ಬಿಜೆಪಿ-ಜೆಡಿಎಸ್‌ನದು ನ್ಯಾಚುರಲ್‌ ಅಲೈಯನ್ಸ್: ಜಗದೀಶ ಶೆಟ್ಟರ್‌

| Published : Apr 05 2024, 01:04 AM IST

ಸಾರಾಂಶ

ರಾಷ್ಟ್ರೀಯ ನಾಯಕರ ಜತೆಗೆ ಮೈತ್ರಿ ಮಾಡಿಕೊಂಡು ನಮ್ಮ‌ ಜತೆ ಜೆಡಿಎಸ್ ಕೈ ಜೋಡಿಸಿದ್ದಾರೆ. ಇದೊಂದು ನ್ಯಾಚುರಲ್ ಅಲೈಯನ್ಸ್ ಎಂದ ಬೆಳಗಾವಿ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರೀಯ ನಾಯಕರ ಜತೆಗೆ ಮೈತ್ರಿ ಮಾಡಿಕೊಂಡು ನಮ್ಮ‌ ಜತೆ ಜೆಡಿಎಸ್ ಕೈ ಜೋಡಿಸಿದ್ದಾರೆ. ಇದೊಂದು ನ್ಯಾಚುರಲ್ ಅಲೈಯನ್ಸ್ ಎಂದ ಬೆಳಗಾವಿ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರ ಸಮನ್ವಯ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ಜೆಡಿಎಸ್ ಕಾಂಗ್ರೆಸ್ ವಿರೋಧಿ ನಿಲುವು ಹೊಂದಿದೆ. ಬಿಜೆಪಿ ಜತೆಗೆ ಜೆಡಿಎಸ್ ಹೊಂದಾಣಿಕೆ ಹೊಸದಲ್ಲ. ಹಿಂದೆಯೂ ಹೊಂದಾಣಿಕೆ ಮಾಡಿಕೊಂಡಿವೆ ಎಂದರು.

ಎನ್‌ಡಿಎ ಒಕ್ಕೂಟದ ಜತೆಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ, ಸ್ಥಳೀಯ ಮಟ್ಟದಲ್ಲಿಯೂ ಜೆಡಿಎಸ್‌ನೊಂದಿಗೆ ಸಮನ್ವಯಸಭೆ ನಡೆಸಲಾಗಿದೆ. ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಿನೊಂದಿಗೆ ಪ್ರಚಾರ ನಡೆಸುತ್ತೇವೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಪಾರ ಗೌರವ ಹೊಂದಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಜೆಡಿಎಸ್‌ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಇದು ನನ್ನ ಕೊನೆಯ ಚುನಾವಣೆವೆಂದು ಕಳೆದ 10 ವರ್ಷಗಳಿಂದ ಹೇಳುತ್ತಿದ್ದಾರೆ. ಇದು ರಾಜಕೀಯದ ಗಿಮಿಕ್. ಮೈಸೂರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡರೇ ಸಿದ್ದರಾಮಯ್ಯನವರು ಸಿಎಂ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಅಲ್ಲಿಯೇ ಬಿಡಾರ ಹೂಡಿ ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಪ್ರಚಾರ ನಡೆಸಿದ್ದಾರೆ ಎಂದು ಲೇವಡಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿವೆ. ಕಾಂಗ್ರೆಸ್‌ ಶಾಸಕರೇ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆ ಜಾತಿ, ಸಮಾಜದ ಮೇಲೆ ನಡೆಯದು. ರಾಷ್ಟ್ರೀಯ ವಿಚಾರಧಾರೆ ಹಾಗೂ ಮೋದಿ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಮೋದಿ ಅವರೇ ನಮ್ಮ ಗ್ಯಾರಂಟಿ ಎಂದು ಗುಡುಗಿದರು.

ಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಅನಿಲ ಬೆನಕೆ, ಮಹಾಂತೇಶ ಕವಟಗಿಮಠ ಮೊದಲಾದವರು ಉಪಸ್ಥಿತರಿದ್ದರು.