ ಅನುಭವಿಸಿದೆ ಎಂದು ಭಾವುಕರಾದರು.

ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದ್ದಿದ್ದರೆ ಅಂದೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತಿತು. ಆದರೆ, ವಿಧಿ ಆಟದ ಮುಂದೆ ನಮ್ಮದೇನು ನಡೆಯಲಿಲ್ಲ. ರೈತರ ಸಾಲಮನ್ನಾ ಮಾಡಿದ ನೆಮ್ಮದಿ ಬಿಟ್ಟರೆ, ಕಾಂಗ್ರೆಸ್‌ನೊಂದಿಗಿನ ಮೈತ್ರಿ ಸರ್ಕಾರದಿಂದ ಆದಷ್ಟು ಮಾನಸಿಕ ಹಿಂಸೆ ಮತ್ಯಾವುದು ಇರಲಿಲ್ಲ ಎಂದು ಹೇಳಿದರು.

ನಿಖಿಲ್ ವಿರುದ್ಧ ಕಾಂಗ್ರೆಸ್ ಕುತಂತ್ರ :

ನಿಖಿಲ್ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಇಡೀ ಸರ್ಕಾರ ಷಡ್ಯಂತ್ರ ರೂಪಿಸಿದೆ. ಆದರೆ, ದುರಾಲೋಚನೆ ಫಲಕಾರಿ ಆಗುವುದಿಲ್ಲ. ಜೆಡಿಎಸ್ ಪಕ್ಷವನ್ನು ಸರ್ವನಾಶ ಮಾಡಲು ಕಾಂಗ್ರೆಸ್ ಸಂಚು ರೂಪಿಸುತ್ತಲೇ ಇದೆ. ಅವರ ಕನಸು ಎಂದಿಗೂ ಈಡೇರುವುದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದ ಚುನಾವಣೆ ವ್ಯವಸ್ಥೆ ಬಗ್ಗೆ ನಾನು ವಿಧಾನಮಂಡಲದಲ್ಲಿ ಮಾತನಾಡಿದ್ದ ಆಡಿಯೋವನ್ನೇ ತಿರುಚಿ, ಅಪಪ್ರಚಾರ ನಡೆಸಲಾಗುತ್ತಿದೆ. ನಾನು ಜನರನ್ನೂ ಲೂಟಿ ಮಾಡಿಲ್ಲ, ಜನರನ್ನೇ ಪೂಜೆ ಮಾಡುತ್ತೇನೆ. ನಾನು ಕಾಂಗ್ರೆಸ್ ನೋಡಿ ಕಲಿಯುವುದು ಏನು ಇಲ್ಲ ಎಂದರು.

ಕಾಂಗ್ರೆಸ್‌ನ ಭ್ರಷ್ಟಚಾರ ತಡೆಗಟ್ಟಲು ನಿಖಿಲ್‌ ಕುಮಾರಸ್ವಾಮಿಗೆ ಮತದಾನ ಮಾಡಿ. ಬಿಜೆಪಿಯ ಎಲ್ಲ ಕಾರ್ಯಕರ್ತರು ನಿಖಿಲ್ ಪರ ಕೆಲಸ ಮಾಡಬೇಕು ಎನ್ನುವ ಸಾಲುಗಳು ನಡ್ಡಾರವರ ಆಡಿಯೋದಲ್ಲಿ ಇದೆ. ನಮ್ಮ ಮೈತ್ರಿಯ ಶಕ್ತಿಯನ್ನು, ಬಿಜೆಪಿ ನಾಯಕರ ಪ್ರೀತಿಯನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ವಿ.ಸೋಮಣ್ಣ, ಪ್ರತಿಪಕ್ಷ ನಾಯಕ ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಡಾ.ಕೆ.ಸಿ.ನಾರಾಯಣ ಗೌಡ, ಸಾ ರಾ ಮಹೇಶ್,ಎನ್ .ಮಹೇಶ್, ಬಂಡೆಪ್ಪ ಕಾಶೆಂಪೂರ್, ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಕರೆಮ್ಮ ನಾಯಕ್, ರಾಮನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಆರ್ .ರವಿಕುಮಾರ್, ಭೋಜೆಗೌಡ, ಮಾಜಿ ಶಾಸಕರಾದ ಹೆಚ್.ಎಂ.ರಮೇಶ್ ಗೌಡ, ನಿಸರ್ಗ ನಾರಾಯಣಸ್ವಾಮಿ, ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ ಜಯಮುತ್ತು ಉಪಸ್ಥಿತರಿದ್ದರು.

ನನ್ನ ಮೇಲೆಯೇ ಎಫ್‌ಐಆರ್: ಕುಮಾರಸ್ವಾಮಿ ಕಿಡಿ

ನನ್ನ ಮೇಲೆಯೇ ಎಫ್‌ಐಆರ್ ಹಾಕಿ ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ರಾಜ್ಯಪಾಲರ ಕಚೇರಿಯನ್ನು ಶೋಧ ಮಾಡಲು ಮುಂದಾಗಿದ್ದ ಐಪಿಎಸ್ ಅಧಿಕಾರಿ ಬಗ್ಗೆ ನಾನು ಮಾತನಾಡಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದರು.

ಈ ಪ್ರಕರಣದ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ್ದಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ಮೇಲೆ, ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮೇಲೆ ಎಫ್‌ಐಆರ್ ಮಾಡಲಾಗಿದೆ ಎಂದರು.

ಯಡಿಯೂರಪ್ಪ ಅವರ ಮೇಲೂ ಕೇಸ್ ದಾಖಲಾಗಿಸಲಾಗಿದೆ. ವಿರೋಧಿಗಳ ಮೇಲಿನ ಕಾಂಗ್ರೆಸ್ ನಡವಳಿಕೆಗಳು ಅವರ ಪಾಪದ ಕೊಡವನ್ನು ತುಂಬಿಸಿದೆ. ಇದೆಲ್ಲಕ್ಕೂ ಚರಮಗೀತೆ ಹಾಡುವ ಕಾಲ ದೂರವಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಜನರನ್ನು ಲೂಟಿ ಮಾಡಿಲ್ಲ: ಎಚ್ಡಿಕೆ

ಈ ದೇಶದ ಚುನಾವಣೆ ವ್ಯವಸ್ಥೆ ಬಗ್ಗೆ ನಾನು ವಿಧಾನಮಂಡಲದಲ್ಲಿ ಮಾತನಾಡಿದ್ದ ಆಡಿಯೋವನ್ನೇ ತಿರುಚಿ, ಅಪಪ್ರಚಾರ ನಡೆಸಲಾಗುತ್ತಿದೆ. ನಾನು ಜನರನ್ನೂ ಲೂಟಿ ಮಾಡಿಲ್ಲ, ಜನರನ್ನೇ ಪೂಜೆ ಮಾಡುತ್ತೇನೆ. ನಾನು ಕಾಂಗ್ರೆಸ್ ನೋಡಿ ಕಲಿಯುವುದು ಏನು ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಮ್ಮ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸುವುದು. ಹಾಲಿನ ಡೇರಿಗಳಲ್ಲಿಯು ರಾಜಕೀಯ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ನಾಲ್ಕೈದು ಊರಿಗೆ ಬಿಟ್ಟು ಇನ್ನುಳಿದ ಎಲ್ಲ ಊರಿಗೂ ಸಿಮೆಂಟ್ ರಸ್ತೆ ಹಾಕಿಸಿದ್ದೇವೆ. ಹೈ ಮಾಸ್ಕ್ ಲೈಟ್ ಹಾಕಿಸಿದ್ದೇನೆ. ಇದು ನಮ ಸಾಕ್ಷಿ ಗುಡ್ಡೆ, ಕಳೆದ 17 ತಿಂಗಳಿನಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.