ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ
ಬಿಜೆಪಿ- ಜೆಡಿಎಸ್‌ನಿಂದ ಅನಗತ್ಯ ವಿಚಾರಗಳಿಗೆ ಕೋಮು ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ. ಧರ್ಮ-ಜಾತಿ ಹೆಸರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಬ್ಲಪ್‌ನಲ್ಲಿ ನಡೆದ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಮಾತನಾಡಿ, ಕಳೆದ ಮೂರು ವರ್ಷದಿಂದ ಜಿಲ್ಲೆಯೊಳಗೆ ಕೋಮು ಗಲಭೆ ಸೃಷ್ಟಿಸಲು ಸತತವಾಗಿ ಪ್ರಯತ್ನಿಸಲಾಗುತ್ತಿದೆ. ವಿಪಕ್ಷಗಳಿಗೆ ಯಾವುದೇ ವಿಷಯ ಇಲ್ಲ. ಅದಕ್ಕಾಗಿ ಧರ್ಮ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ದೂರಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು 50 ಸಾವಿರ ರು. ರೈತರ ಸಾಲಮನ್ನಾ ಮಾಡಿದ್ದೆ ಎಂದು ಸಾರಿ ಸಾರಿ ಹೇಳುತ್ತಿದ್ದರು. ಆದರೆ, ಇಂದಿಗೂ ಕೂಡ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಸ್ಥಿ ಹಣ ಬಾಕಿ ಉಳಿದುಕೊಂಡಿದೆ. ಕುಮಾರಸ್ವಾಮಿ ನಂತರ ಬಂದ ಯಡಿಯೂರಪ್ಪ, ಸದಾನಂದಗೌಡ ಹಾಗೂ ಶೆಟ್ಟರ್ ಅವರೂ ಕೂಡ ಸಹಕಾರ ಬ್ಯಾಂಕ್‌ಗಳಿಗೆ ಹಣ ಕಟ್ಟಲಿಲ್ಲ ಎಂದು ದೂರಿದರು.ಹಣಕಾಸಿನ ಪರಿಸ್ಥಿತಿಯನ್ನು ತಹಬದಿಗೆ ತರುವ ಕೆಲಸವನ್ನು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗಲೇ ಮಾಡಬೇಕಿತ್ತು. ಅವರು ಆ ಕೆಲಸ ಮಾಡದಿರುವುದರಿಂದ ಆ ಸಾಲವನ್ನೂ ಕಟ್ಟುವುದಕ್ಕೆ ಸಿದ್ದರಾಮಯ್ಯನವರೇ ಬರಬೇಕಿದೆ ಎಂದರು.
ಪ್ರಕೃತಿ ಕೂಡ ಈ ಸಲ ಕೃಷಿ ಚಟುವಟಿಕೆಗಳಿಗೆ ನೆರವಾಗಿದ್ದು, ಮಳೆ ಹಾನಿ ಪ್ರದೇಶಗಳಲ್ಲಿ ಸರ್ವೇ ಮಾಡಿ 10 ದಿನಗಳೊಳಗೆ ವರದಿ ನೀಡಿ 11 ನೇ ದಿನದಿಂದ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಡಿಸಿ, ಸಿಇಒಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಬೆಳೆ ಪರಿಹಾರಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ನಾಲಾ ಆಧುನೀಕರಣಕ್ಕೆ 300 ಕೋಟಿ ರು: ನರೇಂದ್ರಸ್ವಾಮಿಮಂಡ್ಯ/ಮಳವಳ್ಳಿ:
ರಾಜ್ಯ ಸರ್ಕಾರ ಮಳವಳ್ಳಿ ಕ್ಷೇತ್ರದ ನಾಲಾ ಆಧುನೀಕರಣ ಕಾಮಗಾರಿಗೆ 300 ಕೋಟಿ ರು. ಬಿಡುಗಡೆ ಮಾಡಲು ಅನುಮತಿ ನೀಡಿದೆ ಎಂದು ಶಾಸಕ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಬ್ಲಪ್‌ನಲ್ಲಿ ನಡೆದ ಗಗನಚುಕ್ಕಿ ಜಲಪಾತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ 600 ಕೋಟಿ ರು. ವೆಚ್ಚದಲ್ಲಿ ಹನಿ ನೀರಾವರಿಗೆ ಅನುಮತಿ ನೀಡಿದ್ದರು. ಈ ಯೋಜನೆ ಈಗ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಜೊತೆಗೆ ಟನಲ್ ಅಕ್ವೇರಿಯಂ ಶಂಕುಸ್ಥಾಪನೆಯನ್ನು ಅವರಿಂದಲೇ ನೆರವೇರಿಸಲಾಗುವುದು ಎಂದರು.
ಮಳವಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರೂ ಎಲ್ಲದ್ದಕ್ಕೂ ಅನುಮೋದನೆ ನೀಡಿ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪ್ರಶಂಶೆ ವ್ಯಕ್ತಪಡಿಸಿದರು.