ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ/ಶ್ರೀರಂಗಪಟ್ಟಣ
ವಾಲ್ಮೀಕಿ ನಿಗಮದ ಅವ್ಯವಹಾರ, ಮೈಸೂರು ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಗುರುವಾರ 17 ಕಿ.ಮೀ. ಸಾಗಿತು. ತೂಬಿನಕೆರೆಯಿಂದ ಆರಂಭಗೊಂಡ ಆರನೇ ದಿನದ ಪಾದಯಾತ್ರೆ ಶ್ರೀರಂಗಪಟ್ಟಣ ತಲುಪಿದ್ದು, ಅಲ್ಲೇ ಮುಖಂಡರು, ಕಾರ್ಯಕರ್ತರು ವಾಸ್ತವ್ಯ ಹೂಡಿದರು.ಬುಧವಾರ ಸಂಜೆಗೆ ತೂಬಿನಕೆರೆಯ ರೈಟ್ ಓ ಹೋಟೆಲ್‌ನಲ್ಲಿ ತಂಗಿದ್ದ ಪಾದಯಾತ್ರೆ ತಂಡ ಗುರುವಾರ ಬೆಳಗ್ಗೆ 9ಕ್ಕೆ ಪಾದಯಾತ್ರೆಗೆ ಚಾಲನೆ ನೀಡಿತು. ವಿರೋಧಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣಗೌಡ, ಮಾಜಿ ಸಚಿವರಾದ ನಾರಾಯಣಗೌಡ, ರಾಮಚಂದ್ರಪ್ಪ, ಎನ್.ಮಹೇಶ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮುಖಂಡ ಎಸ್.ಸಚ್ಚಿದಾನಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನದ ವೇಳೆ ಶ್ರೀರಂಗಪಟ್ಟಣ ಗಡಿ ಗ್ರಾಮ ಕೋಡಿಶೆಟ್ಟಿಪುರ ಗ್ರಾಮಕ್ಕೆ ಪಾದಯಾತ್ರೆ ಆಗಮಿಸಿತು. ಪಕ್ಷದ ನಾಯಕರನ್ನು ಸ್ವಾಗತಿಸಲು ಎರಡೂ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಭಾರೀ ಗಾತ್ರದ ಹೂವು-ಹಣ್ಣಿನ ಹಾರಗಳನ್ನು ಹಾಕಿ ಸ್ವಾಗತಿಸಿದರು.ನಂತರ ಪಾದಯಾತ್ರೆಯು ಗಣಂಗೂರು, ಗೌಡಹಳ್ಳಿ ಗೇಟ್, ಗೌರಿಪುರ, ಕೆ.ಶೆಟ್ಟಹಳ್ಳಿ ಮಾರ್ಗವಾಗಿ ಸಂಜೆ ವೇಳೆಗೆ ಪಟ್ಟಣ ತಲುಪಿತು. ಹೆದ್ದಾರಿಯ ಎರಡೂ ಕಡೆ ಬೃಹದಾಕಾರದ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳ ನಾಯಕರು ಹಾಗೂ ಪಕ್ಷದ ಚಿಹ್ನೆಯುಳ್ಳ ಕಟೌಟ್‌ಗಳು ರಾರಾಜಿಸುತ್ತಿದ್ದವು.
ಕೇಕ್ ಕತ್ತರಿಸಿ ಸಂಭ್ರಮಿಸಿದ ನಿಖಿಲ್:ಮೈಸೂರು ಚಲೋ ಪಾದಯಾತ್ರೆ 100 ಕಿ.ಮೀ ದೂರ ಕ್ರಮಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಜೊತೆ ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೇಕ್ ಕತ್ತರಿಸಿ, ಸಂಭ್ರಮಿಸಿದರು.
ಬ್ಯಾಂಡ್‌ಸೆಟ್ ಬಾರಿಸಿದ ಅಶೋಕ್: ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ಬ್ಯಾಂಡ್‌ಸೆಟ್ ಮೂಲಕ ಮುಖಂಡರನ್ನು ಸ್ವಾಗತಕೋರಲಾಯಿತು. ಈ ವೇಳೆ ಆರ್.ಅಶೋಕ್ ಸ್ವತಃ ಬ್ಯಾಂಡ್ ಭಾರಿಸುವ ಮೂಲಕ ಗಮನ ಸೆಳೆದರು.ಮಂತ್ರ ಪಠಣ: ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡ ತಾಲೂಕಿನ ಕಿರಂಗೂರು ಗ್ರಾಮದ ಬನ್ನಿಮಂಟದ ಬಳಿ ಮಂತ್ರ ಪಠಿಸುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಸ್ವಾಗತಿಸಿ, ಶ್ರೀ ಮಹಾಲಕ್ಷ್ಮಿ ದೇವಿಯ ಪೋಟೊಗಳನ್ನು ಉಡುಗೊರೆಯಾಗಿ ನೀಡಿದರು.
ತೂಬಿನಕೆರೆಯಿಂದ ಶ್ರೀರಂಗಪಟ್ಟಣ ತಲುಪಿದ ಪಾದಯಾತ್ರೆ ತಂಡ ಸಂಜೆ ಪಟ್ಟಣದಲ್ಲಿ ಬಹಿರಂಗಸಭೆ ನಡೆಸಿತು. ನಂತರ ಅಂಬ್ಲಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿತು.